
ಮಡಿಕೇರಿ ಫೆ.28 NEWS DESK : ನಾಪೋಕ್ಲುವಿನಲ್ಲಿ ಹಿಂದೂ ಸಂಘಟನೆಯ ಕಾರ್ಯಕರ್ತ ಅಪ್ಪಚ್ಚಿರ ಗೌತಮ್ ಮೇಲೆ ನಡೆದ ಹಲ್ಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ನಾಲ್ವರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ. ನಾಪೋಕ್ಲು ಕಾರೆಕಾಡು ನಿವಾಸಿ ಪಿ.ಹೆಚ್.ಸುಹೈಲ್(24), ಬೇತು ಗ್ರಾಮದ ನಿವಾಸಿ ಕೆ.ಇ.ಸಿದ್ದಿಕ್(20), ಇಂದಿರಾನಗರದ ನಿವಾಸಿ ನಾಫಿ(19) ಹಾಗೂ ರಾಶೀದ್ ಪಿ.ಎ.(30) ಎಂಬವರೇ ಬಂಧಿತ ಆರೋಪಿಗಳಾಗಿದ್ದಾರೆ. ಘಟನೆ ಕುರಿತು ಕರವಂಡ ಲವ ನಾಣಯ್ಯ ಎಂಬುವವರು ನೀಡಿದ ದೂರನ್ನು ಆಧರಿಸಿ ಆರೋಪಿಗಳನ್ನು ಬಂಧಿಸಿ ವಿರಾಜಪೇಟೆ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ. ಬಲ್ಲಮಾವಟಿ ಸಹಿತ ನಾಪೋಕ್ಲು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಹಿಂದೂ ಸಂಗಮ ಕಾರ್ಯಕ್ರಮ ಆಯೋಜನೆಗೊಂಡಿದ್ದ ಕಾರಣ ನಾಪೋಕ್ಲು ಪಟ್ಟಣದಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ಮಾಡಲಾಗಿತ್ತು. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಆರ್.ಎನ್.ಬಿಂದುಮಣಿ ಕೂಡ ಸ್ಥಳದಲ್ಲಿ ಮೊಕಾಂ ಹೂಡಿದ್ದು, ಪರಿಸ್ಥಿಯನ್ನು ಅವಲೋಕಿಸುತ್ತಿದ್ದಾರೆ. ನಾಪೋಕ್ಲು ಸಹಿತ ಸೂಕ್ಷ್ಮ ಮತ್ತು ಆಯಕಟ್ಟಿನ ಪ್ರದೇಶದಲ್ಲಿ ಕೆಎಸ್‍ಆರ್‍ಪಿ, ಜಿಲ್ಲಾ ಸಶಸ್ತ್ರ ಪೊಲೀಸ್ ಪಡೆ ಮತ್ತು ಜಿಲ್ಲೆಯ ವಿವಿಧ ಠಾಣೆಗಳ ಅಧಿಕಾರಿಗಳು ಹಾಗೂ ಸಿಬ್ಬಂದಿಗಳನ್ನು ನಿಯೋಜಿಸಿ ಅಹಿತಕರ ಘಟನೆಗಳು ನಡೆಯದಂತೆ ಕ್ರಮ ಕೈಗೊಳ್ಳಲಾಗಿದೆ ಎಂದು ಎಸ್‍ಪಿ ತಿಳಿಸಿದ್ದಾರೆ.









