ಮಡಿಕೇರಿ NEWS DESK ಮಾ.6 : ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು 17 ನೇ ಬಜೆಟ್ ಮಂಡಿಸಿ ದಾಖಲೆ ಮಾಡಿದ್ದಾರೆ, ಅದೇ ರೀತಿ ರಾಜ್ಯದ ಜನರನ್ನು ಸಾಲದ ಶೂಲಕ್ಕೆ ತಳ್ಳಿದ ದಾಖಲೆಯನ್ನೂ ಬರೆದಿದ್ದಾರೆ. ಈ ಬಜೆಟ್ ನಲ್ಲಿ ವಿರಾಜಪೇಟೆ ಕ್ಷೇತ್ರದ ನಿರೀಕ್ಷೆಗಳು ಹುಸಿಯಾಗಿದೆ ಎಂದು ವಿರಾಜಪೇಟೆ ಬಿಜೆಪಿ ಮಂಡಲದ ವಕ್ತಾರ ಚೆಪ್ಪುಡಿರ ರಾಕೇಶ್ ದೇವಯ್ಯ ಆರೋಪಿಸಿದ್ದಾರೆ. ಮುಖ್ಯಮಂತ್ರಿಗಳು 1.32 ಲಕ್ಷ ಕೋಟಿ ರೂ. ಸಾಲ ಮಾಡುವ ಕುರಿತು ಬಜೆಟ್ ನಲ್ಲಿ ಘೋಷಿಸಿದ್ದಾರೆ. ಆ ಮೂಲಕ ಕಾಂಗ್ರೆಸ್ ಸರಕಾರÀ ರಾಜ್ಯದ ಜನರನ್ನು ಸಾಲಗಾರರನ್ನಾಗಿ ಮಾಡಿದೆ. ಸರಕಾರಕ್ಕೆ ಕಾವೇರಿ ತವರು ಜಿಲ್ಲೆ ಕೊಡಗಿನ ಅಭಿವೃದ್ಧಿಯ ಬಗ್ಗೆ ಯಾವುದೇ ಕಾಳಜಿ ಕಾಣುತ್ತಿಲ್ಲ. ಜಿಲ್ಲೆಗೆ ಹೊಸ ಯೋಜನೆಗಳನ್ನೇ ಘೋಷಿಸಿಲ್ಲ, ಪ್ರವಾಸೋದ್ಯಮದ ಅಭಿವೃದ್ಧಿಯ ಬಗ್ಗೆ ಉಲ್ಲೇಖವಿಲ್ಲ. ಮುಖ್ಯಮಂತ್ರಿಗಳಿಗೆ ಆತ್ಮೀಯರಾಗಿರುವ ವಿರಾಜಪೇಟೆ ಕ್ಷೇತ್ರದ ಶಾಸಕರು ಕ್ಷೇತ್ರಕ್ಕೆ ವಿಶೇಷ ಪ್ಯಾಕೇಜ್ ತಂದು ಅಭಿವೃದ್ಧಿ ಕಾರ್ಯಗಳಿಗೆ ಆದ್ಯತೆ ನೀಡುತ್ತಾರೆ ಎನ್ನುವ ನಿರೀಕ್ಷೆ ಜನರಲ್ಲಿತ್ತು. ಆದರೆ ನಿರೀಕ್ಷೆಗಳು ಹುಸಿಯಾಗಿದೆ, ವನ್ಯಜೀವಿಗಳ ದಾಳಿ ತಡೆಗೆ ವಿಶೇಷ ಅನುದಾನ ಘೋಷಿಸಿಲ್ಲ. ಪ್ರವಾಸೋದ್ಯಮ ಅಭಿವೃದ್ಧಿಗೆ ವಿಶೇಷ ಪ್ಯಾಕೇಜ್ ನೀಡಿಲ್ಲ, ಜೀವನದಿ ಕಾವೇರಿ ಕಲುಷಿತ ತಡೆಗೆ ಯೋಜನೆ ರೂಪಿಸಿಲ್ಲ, ಬಡವರಿಗೆ ನಿವೇಶನ, ವಸತಿ ಸೌಲಭ್ಯ ನೀಡುವ ಕುರಿತು ಸರಕಾರದ ಭರವಸೆಗಳಿಲ್ಲ. ವಿರಾಜಪೇಟೆ ಕ್ಷೇತ್ರದಲ್ಲಿ ಕಳೆದ ವರ್ಷದ ಬಜೆಟ್ ನಲ್ಲಿ ಘೋಷಿಸಿದ ಯೋಜನೆಗಳೇ ಆರಂಭಗೊಳ್ಳದೆ ನೆನೆಗುದಿಗೆ ಬಿದ್ದಿದೆ. ಪೊನ್ನಂಪೇಟೆಯಲ್ಲಿ ಹೊಸದಾಗಿ ಸಮುದಾಯ ಆರೋಗ್ಯ ಕೇಂದ್ರವನ್ನು ಆರಂಭಿಸಲಾಗುವುದು. ವಿರಾಜಪೇಟೆಯಲ್ಲಿ 400 ಹಾಸಿಗೆ ಸಾಮರ್ಥ್ಯದ ಆಸ್ಪತ್ರೆಯನ್ನು ಸ್ಥಾಪಿಸಲಾಗುವುದು ಎಂದು ಮುಖ್ಯಮಂತ್ರಿಗಳು ಕಳೆದ ಬಜೆಟ್ ನಲ್ಲಿ ಘೋಷಿಸಿದ್ದರು. ಆದರೆ ಕಾಮಗಾರಿ ಇಲ್ಲಿಯವರೆಗೆ ನಿರೀಕ್ಷಿತ ಮಟ್ಟದಲ್ಲಿ ಆರಂಭಗೊoಡಿಲ್ಲ ಎಂದು ರಾಕೇಶ್ ದೇವಯ್ಯ ಟೀಕಿಸಿದ್ದಾರೆ.







