ಮಡಿಕೇರಿ, NEWS DESK ಫೆ.19:-ಜಿಲ್ಲಾಧಿಕಾರಿಗಳು ಹಾಗೂ ಪ್ರಾಣಿದಯಾ ಸಂಘದ ಅಧ್ಯಕ್ಷರಾದ ಎಸ್.ಜೆ.ಸೋಮಶೇಖರ್ ಅವರು ಮಡಿಕೇರಿ ಕೆ.ನಿಡುಗಣೆ ಜಿಲ್ಲಾ ಸರ್ಕಾರಿ ಗೋಶಾಲೆಗೆ ಅನಿರೀಕ್ಷಿತ ಭೇಟಿ ನೀಡಿ, ಪರಿಶೀಲಿಸಿದ್ದಾರೆ. ಗೋಶಾಲೆಯಲ್ಲಿ 37 ಜಾನುವಾರುಗಳನ್ನು ಸಾಕುತ್ತಿದ್ದು, ಜಾನುವಾರುಗಳ ನಿರ್ವಹಣೆಗೆ ಬೇಕಾಗುವ ಒಣ ಮೇವು ದಾಸ್ತಾನು, ಪಶು ಆಹಾರ ದಾಸ್ತಾನು ಕೊಠಡಿ ಹಾಗೂ ಚಿಕಿತ್ಸೆಗೆ ಬೇಕಾಗುವ ಔಷಧ ದಾಸ್ತಾನನ್ನು ಜಿಲ್ಲಾಧಿಕಾರಿ ಅವರು ವೀಕ್ಷಿಸಿದರು.

ಗೋಶಾಲೆಯಲ್ಲಿನ ಜಾನುವಾರುಗಳ ನಿರ್ವಹಣೆಗೆ 3 ಜನ ಹೊರಗುತ್ತಿಗೆ ‘ಡಿ’ ದರ್ಜೆ ನೌಕರರು 3 ಪಾಳಿಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ ಎಂದು ಗೋಶಾಲೆ ಉಸ್ತುವಾರಿ ಅಧಿಕಾರಿ ಡಾ.ಎಂ.ಸಿ.ಲತಾ ಅವರು ಮಾಹಿತಿ ನೀಡಿದರು. ಹಸಿರು ಮೇವು ಬೆಳೆಯುವ ಕ್ಷೇತ್ರಕ್ಕೆ ಭೇಟಿ ನೀಡಿದ ಜಿಲ್ಲಾಧಿಕಾರಿ ಅವರು ಮೆಚ್ಚುಗೆ ವ್ಯಕ್ತಪಡಿಸಿದರು.

ಗೋಶಾಲೆಗೆ ಹೆಚ್ಚುವರಿ ಜಾನುವಾರುಗಳ ಸೇರ್ಪಡೆಗೆ ಬೇಡಿಕೆ ಇದ್ದು, ಹೆಚ್ಚುವರಿ ದನದ ಕೊಟ್ಟಿಗೆ, ಒಣ ಮೇವು ದಾಸ್ತಾನು ಕೊಠಡಿ ನಿರ್ಮಾಣ ಹಾಗೂ ಹೆಚ್ಚುವರಿ ಜಾನುವಾರುಗಳನ್ನು ಮೇಯಲು ಬಿಡಲು ಗೋಶಾಲೆಗೆ ಮಂಜೂರಾದ 8 ಎಕರೆ ಜಾಗದ ಪೈಕಿ ಬಾಕಿ ಉಳಿದಿರುವ 6 ಎಕರೆ ಜಾಗಕ್ಕೆ ಚೈನ್ ಲಿಂಕ್ ಪೆನ್ಸ್/ ಭದ್ರವಾದ ತಂತಿ ಬೇಲಿ ನಿರ್ಮಿಸಲು ಪ್ರಸ್ತಾವನೆ ಸಲ್ಲಿಸಲಾಗಿದೆ ಎಂದು ಪಶುಪಾಲನೆ ಇಲಾಖೆ ಉಪ ನಿರ್ದೇಶಕರಾದ ಲಿಂಗರಾಜ ದೊಡ್ಡಮನಿ ಅವರು ಮಾಹಿತಿ ನೀಡಿದರು.
ಗೋಶಾಲೆ ಆವರಣದಲ್ಲಿ ಸ್ವಚ್ಛ ಭಾರತ್ ಮಿಷನ್ ಅಡಿ ನಿರ್ಮಿಸಿರುವ ಗೋಬರಲ್ ಅನಿಲ ಘಟಕದ ಕಾಮಗಾರಿ ಪರಿಶೀಲಿಸಿದ ಜಿಲ್ಲಾಧಿಕಾರಿ ಅವರು, ಕಾಮಗಾರಿಯನ್ನು ಪೂರ್ಣಗೊಳಿಸಿ ಹಸ್ತಾಂತರಿಸಲು ಕ್ರಮಕೈಗೊಳ್ಳುವಂತೆ ಪಂಚಾಯತ್ ರಾಜ್ ಎಂಜಿನಿಯರ್‍ಗೆ ಸೂಚಿಸಿದರು.








