
ಮಡಿಕೇರಿ ಜ.19 NEWS DESK : ವಿರಾಜಪೇಟೆ ತಾಲ್ಲೂಕು ಕಚೇರಿಗೆ ಮುಖ್ಯಮಂತ್ರಿಗಳ ಕಾನೂನು ಸಲಹೆಗಾರರು ಹಾಗೂ ವಿರಾಜಪೇಟೆ ವಿಧಾನಸಭಾ ಕ್ಷೇತ್ರದ ಶಾಸಕ ಅಜ್ಜಿಕುಟ್ಟಿರ ಎಸ್.ಪೊನ್ನಣ್ಣ ಭೇಟಿ ನೀಡಿ ಅಧಿಕಾರಿಗಳ ಸಭೆ ನಡೆಸಿದರು. ಇತ್ತೀಚಿಗೆ ಈಚೂರು ಭಾಗದಲ್ಲಿ ಸಾರ್ವಜನಿಕರ ದೂರು ಬಂದ ಮೇರೆಗೆ ಅಲ್ಲಿಯ ಡಾಂಬರ್ ತಯಾರಕ ಘಟಕಕ್ಕೆ ಭೇಟಿ ನೀಡಿ ಪರಿಶೀಲಿಸಿದ್ದರು. ಆ ಸಂದರ್ಭದಲ್ಲಿ ಗ್ರಾಮಸ್ಥರ ಅಹವಾಲುಗಳನ್ನು ಆಲಿಸಿದ ಶಾಸಕರು, ಜನರ ಸಮಸ್ಯೆಗೆ ಶೀಘ್ರ ಪರಿಹಾರ ಕಂಡುಕೊಳ್ಳುವುದಾಗಿ ಭರವಸೆ ನೀಡಿದ್ದರು. ಆ ಪ್ರಯುಕ್ತ ಇಂದು ವಿರಾಜಪೇಟೆ ತಾಲೂಕು ಕಚೇರಿಯಲ್ಲಿ ಸಂಬಂಧಿಸಿದ ಅಧಿಕಾರಿಗಳೊಂದಿಗೆ ಚರ್ಚಿಸಿ, ಸಾರ್ವಜನಿಕರಿಗೆ ಹಾಗೂ ಪರಿಸರಕ್ಕೆ ಹಾನಿಯಾಗದಂತೆ ಅಗತ್ಯ ಕ್ರಮ ಕೈಗೊಳ್ಳಬೇಕೆಂದು ಸೂಚಿಸಿದರು. ಮೇ 31ರ ಒಳಗಾಗಿ ಈ ಘಟಕದ ಕಾರ್ಯ ಚಟುವಟಿಕೆಯನ್ನು ನಿಲ್ಲಿಸುವಂತೆ ಸೂಚಿಸಲಾಯಿತು. ಇದಕ್ಕೆ ಸ್ಥಳೀಯ ಮಾಲೀಕರುಗಳು ಹಾಗೂ ಸಾರ್ವಜನಿಕರು ಒಪ್ಪಿಗೆ ಸೂಚಿಸಿದ್ದು, ಸಾರ್ವಜನಿಕರ ಮನವಿಗೆ ಸ್ಪಂದಿಸಿ ಪರಿಸರದ ಬಗ್ಗೆ ಕಾಳಜಿ ವ್ಯಕ್ತಪಡಿಸಿದ ಶಾಸಕರ ನಡೆ ಬಗ್ಗೆ ಸಭೆಯಲ್ಲಿ ಪ್ರಶಂಸೆ ವ್ಯಕ್ತವಾಯಿತು. ಈ ಸಂದರ್ಭದಲ್ಲಿ ಜಿಲ್ಲಾಧಿಕಾರಿ ಸೋಮಶೇಖರ್, ಉಪ ವಿಭಾಗಧಿಕಾರಿ ನಿತಿನ್ ಚಕ್ಕಿ, ತಹಸೀಲ್ದಾರ್ ಪ್ರವೀಣ್, ಅಧಿಕಾರಿಗಳು, ಗ್ರಾಮಸ್ಥರು ಹಾಗೂ ಪ್ರಮುಖರು ಉಪಸ್ಥಿತರಿದ್ದರು.









