ಮಡಿಕೇರಿ, NEWS DESK ಫೆ.12 : ನಗರದ ಶ್ರೀವೀರಭದ್ರ ಮುನೇಶ್ವರ ದೇವಾಲಯದಲ್ಲಿ ಫೆ.15ರಂದು ಮಹಾಶಿವರಾತ್ರಿಯ ವಿಶೇಷ ಪೂಜಾ ಕಾರ್ಯಕ್ರಮ ಹಾಗೂ ವಾರ್ಷಿಕೋತ್ಸವ ಶ್ರದ್ಧಾಭಕ್ತಿಯಿಂದ ನಡೆಯಲಿದೆ ಎಂದು ದೇವಾಲಯ ಸಮಿತಿಯ ಅಧ್ಯಕ್ಷ ಪಿ.ಜಿ.ಸುಕುಮಾರ್ ತಿಳಿಸಿದ್ದಾರೆ.
ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಈ ಕುರಿತು ಮಾಹಿತಿ ನೀಡಿದ ಅವರು, ಶಿವರಾತ್ರಿಯಂದು ಬೆಳಿಗ್ಗೆ 7 ಗಂಟೆಗೆ ಮಹಾಗಣಪತಿ ಹೋಮ, 9 ಗಂಟೆಗೆ ಶ್ರೀವೀರಭದ್ರ ದೇವರ ಉತ್ಸವ ಮೂರ್ತಿಯ ನಗರ ಪ್ರದಕ್ಷಿಣೆಯ ಶೋಭಾಯಾತ್ರೆ ನಡೆಯಲಿದೆ. ಶೋಭಾಯಾತ್ರೆಯಲ್ಲಿ ಡೊಳ್ಳುಕುಣಿತ ಭಜನೆ ತಂಡ ಸೇರಿದಂತೆ ವಿವಿಧ ಕಲಾ ತಂಡಗಳು ಭಾಗವಹಿಸಲಿವೆ ಎಂದರು.
ಶೋಭಾಯಾತ್ರೆ ದೇವಾಲಯದಿಂದ ಪ್ರಾರಂಭಗೊಂಡು ದಾಸವಾಳ ರಸ್ತೆಗಾಗಿ, ಗಣಪತಿ ಬೀದಿಯನ್ನು ಹಾದು, ಬನ್ನಿಮಂಟಪದಲ್ಲಿ ಪೂಜೆ ಸಲ್ಲಿಸಿ ನಂತರ ಮಹದೇವಪೇಟೆಗಾಗಿ ಚೌಕಿ ವೃತ್ತದಿಂದ ಹಳೆ ಬಸ್ ನಿಲ್ದಾಣಕ್ಕಾಗಿ ಜೂನಿಯರ್ ಕಾಲೇಜು ರಸ್ತೆಗಾಗಿ ಮರಳಿ ದೇವಾಲಯಕ್ಕೆ ಬರಲಿದೆ.
ಅಂದು ಮಧ್ಯಾಹ್ನ 1 ಗಂಟೆಗೆ ಭಕ್ತಾದಿಗಳಿಗೆ ಅನ್ನಸಂತರ್ಪಣೆಯನ್ನು ಏರ್ಪಡಿಸಲಾಗಿದೆ. ಸಂಜೆ 6 ಗಂಟೆಗೆ ಮಹಾಮೃತ್ಯುಂಜಯ ಹೋಮ ನಡೆಯಲಿದೆ. ಮೃತ್ಯುಂಜಯ ಹೋಮಕ್ಕೆ ಹೆಸರು, ನಕ್ಷತ್ರ ನೋಂದಾಯಿಸುವವರು ಮೊ.9343819138 ಗೆ ಸಂಪರ್ಕಿಸಬೇಕೆಂದರು.
ರಾತ್ರಿ 9 ಗಂಟೆಯಿಂದ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ. ಅಂದು ರಾತ್ರಿಯಿಂದ ಮರುದಿನ ಬೆಳಗ್ಗೆ 5 ಗಂಟೆಯವರೆಗೆ ವಿಶೇಷ ಪೂಜಾ ಕಾರ್ಯಗಳು ನಡೆಯಲಿದೆ ಎಂದು ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ದೇವಸ್ಥಾನ ಸಮಿತಿಯ ಪ್ರಧಾನ ಕಾರ್ಯದರ್ಶಿ ಎಂ.ಬಿ.ವಿಷ್ಣು, ನಿರ್ದೇಶಕರುಗಳಾದ ಪಿ.ಜಿ.ಮಂಜುನಾಥ, ಪಿ.ಜಿ.ಕಮಲ್ ಹಾಗೂ ಸಂದೀಪ್ ಉಪಸ್ಥಿತರಿದ್ದರು.








