ಮಡಿಕೇರಿ, NEWS DESK ಫೆ.12 : ಸುಳ್ಯ ಶ್ರೀ ವೆಂಕಟರಮಣ ಕ್ರೆಡಿಟ್ ಕೋ ಆಪರೇಟಿವ್ ಸೊಸೈಟಿಯ ಮೂರ್ನಾಡು ಶಾಖೆ ಫೆ.15 ರಂದು ಉದ್ಘಾಟನೆಗೊಳ್ಳಲಿದೆ ಎಂದು ಸೊಸೈಟಿಯ ಅಧ್ಯಕ್ಷ ಕೆ.ಸಿ.ಸದಾನಂದ ತಿಳಿಸಿದ್ದಾರೆ.
ಮಡಿಕೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಭಾನುವಾರ ಬೆಳಿಗ್ಗೆ 10.30 ಗಂಟೆಗೆ ಮೂರ್ನಾಡಿನಲ್ಲಿ 24ನೇ ಶಾಖೆಯನ್ನು ಮಡಿಕೇರಿ ಕ್ಷೇತ್ರದ ಶಾಸಕ ಡಾ.ಮಂತರ್ ಗೌಡ ಅವರು ಉದ್ಘಾಟಿಸಲಿದ್ದಾರೆ ಎಂದರು.
ತಮ್ಮ ಅಧ್ಯಕ್ಷತೆಯಲ್ಲಿ ನಡೆಯುವ ಸಭಾ ಕಾರ್ಯಕ್ರಮವನ್ನು ಮುಖ್ಯಮಂತ್ರಿಗಳ ಕಾನೂನು ಸಲಹೆಗಾರರು ಹಾಗೂ ವಿರಾಜಪೇಟೆ ಕ್ಷೇತ್ರದ ಶಾಸಕ ಎ.ಎಸ್.ಪೊನ್ನಣ್ಣ ಅವರು ಉದ್ಘಾಟಿಸಲಿದ್ದಾರೆ. ಭದ್ರತಾ ಕೊಠಡಿಯನ್ನು ಕೊಡಗು ಗೌಡ ಸಮಾಜಗಳ ಒಕ್ಕೂಟದ ಅಧ್ಯಕ್ಷ ಆನಂದ ಕರಂದ್ಲಾಜೆ ಹಾಗೂ ಗಣಕೀಕರಣವನ್ನು ಮೂರ್ನಾಡು ವರ್ತಕರ ಸಂಘದ ಅಧ್ಯಕ್ಷ ಅರುಣ್ ಅಪ್ಪಚ್ಚು ಬಡವಂಡ ಉದ್ಘಾಟಿಸಲಿದ್ದಾರೆ.
ಪ್ರಥಮ ಪಾಲುಪತ್ರವನ್ನು ಮೂರ್ನಾಡು ಗೌಡ ಸಮಾಜದ ಅಧ್ಯಕ್ಷ ಪಾಣತ್ತಲೆ ಟಿ.ಹರೀಶ್, ಠೇವಣಿಪತ್ರವನ್ನು ಕೊಡಗು ಜಿಲ್ಲಾ ಚೇಂಬರ್ ಆಫ್ ಕಾಮರ್ಸ್ ನ ಉಪಾಧ್ಯಕ್ಷ ನವೀನ್ ಅಂಬೆಕಲ್ಲು ವಿತರಿಸಲಿದ್ದಾರೆ. ಪ್ರಥಮ ಉಳಿತಾಯ ಖಾತೆ ಪುಸ್ತಕವನ್ನು ಕಾಂತೂರು ಮೂರ್ನಾಡು ಗ್ರಾ.ಪಂ ಅಧ್ಯಕ್ಷ ಕುಶನ್ ರೈ ವಿತರಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ವಿದ್ಯಾ ಇಲಾಖಾ ನೌಕರರ ಸೌಹಾರ್ದ ಸಹಕಾರ ಸಂಘದ ಮಾಜಿ ಅಧ್ಯಕ್ಷ ಕಂಬೀರಂಡ ಬಿ.ಕಾಳಪ್ಪ ಹಾಗೂ ಶ್ರೀ ವೆಂಕಟೇಶ್ವರ ಕಾಂಪ್ಲೆಕ್ಸ್ನ ಮಾಲೀಕ ಕುಂತೋಡಿರ ದೇವಯ್ಯ ಭಾಗವಹಿಸಲಿದ್ದಾರೆ ಎಂದು ಹೇಳಿದರು.
ಸಂಘವು ಪ್ರಾರಂಭದಿಂದಲೂ ಲಾಭದಲ್ಲಿ ನಡೆಯುತ್ತಿದ್ದು, ಈ ಸಹಕಾರಿ ವರ್ಷದಲ್ಲಿ ಸಂಘ ಹೆಚ್ಚಿನ ಪ್ರಗತಿ ಸಾಧಿಸಿದೆ. ಪ್ರಸ್ತುತ ಸಂಘದಲ್ಲಿ ರೂ.270 ಕೋಟಿ ಠೇವಣಿ ಇದ್ದು, ರೂ.256 ಕೋಟಿ ಸದಸ್ಯರುಗಳಿಗೆ ಸಾಲ ವಿತರಿಸಲಾಗಿದೆ. ರೂ.300 ಕೋಟಿ ದುಡಿಯುವ ಬಂಡವಾಳವಿದ್ದು, ಒಟ್ಟು ರೂ.1,300 ಕೋಟಿಗೂ ಮಿಕ್ಕಿ ವಾರ್ಷಿಕ ವ್ಯವಹಾರವನ್ನು ನಡೆಸುತ್ತಿದ್ದೇವೆ ಎಂದು ಕೆ.ಸಿ.ಸದಾನಂದ ಮಾಹಿತಿ ನೀಡಿದರು.
ಸುದ್ದಿಗೋಷ್ಠಿಯಲ್ಲಿ ಉಪಾಧ್ಯಕ್ಷ ದಿನೇಶ ಮಡಪ್ಪಾಡಿ, ನಿರ್ದೇಶಕರಾದ ಸದಾನಂದ ಮಾವಜಿ, ದಾಮೋದರ, ಹಿರಿಯ ಶಾಖಾ ವ್ಯವಸ್ಥಾಪಕ ಅಶೋಕ ಟಿ. ಹಾಗೂ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಕೆ.ಟಿ.ವಿಶ್ವನಾಥ ಉಪಸ್ಥಿತರಿದ್ದರು.








