ಮಡಿಕೇರಿ, NEWS DESK ಫೆ.19 : ವಿರಾಜಪೇಟೆ ವಿಧಾನಸಭಾ ಕ್ಷೇತ್ರದ ಶಾಸಕರು ಹಾಗೂ ಮುಖ್ಯಮಂತ್ರಿಗಳ ಕಾನೂನು ಸಲಹೆಗಾರರಾದ ಅಜ್ಜಿಕುಟ್ಟಿರ ಎಸ್ ಪೊನ್ನಣ್ಣ ಅವರು ಹಾಗೂ ಕೊಡಗು ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರಾದ ತೀತಿರ ಧರ್ಮಜ ಉತ್ತಪ್ಪ ಅವರ ಉಪಸ್ಥಿತಿಯಲ್ಲಿ, ಕೊಡಗು ಅರೆಭಾಷೆ ಗೌಡ ಸಮುದಾಯ ವತಿಯಿಂದ, ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯ ಹಾಗೂ ಕಂದಾಯ ಸಚಿವರಾದ ಕೃಷ್ಣ ಬೈರೇಗೌಡ ಅವರನ್ನು ಬೆಂಗಳೂರಿನಲ್ಲಿ ಸನ್ಮಾನಿಸಿ, ಗೌರವಿಸಲಾಯಿತು.

ಇತ್ತೀಚೆಗೆ ಬೆಂಗಳೂರಿನಲ್ಲಿ ಜರುಗಿದ ಅರೆಭಾಷೆ ಗೌಡ ಸಮುದಾಯದ ಸಮಾರಂಭದಲ್ಲಿ ನೀಡಿದ ಆಶ್ವಾಸನೆಯಂತೆ, ಮುಖ್ಯಮಂತ್ರಿಗಳು, ಅರೆಭಾಷೆ ಗೌಡ ಸಮುದಾಯದ ಸಂಸ್ಕೃತಿ, ಶೈಕ್ಷಣಿಕ ಮತ್ತು ಕ್ರೀಡಾ ಕೇಂದ್ರ ಸ್ಥಾಪನೆ ಉದ್ದೇಶಕ್ಕಾಗಿ, ಮಡಿಕೇರಿ ತಾಲೂಕು ಮದೆ ಗ್ರಾಮದ ಕಾಟಕೇರಿ ಬಳಿ, 6 ಎಕರೆ ಜಾಗ ಮಂಜೂರು ಮಾಡಲು ಸಚಿವ ಸಂಪುಟದಲ್ಲಿ ಅನುಮೋದನೆ ನೀಡಿರುವುದನ್ನು ಇಲ್ಲಿ ಸ್ಮರಿಸಬಹುದು. ಅದಲ್ಲದೇ, ದಶಕಗಳಿಂದ ಕೊಡಗಿನ ಜನತೆಯನ್ನು ಕಾಡುತ್ತಿದ್ದ, ಅತ್ಯಂತ ಜಟಿಲವಾದ ಜಮ್ಮ ಬಾಣೆ ಸಮಸ್ಯೆಯ ಪರಿಹಾರಕ್ಕಾಗಿ, ಕರ್ನಾಟಕ ರಾಜ್ಯ ಕಂದಾಯ ಮಸೂದೆ 2025 ರ ತಿದ್ದುಪಡಿ ವಿದೇಯಕಕ್ಕೆ ಅನುಮೋದನೆ ನೀಡಿರುವುದಕ್ಕಾಗಿ ಮಾನ್ಯ ಮುಖ್ಯಮಂತ್ರಿಗಳನ್ನು ಕಾವೇರಿ ನಿವಾಸದಲ್ಲಿ ಸನ್ಮಾನಿಸಲಾಯಿತು. ಇದೇ ಸಂದರ್ಭದಲ್ಲಿ ಮಾನ್ಯ ಕಂದಾಯ ಸಚಿವರನ್ನು ಅವರ ನಿವಾಸದಲ್ಲಿ ಭೇಟಿ ಮಾಡಿ ಗೌರವಾರ್ಪಣೆ ಸಲ್ಲಿಸಿ, ಸಭೆ ನಡೆಸಲಾಯಿತು.

ಈ ಸಂದರ್ಭದಲ್ಲಿ ಅರೆಭಾಷೆ ಗೌಡ ಸಮುದಾಯದ ಪ್ರಮುಖರಾದ ಕೊಲ್ಯದ ಗಿರೀಶ್, ಸೂರ್ತಲೆ ಸೋಮಣ್ಣ, ಪುಳಕಂಡ ಸಂದೀಪ್, ಕಾಳೇರಮ್ಮನ ನಂದ, ಪೊನ್ನಚ್ಚನ ಮಧು, ಕೊಂಬನ ಪ್ರವೀಣ್, ನಂಗಾರು ನಾಣಯ್ಯ, ಪಾಣ್ತಳೆ ಪಳಂಗಪ್ಪ, ಕೈಕೇರ ಮನೋಹರ್, ಆಮೆ ಸೀತಾರಾಮ್, ಪೇರಿಯನ ಘನಶ್ಯಾಮ್, ಮೂಲೆಮಜಲು ಅಮಿತ, ಚೊಕ್ಕಾಡಿ ಪ್ರೇಮ ರಾಘವಯ್ಯ ಮೊದಲಾದ ಪ್ರಮುಖರು ಉಪಸ್ಥಿತರಿದ್ದರು.








