
ಮಡಿಕೇರಿ ಜ.21 NEWS DESK : ಕೊಡವ ಮಕ್ಕಡ ಕೂಟ ಹೊರ ತಂದಿರುವ ಐಚಂಡ ರಶ್ಮಿ ಮೇದಪ್ಪ ಅವರು ರಚಿಸಿರುವ ನಾಲ್ಕನೇ ಪುಸ್ತಕ “ಪಳೆ ತಾಲೂಕ್” (ಕೊಡವ ಒಕ್ಕಡೊಕ್ಕಡ ಭೀರ್ಯ) ಅಧ್ಯಯನ ಕೃತಿ ಬಿಡುಗಡೆಗೊಂಡಿತು. ನಗರದ ಪತ್ರಿಕಾ ಭವನದಲ್ಲಿ ನಡೆದ ಕಾರ್ಯಕ್ರಮದಲ್ಲಿ ಕಾಫಿ ಬೆಳೆಗಾರರಾದ ಅರೆಯಡ ಕಾಂತಿ ಸೋಮಪ್ಪ ಪುಸ್ತಕ ಬಿಡುಗಡೆಗೊಳಿಸಿ ಶುಭ ಹಾರೈಸಿದರು. “ಪಳೆ ತಾಲೂಕ್” ಕೃತಿಯ ಲೇಖಕಿ ಐಚಂಡ ರಶ್ಮಿ ಮೇದಪ್ಪ ಅವರು ಮಾತನಾಡಿ, “ಪಳೆತಾಲೂಕ್” (ಕೊಡವ ಒಕ್ಕಡೊಕ್ಕಡ ಭೀರ್ಯ) ಪುಸ್ತಕವು ಪಳೆತಾಲೂಕು ಹಾಕಿ ತಂಡದ ಮಾಲೀಕರ ಕನಸಾಗಿದ್ದು, ಅವರ ಸಲಹೆ ಮೇರೆಗೆ ಪುಸ್ತಕವನ್ನು ಬರೆಯಲಾಗಿದೆ. ಈ ಪುಸ್ತಕದಲ್ಲಿ ಪಳೆ ತಾಲೂಕ್‍ನ ಇತಿಹಾಸ ಹಾಗೂ ಕೊಡವ ಒಕ್ಕದ ಬಗ್ಗೆ ವಿವರಿಸಲಾಗಿದೆ. ನಾಪೋಕ್ಲುವಿನಲ್ಲಿರುವ ಪಳೆತಾಲೂಕ್ ನಲ್ಲಿ ಮೂರು ಕೇರಿಗೆ ಸೇರಿದ ಕೊಡವ ಒಕ್ಕ, ಒಕ್ಕ ಕಾರೋಣ, ಮನೆ ಹೆಸರಿನ ಮೂಲ, ಊರ್ಮಂದ್, ನಮ್ಮೆನಾಳ್, ದೇವನೆಲೆ, ಐನ್‍ಮನೆ, ತಕ್ಕಾಮೆ, ದೇವಕಾಡ್, ಅಲ್ಲಿನ ಶಿಕ್ಷಣ ಸಂಸ್ಥೆ, ಹಾಕಿ ಆಟಕ್ಕೆ ಸಾಕ್ಷಿ ಸೇರಿದಂತೆ ಪ್ರತಿಯೊಂದು ವಿಷಯವನ್ನು ಪುಸ್ತಕ ರೂಪದಲ್ಲಿ ಹೊರತರಲಾಗಿದೆ ಎಂದು ಹೇಳಿದರು. ಪಳೆ ತಾಲೂಕನ್ನು ಪ್ರಸ್ತುತ ಹಳೇ ತಾಲ್ಲೂಕು ಎಂದು ಕರೆಯಲಾಗುತ್ತಿದ್ದು, ಪ್ರತಿಯೊಂದು ಪ್ರದೇಶಕ್ಕೂ ಅದರದ್ದೇ ಆದ ಐತಿಹ್ಯ, ಸ್ಥಳ ಪುರಾಣ, ಸ್ವಂತಿಕೆ ಇರುತ್ತದೆ. ಉಚ್ಛಾರಣೆಯಲ್ಲಿ ಬದಲಾವಣೆ ಆದಾಗ ಅದು ಅವುಗಳ ಸ್ವಂತಿಕೆಯನ್ನು ಕಳೆದುಕೊಳ್ಳುತ್ತದೆ. ಆದ್ದರಿಂದ ಪಳೆ ತಾಲೂಕ್ ಅದರ ಮೂಲ ಹೆಸರನ್ನೇ ಉಳಿಸಿಕೊಳ್ಳುವಂತಾಗಲಿ ಎಂದರು. ನಾಪೋಕ್ಲು ಶ್ರೀ ಭಗವತಿ ದೇವಾಲಯದ ಆಡಳಿತ ಮಂಡಳಿಯ ಅಧ್ಯಕ್ಷ ಕುಲ್ಲೇಟಿರ ಶಂಕರಿ ಚಂಗಪ್ಪ ಅವರು ಮಾತನಾಡಿ, ಪಳೆ ತಾಲೂಕ್ ಹಿಂದಿನ ಕಾಲದಲ್ಲಿ ನಾಪೋಕ್ಲು ನಗರಕ್ಕಿಂತ ಹೆಚ್ಚು ಪ್ರಚಾಲಿತದಲ್ಲಿತ್ತು. ಇಲ್ಲಿ ಸಾವಿರಾರು ವರ್ಷಗಳ ಇತಿಹಾಸವಿರುವ ದೇವಾಲಯವಿದ್ದು, ಈ ಪ್ರದೇಶ ತನ್ನದೇ ಆದ ಪ್ರಾಮುಖ್ಯತೆಯನ್ನು ಹೊಂದಿದೆ. ಇಂತಹ ಐತಿಹಾಸಿಕ ಹಿನ್ನೆಲೆಯುಳ್ಳ ಗ್ರಾಮದ ಬಗ್ಗೆ ತಿಳಿದುಕೊಳ್ಳಲು ಪುಸ್ತಕ ಸಹಕಾರಿಯಾಗಿದೆ. ನಶಿಸಿಹೋಗುತ್ತಿರುವ ಇತಿಹಾಸವನ್ನು ಬರಹಗಾರರು ಪುಸ್ತಕದ ರೂಪದಲ್ಲಿ ಪರಿಚಯಿಸಿಸಿದ್ದಾರೆ, ಇದನ್ನು ಸಂಗ್ರಹಿಸಿಡುವುದು ಸೂಕ್ತ ಎಂದು ತಿಳಿಸಿದರು. ಪಳೆ ತಾಲೂಕ್ ಹಾಕಿ ತಂಡದ ಮಾಲೀಕ ಅರೆಯಡ ಶೌರ್ಯ ಸೋಮಯ್ಯ ಅವರು ಮಾತನಾಡಿ, ಪಳೆ ತಾಲೂಕಿನ ಇತಿಹಾಸವನ್ನು ದೇಶಕ್ಕೆ ಪರಿಚಯಿಸುವುದು ನನ್ನ ಅಜ್ಜನ ಕನಸಾಗಿತ್ತು. ಆ ಕನಸನ್ನು ಲೇಖಕಿ ಐಚಂಡ ರಶ್ಮಿ ಮೇದಪ್ಪ ಅವರು ಈಡೇರಿಸಿದ್ದಾರೆ. ತಾನು ಸಾಮಾಜಿಕ ಜಾತಲಾಣದ ಮೂಲಕ ನಾಡಿಗೆ ಪರಿಚಯಿಸುವ ಕೆಲಸ ಮಾಡುತ್ತಿರುವುದಾಗಿ ಹೇಳಿದರು. *125ನೇ ಪುಸ್ತಕ ‘ಸಮಗ್ರ ಸಿರಿ’* ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಕೊಡವ ಮಕ್ಕಡ ಕೂಟದ ಅಧ್ಯಕ್ಷ ಬೊಳ್ಳಜಿರ ಬಿ.ಅಯ್ಯಪ್ಪ ಅವರು ಫೆ.18ಕ್ಕೆ ಕೊಡವ ಮಕ್ಕಡ ಕೂಟ ತನ್ನ 13ನೇ ವಾರ್ಷಿಕೋತ್ಸವವನ್ನು ಆಚರಿಸಿಕೊಳ್ಳತ್ತಿದೆ. ಇದರ ಪ್ರಯುಕ್ತ ಅಂದು ಮೂಕೊಂಡ ಪುಷ್ಪ (ದಮಯಂತಿ) ಪೂಣಚ್ಚ ಅವರ ಕೊಡವ ಮಕ್ಕಡ ಕೂಟದ 124ನೇ ಪುಸ್ತಕ “ನೆನಪಿನ ಅಲೆ” (ವೈಚಾರಿಕ ಕಥಾ ಸಂಕಲನ ಹಾಗೂ 125ನೇ ಪುಸ್ತಕ ಕೊಡಗಿನ ವಿಶೇಷತೆಯ “ಸಮಗ್ರ ಸಿರಿ” ಪುಸ್ತಕವನ್ನು ಲೋಕಾರ್ಪಣೆಗೊಳಿಸಲಾಗುವುದು ಎಂದರು. ಕೊಡಗಿನ ಭಾಷೆ, ಸಂಸ್ಕøತಿ, ಆಚಾರ, ವಿಚಾರಗಳ ಬೆಳವಣಿಗೆಗಾಗಿ ಶ್ರಮ ಪಡುತ್ತಿರುವ ಕೊಡವ ಮಕ್ಕಡ ಕೂಟ ಸಂಘಟನೆ ಈಗಾಗಲೇ ಮಹತ್ವಾಕಾಂಕ್ಷೆಯ 123 ಪುಸ್ತಕವನ್ನು ಸಾಹಿತ್ಯ ಕ್ಷೇತ್ರಕ್ಕೆ ಸಮರ್ಪಿಸಿದೆ. ಯಾವುದೇ ಪುಸ್ತಕವನ್ನು ಮಾರಾಟ ಮಾಡದೆ ಬರಹಗಾರರನ್ನು ಪ್ರೋತ್ಸಾಹಿಸುವ ನಿಟ್ಟಿನಲ್ಲಿ ಓದುಗರಿಗೆ ಉಚಿತವಾಗಿ 123 ಪುಸ್ತಕಗಳನ್ನು ತಲುಪಿಸಿದೆ. ಕೊಡವ ಮಕ್ಕಡ ಕೂಟ ಪ್ರಕಟಿಸಿರುವ 123 ಪುಸ್ತಕಗಳಲ್ಲಿ ಐದು ಪುಸ್ತಕಗಳಿಗೆ ಕರ್ನಾಟಕ ಕೊಡವ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಲಭಿಸಿದ್ದು, ಚಿಗುರೆಲೆಗಳು ಪುಸ್ತಕಕ್ಕೆ ರಾಜ್ಯ ಪ್ರಶಸ್ತಿ, ಅಗ್ನಿಯಾತ್ರೆ ಪುಸ್ತಕಕ್ಕೆ “ಗೌರಮ್ಮ ದತ್ತಿ ನಿಧಿ “ಪ್ರಶಸ್ತಿ ಲಭಿಸಿದೆ. ಐದು ಪುಸ್ತಕಗಳು ಕೊಡವ ಸಿನಿಮಾವಾಗಿದೆ. ಚೆಪ್ಪುಡಿರ ಎ.ಕಾರ್ಯಪ್ಪ ಅವರು ಬರೆದ ಕೊಡಗಿನ ಕ್ರೀಡಾಪಟುಗಳ ಜೀವನ ಚರಿತ್ರೆ ಎಂಬ ದಾಖಲೀಕರಣ ಪುಸ್ತಕವನ್ನು 1500 ಪ್ರತಿಗಳನ್ನು ಮುದ್ರಿಸಿ ಕೊಡಗಿನಾದ್ಯಂತ ಶಾಲಾ-ಕಾಲೇಜು ಮತ್ತು ಗ್ರಂಥಾಲಯಗಳಿಗೆ ಉಚಿತವಾಗಿ ನೀಡಿದೆ ಎಂದು ಹೇಳಿದರು. ಪುಣ್ಯಕ್ಷೇತ್ರ ಪರಿಚಯ ಸೇರಿದಂತೆ ಹಲವು ದಾಖಲೀಕರಣ ಪುಸ್ತಕ, ಸಾಧಕರ ವಿವರದ ಪುಸ್ತಕ ಕೊಡಗಿನ ಹಾಗೂ ಕೊಡವ ಆಚಾರ, ವಿಚಾರ ಸಂಬಂಧಪಟ್ಟಂತ ಪುಸ್ತಕ, ಕೊಡಗಿನ ಎರಡು ಮಹಾವೀರ ಚಕ್ರ ಪುರಸ್ಕೃತ ವೀರ ಯೋಧರ ಪುಸ್ತಕಗಳನ್ನು ಲೋಕಾರ್ಪಣೆ ಮಾಡಲಾಗಿದೆ. ಅಲ್ಲದೇ ಹೊಸ ಬರಹಗಾರರಿಗೆ ಪ್ರೋತ್ಸಾಹ ನೀಡುವ ಮೂಲಕ ಅವರ ಪ್ರಥಮ ಪುಸ್ತಕವನ್ನು ಕೊಡವ ಮಕ್ಕಡ ಕೂಟದ ವತಿಯಿಂದ ಹೊರತರಲಾಗಿದೆ ಎಂದು ತಿಳಿಸಿದರು. ಸಾಮಾಜಿಕ ಕಳಕಳಿ, ಕೊಡಗಿನ ಅಭ್ಯುದಯದ ಕಾಳಜಿ, ಸಂಸ್ಕೃತಿ, ಸಾಹಿತ್ಯ ಬೆಳೆವಣಿಗೆಯ ಮೇಲಿನ ಆಸಕ್ತಿಯಿಂದ ನಿರಂತರ ಕಾರ್ಯನಿರ್ವಹಣೆಯಲ್ಲಿ ತೊಡಗಿರುವ ಕೊಡವ ಮಕ್ಕಡ ಕೂಟ ಸರ್ಕಾರದ ಯಾವುದೇ ಅನುದಾನವಿಲ್ಲದೆ ಜಿಲ್ಲೆಯ ಹಲವು ಬರಹಗಾರರು, ಸಾಹಿತಿಗಳು ಬರೆದ ಕೊಡವ, ಕನ್ನಡ, ಇಂಗ್ಲೀಷ್, ಹಿಂದಿ ಸೇರಿದಂತೆ ಹಲವು ದಾಖಲೀಕರಣ ಕೃತಿಗಳನ್ನು ಬಿಡುಗಡೆ ಮಾಡಿದೆ ಎಂದರು.
ಪಳೆ ತಾಲ್ಲೂಕು (ನಾಪೋಕ್ಲು ಊರಿನ ಕೊಡವ ಒಕ್ಕಡೊಕ್ಕಡ ಭೀರ್ಯ) ಅಧ್ಯಯನ ಪುಸ್ತಕವು ಲೇಖಕಿ ಐಚಂಡ ರಶ್ಮಿ ಮೇದಪ್ಪ ಅವರ ನಾಲ್ಕನೇ ಪುಸ್ತಕವಾಗಿದೆ. ಇವರು ರಚಿಸಿರುವ ಸಾಂಸ್ಕೃತಿಕ ಮತ್ತು ಧಾರ್ಮಿಕ ಹಿನ್ನಲೆಯಲ್ಲಿ ಕೊಡವರ ಐನ್‍ಮನೆ ಪುಸ್ತಕಕ್ಕೆ 2023-24ನೇ ಸಾಲಿನ ಕರ್ನಾಟಕ ಕೊಡವ ಸಾಹಿತ್ಯ ಅಕಾಡೆಮಿ ಪುಸ್ತಕ ಪ್ರಶಸ್ತಿ ದೊರೆಕಿದೆ. ಇವರು ಹೆಚ್ಚು ಅಧ್ಯಯನ ಪುಸ್ತಕಗಳಿಗೆ ಒತ್ತು ನೀಡುತ್ತಿದ್ದು, ಮುಂದಿನ ದಿನಗಳಲ್ಲಿ ಮತ್ತಷ್ಟು ಪುಸ್ತಕಗಳು ಹೊರತರುವಂತಾಗಲಿ ಎಂದು ಶುಭ ಬೊಳ್ಳಜಿರ ಬಿ.ಅಯ್ಯಪ್ಪ ಶುಭ ಹಾರೈಸಿದರು. ಕಾರ್ಯಕ್ರಮದಲ್ಲಿ ನಾಪೋಕ್ಲು ಶ್ರೀಭಗವತಿ ದೇವಾಲಯದ ಪ್ರಧಾನ ಕಾರ್ಯದರ್ಶಿ ಕಂಗಾಂಡ ಜಾಲಿ ಪೂವಪ್ಪ ಹಾಗೂ ಕೊಡವ ಮಕ್ಕಡ ಕೂಟದ ಸಲಹೆಗಾರ ಕುಲ್ಲೇಟಿರ ಅಜಿತ್ ನಾಣಯ್ಯ ಉಪಸ್ಥಿತರಿದ್ದರು.









