
ಮಡಿಕೇರಿ ಜ.10 NEWS DESK : ಕೊಡಗು ಪತ್ರಕರ್ತರ ಸಂಘದ ಕ್ಷೇಮಾಭಿವೃದ್ಧಿ ಸಮಿತಿ ವತಿಯಿಂದ ಜ.18 ರಂದು ನಡೆಯಲಿರುವ “ಸಂಕ್ರಾಂತಿ ಸಂಭ್ರಮ” ಕ್ರಿಕೆಟ್ ಪಂದ್ಯಾವಳಿಯ ಲೋಗೋ ಅನಾವರಣ ನಡೆಯಿತು. ಸುಂಟಿಕೊಪ್ಪ ಸಮೀಪದ 7 ನೇ ಹೊಸಕೋಟೆಯಲ್ಲಿರುವ ನೇಚರ್ ಪಾರ್ಕ್ ಹೋಂ ಸ್ಟೇಯಲ್ಲಿ ನಡೆದ ಸರಳ ಸಮಾರಂಭದಲ್ಲಿ ಲೋಗೋ ಅನಾವರಣ ಮಾಡಲಾಯಿತು. ಈ ಸಂದರ್ಭ ಕೊಡಗು ಪತ್ರಕರ್ತರ ಸಂಘದ ಅಧ್ಯಕ್ಷ ಅನಿಲ್ ಹೆಚ್.ಟಿ., ಸ್ಥಾಪಕಾಧ್ಯಕ್ಷ ಎಸ್.ಎ.ಮುರಳೀಧರ್, ಪ್ರಧಾನ ಕಾರ್ಯದರ್ಶಿ ಸುರೇಶ್ ಬಿಳಿಗೇರಿ, ಖಜಾಂಚಿ ಟಿ.ಕೆ.ಸಂತೋಷ್, ಕ್ಷೇಮಾಭಿವೃದ್ಧಿ ಸಮಿತಿಯ ಅಧ್ಯಕ್ಷ ಜಿ.ವಿ. ರವಿಕುಮಾರ್, ಕಾರ್ಯದರ್ಶಿ ಅರುಣ್ ಕೂರ್ಗ್ ಸೇರಿದಂತೆ ಸಂಘದ ನಿರ್ದೇಶಕರು ಹಾಗೂ ಸದಸ್ಯರು ಉಪಸ್ಥಿತರಿದ್ದರು. ಜ.18 ರ ಭಾನುವಾರದಂದು ಮಡಿಕೇರಿಯ ಜಿಲ್ಲಾ ಕ್ರೀಡಾಂಗಣದಲ್ಲಿ ಆಯೋಜಿಸಲ್ಪಟ್ಟಿರುವ “ಸಂಕ್ರಾಂತಿ ಸಂಭ್ರಮ” ಕ್ರಿಕೆಟ್ ಪಂದ್ಯಾವಳಿಯಲ್ಲಿ ಇದೇ ಮೊದಲ ಬಾರಿಗೆ (ರಾಜಕಾರಣಿಗಳು) ಶಾಸಕಾಂಗ ವರ್ಸಸ್ (ಅಧಿಕಾರಿ ವರ್ಗ) ಕಾರ್ಯಾಂಗದ ನಡುವೆ ಸೌಹಾರ್ದ ಪಂದ್ಯಾವಳಿ ನಡೆಯಲಿದೆ. ಪಂದ್ಯಾವಳಿಯಲ್ಲಿ ಕೊಡಗು ಪತ್ರಕರ್ತರ ಸಂಘದ ” ಹೊನ್ನು, ಸುಗ್ಗಿ, ಸಿರಿ, ಸಮೃದ್ಧಿ” ಹೆಸರಿನ ನಾಲ್ಕು ತಂಡಗಳು ಭಾಗವಹಿಸಲಿವೆ.










