
ಮಡಿಕೇರಿ ಫೆ.26 NEWS DESK : ದಕ್ಷಿಣ ಕೊಡಗಿನ ಬಾಡಗರಕೇರಿ ಗ್ರಾಮದಲ್ಲಿರುವ ಐತಿಹಾಸಿಕ ಶ್ರೀ ಮೃತ್ಯುಂಜಯ ದೇವಾಲಯದ ವಾರ್ಷಿಕ ಉತ್ಸವವು ಇಂದಿನಿಂದ (ಫೆ.26) ಮಾ.8 ರವರೆಗೆ ಜರುಗಲಿದೆ. ಕೊಡಿಮರ ನಿಲ್ಲಿಸುವ ಮೂಲಕ 11 ದಿನಗಳ ವಾರ್ಷಿಕ ಪೂಜೋತ್ಸವಗಳಿಗೆ ಬೆಳಗ್ಗಿನ ಜಾವ ತಕ್ಕಮುಖ್ಯಸ್ಥರು, ಆಡಳಿತ ಮಂಡಳಿ, ಊರಿನವರು ಮತ್ತು ಊರಿನ ಮಹಿಳೆಯರಿಂದ 12 ತಳಿಯ ತಕ್ಕಿಬೊಳ್‌ಚ ದುಡಿಕೊಟ್ಟ್ ಪಾಟ್‌ನೊಂದಿಗೆ ಹಬ್ಬಕ್ಕೆ ಚಾಲನೆ ಸಿಗಲಿದ್ದು, ನಂತರ ಊರಿನ ಪರವಾಗಿ ಶತರುದ್ರಾಭಿಷೇಕ, ಪ್ರಸಾದ ವಿತರಣೆ, ರಾತ್ರಿ 8 ಗಂಟೆಗೆ ಕೊಡಿಮರ ನಿಲ್ಲಿಸುವದು, ಶುದ್ಧ ಕಲಶ, ಉತ್ಸವ ಮೂರ್ತಿಗಳ ದರ್ಶನ, ಪ್ರಸಾದ ವಿತರಣೆ ನಂತರ ಅನ್ನದಾನ ನಡೆಯಲಿದೆ. ಫೆ.27 ರಿಂದ ಬೆಳಿಗ್ಗೆ 11 ರಿಂದ ನಿತ್ಯಪೂಜೆ, ಸಂಜೆ ತೂಚಂಬಲಿ, ಬೆಳಿಗ್ಗೆ 5ಕ್ಕೆ ಉತ್ಸವ ಮೂರ್ತಿಯ ದರ್ಶನ ಜರುಗಲಿವೆ. ಮಾ.2 ರ ಬೆಳಿಗ್ಗೆ 5 ರಿಂದ ಇರುಬಳಕು, ತುಲಾಭಾರ ಸೇವೆಗಳು ಮಾ.5 ರಿಂದ ಹರಕೆ ಬಳಕು ಆರಂಭಗೊಳ್ಳಲಿವೆ. ಮಾ. 7 ರಂದು ನಿತ್ಯಪೂಜೆಯೊಂದಿಗೆ ಸಂಜೆ 5 ಗಂಟೆಗೆ ನೆರಪು, ರಾತ್ರಿ 8ಕ್ಕೆ ಶ್ರೀ ವಿಷ್ಣು ದೇವರ ಅಲಂಕಾರ ಪೂಜೆ ಹಾಗೂ ಅಂತಿಮ ದಿನವಾದ 8 ರಂದು ಬೆಳಿಗ್ಗೆ 10 ರಿಂದ ನಿತ್ಯಪೂಜೆ, ತುಲಾಭಾರ, ಅಪರಾಹ್ನ 3 ಗಂಟೆಗೆ ಶಾಸ್ರೋಕ್ತವಾಗಿ 12 ತೆಂಗಿನಕಾಯಿಗೆ ಗುಂಡು ಹೊಡೆಯುವ ಕಾರ್ಯಕ್ರಮ ಸಂಜೆ 5 ಗಂಟೆಗೆ ಉತ್ಸವ ಮೂರ್ತಿ ದರ್ಶನ, ಅವಕೃತ ಸ್ನಾನ, ರಾತ್ರಿ 8.30 ಗಂಟೆಗೆ ಉತ್ಸವ ಮೂರ್ತಿಯನ್ನು ಊರಿನ ಪ್ರತಿ ಕುಟುಂಬದ ಮಹಿಳೆಯರು ಸಾಂಪ್ರದಾಯಿಕ ಉಡುಗೆ ತಳಿಯ ತಕ್ಕಿ ಬೊಳ್ಚದೊಂದಿಗೆ ಸ್ವಾಗತಿಸುವದು ನಂತರ ದೇವರ ದರ್ಶನ, ವಸಂತಪೂಜೆ ನಡೆಯಲಿದೆ. ಇದಕ್ಕೂ ಮುನ್ನ ಸಂಜೆ 6 ರಿಂದ ಸಾಂಸ್ಕೃತಿಕ ಕಾರ್ಯಕ್ರಮವಿದೆ ಎಂದು ತಕ್ಕಮುಖ್ಯಸ್ಥರು, ಮಂಡಳಿಯವರು ತಿಳಿಸಿದ್ದಾರೆ.









