ಮಡಿಕೇರಿ, NEWS DESK ಮಾ.1 : ನಾಪೋಕ್ಲುವಿನಲ್ಲಿ ಇತ್ತೀಚೆಗೆ ನಡೆದ ಹಲ್ಲೆ ಪ್ರಕರಣದಲ್ಲಿ ನನ್ನ ಪುತ್ರ ಭಾಗಿಯಾಗಿಲ್ಲ, ಆದರೆ, ನನ್ನ ಪುತ್ರ ಗೌತಮ್ ಗೆ ಹಲ್ಲೆ ಮಾಡಿದ್ದಾನೆ ಎಂದು ಕೆಲವು ವ್ಯಕ್ತಿಗಳು ಆರೋಪ ಮಾಡಿದ್ದು, ಇದು ಸತ್ಯಕ್ಕೆ ದೂರವಾಗಿದೆ ಎಂದು ನಾಪೋಕ್ಲು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಇಸ್ಮಾಯಿಲ್ ಕೆ.ಎ ಸ್ಪಷ್ಟಪಡಿಸಿದ್ದಾರೆ. ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ನನ್ನ ಪುತ್ರನ ವಿರುದ್ಧ ಆರೋಪ ಮಾಡುತ್ತಿರುವವರು ದೇವಸ್ಥಾನದಲ್ಲಿ ಪ್ರಮಾಣ ಮಾಡಿ ‘ನನ್ನ ಪುತ್ರ ಹಲ್ಲೆ ಮಾಡಿದ್ದಾನೆ’ ಎಂದು ಹೇಳಿದರೆ, ಶಿಕ್ಷೆಯನ್ನು ನಾನೇ ಕೊಡಿಸುತ್ತೇನೆ ಎಂದು ಸವಾಲೆಸೆದರು. ನಾಪೋಕ್ಲುವಿನಲ್ಲಿ ಪ್ರತಿಭಟನೆ ನಡೆಸುವ ಸಂದರ್ಭ ನನ್ನ ವಿರುದ್ಧ ದಿಕ್ಕಾರ ಕೂಗಿದ್ದಾರೆ. ಘಟನೆಗೂ, ನನಗೂ ಏನು ಸಂಬಂಧವಿದೆ ಎಂದು ಪ್ರಶ್ನಿಸಿದರು. ರಾಜಕೀಯ ಲಾಭಕ್ಕಾಗಿ ಘಟನೆಯನ್ನು ಬಳಸುತ್ತಿರುವುದು ತಪ್ಪು, ನನ್ನ ರಾಜೀನಾಮೆ ಕೇಳಲು ಹೈಕಮಾಂಡ್ ಇದ್ದಾರೆ, ಬೇರೆಯವರು ಕೇಳುವ ಅಗತ್ಯವಿಲ್ಲ ಎಂದರು. ನಾಪೋಕ್ಲು ಜಮಾಅತ್‌ನ ಅಧ್ಯಕ್ಷ ಅಬ್ದುಲ್ ರೆಹಮಾನ್ ಮಾತನಾಡಿ ಮಕ್ಕಳ ನಡುವಿನ ಜಗಳವನ್ನು ಧರ್ಮಧರ್ಮಗಳ ನಡುವೆ ತಂದು ಹಾಕಿ ಕೆಲವು ವ್ಯಕ್ತಿಗಳು ರಾಜಕೀಯ ಬೇಳೆ ಬೇಯಿಸಿಕೊಳ್ಳಲು ಪ್ರಯತ್ನಿಸುತ್ತಿದ್ದಾರೆ ಎಂದು ಆರೋಪಿಸಿದರು. ವಾಹನ ನಿಲುಗಡೆ ವಿಚಾರದಲ್ಲಿ ಕಲಹ ಏರ್ಪಟ್ಟು ಬರಿಗೈಯಲ್ಲಿ ಹೊಡೆದಾಡಿಕೊಂಡಿದ್ದಾರೆ.

ಆದರೆ, ಉದ್ದೇಶ ಪೂರ್ವಕವಾಗಿ ಹಿಂದೂಗಳ ಮೇಲೆ ಹಲ್ಲೆ ಮಾಡಲಾಗಿದೆ ಎಂದು ಕೆಲವು ವ್ಯಕ್ತಿಗಳು ಪ್ರತಿಬಿಂಬಿಸಿ ಪ್ರತಿಭಟನೆ ನಡೆಸಿದ್ದಾರೆ. ನಾಪೋಕ್ಲು ವ್ಯಾಪ್ತಿಯಲ್ಲಿ ಹಿಂದೂ, ಮುಸ್ಲಿಂ, ಕ್ರೈಸ್ತರೆಲ್ಲರು ಸಾಮರಸ್ಯದಿಂದ ಜೀವನ ಸಾಗಿಸುತ್ತಿದ್ದಾರೆ. ಗೌರಿಗಣೇಶ, ರಂಜಾನ್, ಕ್ರಿಸ್ಮಸ್ ಹಬ್ಬವನ್ನು ಎಲ್ಲರೂ ಒಗ್ಗಟ್ಟಾಗಿ ಆಚರಿಸುತ್ತಿದ್ದೇವೆ. ಆದರೆ, ರಾಜಕೀಯ ಲಾಭಕ್ಕಾಗಿ ಧರ್ಮಧರ್ಮಗಳ ನಡುವೆ ಶಾಂತಿ ಕದಡುವ ಯತ್ನ ಮಾಡಲಾಗುತ್ತಿದೆ ಎಂದು ಬೇಸರ ವ್ಯಕ್ತಪಡಿಸಿದರು.
ಸುದ್ದಿಗೋಷ್ಠಿಯಲ್ಲಿ ನಾಪೋಕ್ಲು ಜಮಾಅತ್‌ನ ಮಾಜಿ ಅಧ್ಯಕ್ಷ ಅಜೀಜ್ ಹಾಗೂ ಜಮಾಅತ್‌ನ ಉಪಾಧ್ಯಕ್ಷ ಜಿ.ಎಂ.ಬದ್ರುದ್ದೀನ್ ಉಪಸ್ಥಿತರಿದ್ದರು.







