
ಮಡಿಕೇರಿ ಜ.10 NEWS DESK : ವಿವಿಧ ಕಾರ್ಮಿಕ ಕಾಯ್ದೆಗಳದಡಿಯಲ್ಲಿ ನೋಂದಣಿಯಾಗಿರುವ ಉದ್ದಿಮೆಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಮಹಿಳಾ ನೌಕರರಿಗೆ ಋತುಚಕ್ರದ ಸಮಯದಲ್ಲಿ ಮಾಸಿಕ ಒಂದು ದಿನದ ವೇತನ ಸಹಿತ ರಜೆ ಸೌಲಭ್ಯವನ್ನು ಉದ್ಯೋಗದಾತರು ನೀಡಬೇಕು ಮತ್ತು ಮಹಿಳಾ ನೌಕರರು ಪಡೆಯಬೇಕು ಎಂದು ಮಡಿಕೇರಿ ವೃತ್ತ, ಮಡಿಕೇರಿಯ ಹಿರಿಯ ಕಾರ್ಮಿಕ ನಿರೀಕ್ಷಕರಾದ ಎಂ.ಎಂ.ಯತ್ನಟ್ಟಿ ಅವರು ತಿಳಿಸಿದ್ದಾರೆ.
ಕಾರ್ಖಾನೆಗಳ ಕಾಯ್ದೆ 1948, ಕರ್ನಾಟಕ ಅಂಗಡಿ ಮತ್ತು ವಾಣಿಜ್ಯ ಸಂಸ್ಥೆಗಳ ಕಾಯ್ದೆ 1961, ತೋಟ ಕಾರ್ಮಿಕರ ಕಾಯ್ದೆ 1951, ಬೀಡಿ ಮತ್ತು ಸಿಗಾರ ಕಾರ್ಮಿಕರ ಕಾಯ್ದೆ 1966 ಹಾಗೂ ಮೋಟಾರು ಸಾರಿಗೆ ಕಾರ್ಮಿಕರ ಕಾಯ್ದೆ 1961ರಡಿ ನೋಂದಣಿಯಾಗಿರುವ ಎಲ್ಲಾ ಕೈಗಾರಿಕೆಗಳು ಹಾಗೂ ಸಂಸ್ಥೆಗಳಲ್ಲಿ ಕಾರ್ಯನಿರ್ವಹಿಸುತ್ತಿರುವ 18 ರಿಂದ 52 ವರ್ಷದ ವಯೋಮಿತಿಯ ಎಲ್ಲಾ ಖಾಯಂ, ಗುತ್ತಿಗೆ ಮತ್ತು ಹೊರಗುತ್ತಿಗೆ ಮಹಿಳಾ ಕಾರ್ಮಿಕರುಗಳಿಗೆ ಅವರ ಋತುಚಕ್ರದ ಸಮಯದಲ್ಲಿ ಪ್ರತಿ ಮಾಸಿಕ ಒಂದು ದಿನದ ರಜೆಯಂತೆ ವಾರ್ಷಿಕ 12 ದಿನಗಳ ವೇತನ ಸಹಿತ ರಜೆಯ ಸೌಲಭ್ಯವನ್ನು ಉದ್ಯೋಗದಾತರು ಒದಗಿಸುವಂತೆ ಸರ್ಕಾರವು ಆದೇಶಿಸಿದ್ದು, ಯಾವುದೇ ವೈದ್ಯಕೀಯ ಪ್ರಮಾಣಪತ್ರ ಒದಗಿಸುವ ಅವಶ್ಯಕತೆ ಇರುವುದಿಲ್ಲ ಎಂದು ಹಿರಿಯ ಕಾರ್ಮಿಕ ನಿರೀಕ್ಷಕರಾದ ಎಂ.ಎಂ.ಯತ್ನಟ್ಟಿ ಅವರು ತಿಳಿಸಿದ್ದಾರೆ.








