
ವಿರಾಜಪೇಟೆ ಫೆ.27 NEWS DESK : ಮೂರ್ನಾಡುವಿನ ಹಿಂದೂ ಸಂಗಮ ಆಯೋಜನ ಸಮಿತಿ ವತಿಯಿಂದ ಹಿಂದೂ ಸಂಗಮ ಕಾರ್ಯಕ್ರಮ ಬೃಹತ್ ಶೋಭಾಯಾತ್ರೆಯ ಮೂಲಕ ಹಿಂದುತ್ವದ ಬಲವರ್ಧನೆಗೆ ಸಾಕ್ಷಿಯಾಯಿತು. ಸಹಸ್ರ ಕೈಗಳಲ್ಲಿ ಕೇಸರಿ ಧ್ವಜಗಳ ಹಾರಟ, ರಾಮ ಸಹಸ್ರನಾಮದ ಕಂಠಗಳನ್ನು ಮುಗಿಲೆತ್ತರದ ಧ್ವನಿಯಾಗಿಸಿ ಹಿಂದೂ ಸಂಗಮದ ಶೋಭಾಯಾತ್ರೆ ನಡೆಯಿತು. ಪಟ್ಟಣದ ಮುಖ್ಯಬೀದಿಗಳಲ್ಲಿ ಸಂಚರಿಸಿದ ಶೋಬಾಯಾತ್ರೆ ಪಾಂಡಾಣೆ ಮಂದ್‍ನಲ್ಲಿ ಸೇರಿತು. ಶೋಭಾಯಾತ್ರೆ ಮೆರವಣಿಗೆ ಉದ್ದಕ್ಕೂ, ಕಾಡು ಮಕ್ಕಳ ಹಾಡು ಕುಣಿತ, ಕೇರಳದ ಮಹಿಳಾ ಚಂಡೆವಾದ್ಯ, ಭಜನಾ ನೃತ್ಯ, ಮಕ್ಕಳ ಚದ್ಮವೇಷಗಳು, ಗೊಂಬೆ ಕುಣಿತ ಕಾರ್ಯಕ್ರಮದ ಗಾಂಭೀರ್ಯತೆ ಮತ್ತು ಮೆರುಗು ಹೆಚ್ಚಿಸಿತ್ತು. ಮೆರವಣಿಗೆಯ ಉದ್ದಕ್ಕೂ ಪಾನಕ, ಮಜ್ಜಿಗೆ, ನೀರು, ಬಾಳೆಹಣ್ಣು ವಿತರಣೆ ನಡೆಯಿತು. ಮೂರ್ನಾಡಿನಲ್ಲಿರುವ ಏಳು ಗಣಪತಿ ಸಂಘಗಳು, ತ್ರಿನೇತ್ರ ವಾಹನ ಮಾಲೀಕರ ಸಂಘ, ನಕ್ಷತ್ರ ಆಟೋ ಮಾಲೀಕರ ಸಂಘ, ಆಪ್ತಮಿತ್ರ ಅಣ್ಣಪ್ಪ ಸ್ವಾಮಿ, ಸ್ವಸ್ಥಿಕ್ ಸ್ವಸಹಾಯ ಸಂಘ ಸೇರಿದಂತೆ ಹಲವು ಸಂಘಟನೆಗಳು ಮೆರವಣಿಗೆಯ ಭಾಗವಾಗಿದ್ದವು. ವಿರಾಜಪೇಟೆ ನಾಟ್ಯಾಂಜಲಿ ನೃತ್ಯ ಸಂಸ್ಥೆಯ ವಿದ್ಯಾರ್ಥಿಗಳಿಂದ ರಾಮನ ಹಾಗೂ ಆಂಜನೇಯ, ಶಿವನ ನೃತ್ಯ ಪ್ರದರ್ಶನ, ಉರುಟ್ಟಿಕೊಟ್ಟ್ ಆಟ್, ಕಾಡು ಮಕ್ಕಳ ನೃತ್ಯ ಮತ್ತು ಉಮ್ಮತ್ತಾಟ್ ಗಮನ ಸೆಳೆಯಿತು. ಕೊಡಗಿನ ಸಾಂಪ್ರಾದಾಯಿಕ ವಾಲಗ, ಕೇರಳದ ಚಂಡೆ, ಶಾರದ ಮತ್ತು ತಂಡದವರಿಂದ ಉರುಟ್ಟಿಕೊಟ್ಟ್ ಆಟ್, ಯರವ ಜನಾಂಗದ ಆಟ್, ನಾಗರಹೊಳೆ ಗಿರಿಜನ ಕಲಾ ತಂಡದಿಂದ ಜೇನುಕುರುಬರ ನೃತ್ಯ, ನಾಟ್ಯಾಂಜಲಿ ನೃತ್ಯ ಸಂಸ್ಥೆಯ ಭಜನೆ ತಂಡ, ತಿತಿಮತಿಯ ನೃತ್ಯ ತಂಡ, ಸಿದ್ದಾಪುರದ ಶಾಜಿ ಮತ್ತು ತಂಡದಿಂದ ಗೊಂಬೆ ಕುಣಿತ, ಗಜೇಂದ್ರ ಯುವಕ ಸಂಘದ ವತಿಯಿಂದ ದೇವತೆ ಹಾಗೂ ಮಹಾಪುರುಷರ ವೇಷಧಾರಿಗಳು, ಶ್ರೀ ಗಣಪತಿ ಭಜನೆ ಮಡಳಿ ಮರಗೋಡು, ಸ್ವರಾಜ್ ಅವರಿಂದ ದೇಶಭಕ್ತಿಗೀತೆ, ಭೂತನಕಾಡು ರವಿ ಅವರಿಂದ ವಂದೇಮಾತರಂ ಗೀತೆ ಪ್ರಸ್ತುತ ಪಡಿಸಲಾಯಿತು. ನಂತರ ಶಾಲೆ ಮೈದಾನದಲ್ಲಿ ನಡೆದ ಸಭಾ ಕಾರ್ಯಕ್ರಮದಲ್ಲಿ ಸ್ವಯಂ ಸೇವಕ ಸಂಘದ ಸುನೀಲ್ ಹೆಬ್ಬಾರ್ ಮಾತನಾಡಿ, ಹಿಂದೂ ಸಂಗಮ ಇತರ ಧರ್ಮಗಳ ವಿರುದ್ಧ ನಿಂತ ಹೋರಾಟವಲ್ಲ, ಹಿಂದುಗಳ ಸಂಘಟನೆಯ ಬಲವನ್ನ ಹೆಚ್ಚಿಸುವ ಕಾರ್ಯಕ್ರಮವಾಗಿದೆ. ಹಿಂದೂ ರಾಷ್ಟ್ರ ಭಾರತಕ್ಕೆ ತನ್ನದೇ ಆದ ಪರಂಪರೆ ಮತ್ತು ಅಪಾರ ಸಂಸ್ಕೃತಿ ವಿಚಾರಗಳನ್ನ ಒಳಗೊಂಡಿದೆ. ಈ ಹಿನ್ನೆಲೆಯಿಂದಲೇ ಪ್ರಪಂಚಕ್ಕೆ ಭಾರತ ಧಾರ್ಮಿಕತೆಯ ಮಾದರಿ ರಾಷ್ಟ್ರವಾಗಿ ಹೊರಹೊಮ್ಮಿದೆ ಎಂದರು. ಸ್ವದೇಶಿ ವಸ್ತುಗಳನ್ನ ಬಳಸುವ ಮೂಲಕ ಈ ಮಣ್ಣಿನ ಧಾರ್ಮಿಕತೆಯ ಪವಿತ್ರತೆಯನ್ನು ಎತ್ತಿ ಹಿಡಿಯಬೇಕು ಎಂದು ಕರೆ ನೀಡಿದರು. ಸ್ವತಂತ್ರ ಬಸವಲಿಂಗ ಶಿವಯೋಗಿ ಸ್ವಾಮಿಜಿ ಮಾತನಾಡಿ, ಕೇವಲ ಆಚಾರಗಳನ್ನು ಮುಂದುವರಿಸುವುದು ಹಿಂದೂ ಧರ್ಮದ ಪ್ರಾಮುಖ್ಯತೆಯಲ್ಲ. ಸಂಸ್ಕೃತಿ, ಸಂಭ್ರಮ ಸಹೋದರತ್ವ, ಜೀವನದ ಬಾಂಧವ್ಯಗಳನ್ನು ಒಟ್ಟುಗೂಡಿಸುವ ಮತ್ತು ಬದುಕಿನ ಮೌಲ್ಯಗಳನ್ನು ಕೇಂದ್ರೀಕರಿಸುವ ಸಂಗಮವಾಗಿಸುವ ಉದ್ದೇಶವೇ ಧರ್ಮದ ಮೂಲವಾಗಿದೆ ಎಂದರು. ನಿವೃತ್ತ ಶಿಕ್ಷಕಿ ಕುಸುಮ ಶ್ರೀಪತಿ ಭಟ್ ಮಾತನಾಡಿ, ಮಹಿಳೆಯರು ಈ ದೇಶದ ಶಕ್ತಿಯಾಗಿದ್ದಾರೆ. ಹಿಂದೂ ರಾಷ್ಟ್ರದ ಐಕ್ಯತೆಯ ಮನೋಭಾವನೆಯನ್ನು ಮಕ್ಕಳಲ್ಲಿ ಬಿತ್ತುವ ಕಾರ್ಯ ಮಹಿಳೆಯರಿಂದ ಮುಂದುವರಿಯಬೇಕಾಗಿದೆ. ಈ ನಿಟ್ಟಿನಲ್ಲಿ ಮಹಿಳೆಯರು ಪ್ರಜ್ಞಾಪೂರ್ವಕವಾಗಿ ವರ್ತಿಸಿದಾಗ ಹಿಂದುತ್ವ ರಾಷ್ಟ್ರವನ್ನು ಮತ್ತಷ್ಟು ಬಲಗೊಳಿಸಬಹುದಾಗಿದೆ ಎಂದು ಸಲಹೆ ನೀಡಿದರು. ಸ್ವಯಂ ಸೇವಕ ಸಂಘದ ಹಿರಿಯ ಸೇವಕ, ಕಾಫಿ ಬೆಳೆಗಾರ ಮುಂಡಂಡ ಕುಟ್ಟಪ್ಪ ಪ್ರಾಸ್ತಾವಿಕವಾಗಿ ಮಾತನಾಡಿದರು. ಹಿಂದೂ ಸಂಗಮ ಆಯೋಜನಾ ಸಮಿತಿ ಅಧ್ಯಕ್ಷ ಚೆಟ್ಟಿಮಾಡ ಜಯಂತ್ ಅಧ್ಯಕ್ಷತೆ ವಹಿಸಿ ಮಾತನಾಡಿ, ಮಕ್ಕಳಲ್ಲಿ ದೇಶಭಕ್ತಿಯನ್ನು ಬಿತ್ತುವ ಕಾರ್ಯ ಮಾತೆಯರಿಂದ ನಡೆಯಬೇಕಾಗಿದೆ. ಈ ನಿಟ್ಟಿನಲ್ಲಿ ಈ ಭಾರತದ ಸ್ವಾತಂತ್ರ್ಯದ ಮತ್ತು ಸನಾತನ ಧರ್ಮದ ವಿಚಾರಗಳನ್ನು ಮಕ್ಕಳಿಗೆ ತಿಳಿಸುವ ಕಾರ್ಯ ನಡೆಸಬೇಕಾಗಿದೆ. ಮಕ್ಕಳ ವ್ಯಕ್ತಿತ್ವದಲ್ಲಿ ಹಿಂದುತ್ವವನ್ನ ಎತ್ತಿ ಹಿಡಿಯುವುದು ಪ್ರತಿಯೊಬ್ಬರ ಕರ್ತವ್ಯ ಎಂದು ಸಾರಿದರು. ಈ ಸಂದರ್ಭ ಉಪಾಧ್ಯಕ್ಷ ಕೈಪಟ್ಟೀರ ಅಯ್ಯಪ್ಪ, ಕಾರ್ಯದರ್ಶಿ ಪುದಿಯೊಕ್ಕಡ ಮಧುಕುಮಾರ್, ಸಹ ಕಾರ್ಯದರ್ಶಿ ವಸಂತ್ ಕೊಡಂಬೂರು, ಖಜಾಂಚಿ ಸಂಜೀವ, ಸಂಯೋಜಕ ಈರ ಸುಬ್ಬಯ್ಯ ಇದ್ದರು. ಕಾರ್ಯಕ್ರಮದಲ್ಲಿ ಮೂರ್ನಾಡು ಮಂಡಲಕ್ಕೆ ಒಳಪಡುವ ಎಲ್ಲ ಗ್ರಾಮಗಳಿಂದ ಹಿಂದೂ ಬಾಂಧವರುಗಳು ಹೆಚ್ಚಿನ ಸಂಖ್ಯೆಯಲ್ಲಿ ಸೇರಿದ್ದರು.









