
ಮಡಿಕೇರಿ NEWS DESK ಮಾ.2 : ಕೊಡವ ಹಾಕಿ ಅಕಾಡೆಮಿ, ಹಾಕಿ ಕರ್ನಾಟಕ, ಹಾಕಿ ಕೂರ್ಗ್ ಹಾಗೂ ಈ ಬಾರಿಯ ಹಾಕಿ ಉತ್ಸವ ಆಯೋಜಕ ಚೇನಂಡ ಕುಟುಂಬ ಸಂಯುಕ್ತವಾಗಿ ಸಭೆ ನಡೆಸಿ ಪ್ರಮುಖ ನಿರ್ಣಯಗಳನ್ನು ಕೈಗೊಂಡಿವೆ. ವಿರಾಜಪೇಟೆ ಕೊಡವ ಸಮಾಜದ ಆವರಣದಲ್ಲಿ ಕೊಡವ ಹಾಕಿ ಅಕಾಡೆಮಿಯ ಅಧ್ಯಕ್ಷ ಪಾಂಡಂಡ ಬೋಪಣ್ಣ ಅವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಏಪ್ರಿಲ್ ಮತ್ತು ಮೇ ತಿಂಗಳಿನಲ್ಲಿ ನಾಪೋಕ್ಲುವಿನಲ್ಲಿ ನಡೆಯುವ ಚೇನಂಡ ಕಪ್ ಕೊಡವ ಹಾಕಿ ಉತ್ಸವಕ್ಕೆ ಸಂಪೂರ್ಣ ಬೆಂಬಲ ಮತ್ತು ಸಹಕಾರವನ್ನು ಘೋಷಿಸಲಾಯಿತು. ಹಾಕಿ ಕೂರ್ಗ್ ಸಂಸ್ಥೆ ತಾಂತ್ರಿಕ ಸಹಕಾರ ನೀಡಲು ಒಪ್ಪಿಗೆ ಸೂಚಿಸಿತು. ಹಾಕಿ ಅಂಪೈರ್ ಗಳಿಗೆ ನೀಡಲಾಗುವ ವೃತ್ತಿಪರ ಶುಲ್ಕಗಳು ಮತ್ತು ತಾಂತ್ರಿಕತೆಯ ಕುರಿತು ಚರ್ಚಿಸಲಾಯಿತು. ತಾಂತ್ರಿಕ ಸಿಬ್ಬಂದಿಯ ಪ್ರಯಾಣ ಭತ್ಯೆಯ ಬಗ್ಗೆ ನಿರ್ಧರಿಸಲಾಯಿತು. ಚೇನಂಡ ಕುಟುಂಬಸ್ಥರು ಹಾಕಿ ಉತ್ಸವದ ಸಿದ್ಧತೆಯನ್ನು ವಿವರಿಸಿದರು. ಕಳೆದ ಬಾರಿ ಮುದ್ದಂಡ ಕಪ್ ಹಾಕಿ ಉತ್ಸವ ಸಮಿತಿ ಪರಿಚಯಿಸಿದಂತೆ ಮಹಿಳಾ ಹಾಕಿ 5ಎ ತಂಡವನ್ನು ಮುಂದುವರಿಸಲಾಗುವುದು ಎಂದು ಪ್ರಮುಖರು ತಿಳಿಸಿದರು. ಇದೇ ಸಂದರ್ಭ ನಾಯಕಂಡ ದೀಪಕ್ ಚೆಂಗಪ್ಪ ಅವರನ್ನು ಪಂದ್ಯಾವಳಿಯ ನಿರ್ದೇಶಕರನ್ನಾಗಿ ನೇಮಿಸಲಾಯಿತು. ಸಭೆಯಲ್ಲಿ ಹಾಕಿ ಕರ್ನಾಟಕದ ಎ.ಬಿ.ಸುಬ್ಬಯ್ಯ, ಕೂತಂಡ ಪೂಣಚ್ಚ, ಹಾಕಿ ಕೂರ್ಗ್ ನ ಪಳಂಗಂಡ ಲವ, ಅಮ್ಮಂಡೀರ ಚೇತನ್, ಯಮುನಾ ಚೆಂಗಪ್ಪ, ಬಡಕಡ ದೀನ, ಅಂಜಪರವಂಡ ಕುಶ, ಕೊಡವ ಹಾಕಿ ಅಕಾಡೆಮಿಯ ಚೆಪ್ಪುಡಿರ ಪೂಣಚ್ಚ, ಕೂತಂಡ ಸುರೇಶ್ ಅಪ್ಪಯ್ಯ, ಬಾಚಿನಾಡಂಡ ಪ್ರದೀಪ್, ಕುಲ್ಲೇಟಿರ ಅರುಣ್ ಬೇಬ, ನಾಯಕಂಡ ದೀಪಕ್ ಚೆಂಗಪ್ಪ, ಕಂಬೀರಂಡ ರಾಖಿ, ಮುಕ್ಕಾಟಿರ ಸೋಮಯ್ಯ, ಸುಳ್ಳಿಮಾಡ ದೀಪಕ್, ಮಂಡೇಪಂಡ ಮುಖೇಶ್, ಕಲಿಯಂಡ ಸಂಪನ್, ಮುದ್ದಂಡ ರಶಿನ್ ಸುಬ್ಬಯ್ಯ ಹಾಗೂ ಚೇನಂಡ ಕುಟುಂಬದ ಪ್ರಮುಖರು ಉಪಸ್ಥಿತರಿದ್ದರು.








