
ಮಡಿಕೇರಿ ಡಿ.24 NEWS DESK : ಕನ್ನಡ ಮತ್ತು ಸಂಸ್ಕೃತಿ ನಿರ್ದೇಶನಾಲಯ ಮತ್ತು ಮೈಸೂರಿನ ಭಾರತೀಯ ಭಾಷೆಗಳ ಕೇಂದ್ರ ಸಂಸ್ಥೆ, ಈ ಎರಡು ಸಂಸ್ಥೆಗಳು ಒಟ್ಟಾಗಿ ನವೆಂಬರ್, 01, 1985 ರಿಂದ ಕರ್ನಾಟಕದಲ್ಲಿರುವ ಕನ್ನಡ ಬಾರದ ಎಲ್ಲಾ ಸರ್ಕಾರಿ ನೌಕರರಿಗೆ ಹನ್ನೆರಡು ತಿಂಗಳುಗಳ ಅಂಚೆ ಮೂಲಕ ಕನ್ನಡ ಶಿಕ್ಷಣ ಯೋಜನೆಯೊಂದನ್ನು ನಡೆಸುತ್ತಿವೆ. ಇದಕ್ಕೆ ಕರ್ನಾಟಕದಲ್ಲಿರುವ ಎಲ್ಲಾ ನಗರಸಭೆ, ಕ.ವಿ.ಪ್ರ.ನಿ.ನಿ, ಕೆಎಸ್‍ಆರ್‍ಟಿಸಿ, ವಿಶ್ವವಿದ್ಯಾಲಯ, ಶಾಲಾ-ಕಾಲೇಜುಗಳು ಮತ್ತಿತರ ಸರ್ಕಾರಿ ಅನುದಾನ ಪಡೆಯುವ ಸಂಸ್ಥೆಗಳ ನೌಕರರು ಮತ್ತು ಎಲ್ಲಾ ರಾಷ್ಟ್ರೀಕೃತ ಬ್ಯಾಂಕುಗಳ ನೌಕರರು ಸಹ ನೋಂದಾಯಿಸಿಕೊಳ್ಳಬಹುದು. ನೋಂದಣಿತರು ಶುಲ್ಕ ಕೊಡಬೇಕಿಲ್ಲ. ಕರ್ನಾಟಕದ ಸರ್ಕಾರಿ ನೌಕರರು ಸಂಪರ್ಕ ಶಿಬಿರ ಹಾಗೂ ಪರೀಕ್ಷೆಗಳಿಗೆ ಹಾಜರಾಗುವಾಗ ಅವರ ಕಚೇರಿ ಗೈರುಹಾಜರಿಯನ್ನು ಅನ್ಯಕಾರ್ಯ ನಿಮಿತ್ತ ಎಂದು ಪರಿಗಣಿಸಲಾಗುವುದು. ಅಂಚೆ ಮೂಲಕ ಕನ್ನಡ ಶಿಕ್ಷಣ ಯೋಜನೆಗೆ ನೋಂದಾಯಿಸಿಕೊಂಡು ಉತ್ತೀರ್ಣರಾದವರಿಗೆ ಕರ್ನಾಟಕ ಲೋಕಸೇವಾ ಆಯೋಗದ ಕನ್ನಡ ಪರೀಕ್ಷೆಯಿಂದ ಕರ್ನಾಟಕ ಸರ್ಕಾರದ ಅಧಿಸೂಚನೆಯಂತೆ ವಿನಾಯಿತಿಯಿದೆ. ಈ ಯೋಜನೆಯನ್ನು ಈಗ ಸಾರ್ವಜನಿಕರಿಗೂ ವಿಸ್ತರಿಸಲಾಗಿದೆ. ಇವರು ಎಸ್‍ಎಸ್‍ಎಲ್‍ಸಿ ಪರೀಕ್ಷೆಯಲ್ಲಿ ಉತ್ತೀರ್ಣರಾಗಿರಬೇಕು. ವಯೋಮಿತಿ 18 ರಿಂದ 50 ವರ್ಷದೊಳಗಿರಬೇಕು. ಆಸಕ್ತರು ಭರ್ತಿ ಮಾಡಿದ ಅರ್ಜಿಯ ಜೊತೆಯಲ್ಲಿ ರೂ.250 ಡಿಮ್ಯಾಂಡ್ ಡ್ರಾಫ್ಟ್‍ನ್ನು ಕಳುಹಿಸಿಕೊಡಬೇಕು. ನೋಂದಣಿತರಿಗೆ ಇಪ್ಪತ್ತು ಪಾಠಾವಳಿಗಳನ್ನು ಕಳುಹಿಸಿಕೊಡಲಾಗುವುದು. ತರಬೇತಿ ಮತ್ತು ಸಂಪರ್ಕ ಶಿಬಿರದ ಅಂತ್ಯದಲ್ಲಿ ಪರೀಕ್ಷೆಗಳನ್ನು ನಡೆಸಲಾಗುವುದು. 39 ನೇ ತಂಡದ ತರಬೇತಿಯು 2026 ರ ಜನವರಿಯಿಂದ ಆರಂಭವಾಗುತ್ತದೆ. ಅರ್ಜಿ ನಮೂನೆ ಮತ್ತು ತರಬೇತಿ ವಿವರಗಳನ್ನು ಪ್ರಭಾರಿ ಅಧಿಕಾರಿ, ಅಂಚೆ ಮೂಲಕ ಕನ್ನಡ ಶಿಕ್ಷಣ ಯೋಜನೆ, ಭಾರತೀಯ ಭಾಷೆಗಳ ಕೇಂದ್ರ ಸಂಸ್ಥೆ, ಮಾನಸಗಂಗೋತ್ರಿ, ಮೈಸೂರು-570006, ದೂ.ಸಂ. 0821-2345128 ಇವರಿಗೆ ಐದು ರೂ. ಅಂಚೆ ಚೀಟಿಯನ್ನು ಹಚ್ಚಿದ ಸ್ವವಿಳಾಸಿತ ಲಕೋಟೆಯನ್ನು ಕಳುಹಿಸಿ ಪಡೆದುಕೊಳ್ಳಬಹುದು. ಭರ್ತಿ ಮಾಡಿದ ಅರ್ಜಿಗಳು ಪ್ರಭಾರಿ ಅಧಿಕಾರಿಯವರಿಗೆ 2026 ರ ಜನವರಿ, 10 ರೊಳಗೆ ತಲುಪಬೇಕು ಎಂದು ಮೈಸೂರು ಮಾನಸಗಂಗೋತ್ರಿ ಭಾರತೀಯ ಭಾಷಾ ಸಂಸ್ಥಾನ ಅಂಚೆ ಮೂಲಕ ಕನ್ನಡ ಶಿಕ್ಷಣ ಯೋಜನೆಯ ಪ್ರೊಫೆಸರ್ ಮತ್ತು ಉಪ ನಿರ್ದೇಶಕರಾದ ಡಾ.ಪಿ.ಆರ್.ಧರ್ಮೇಶ್ ಫರ್ನಾಂಡಿಜ್ ಅವರು ತಿಳಿಸಿದ್ದಾರೆ.








