ಮಡಿಕೇರಿ, NEWS DESK ಮಾ.೯ : ಕಾಡಾನೆ ದಾಳಿಗೆ ಸಿಲುಕಿ ಗ್ರಾ.ಪಂ ಮಾಜಿ ಸದಸ್ಯರೊಬ್ಬರು ಮೃತಪಟ್ಟಿರುವ ಘಟನೆ ಕುಶಾಲನಗರ ತಾಲ್ಲೂಕಿನ ವಾಲ್ನೂರು ತ್ಯಾಗತ್ತೂರು ಗ್ರಾ.ಪಂ ವ್ಯಾಪ್ತಿಯ ಬಾಳೆಗುಂಡಿ ಗಿರಿಜನ ಹಾಡಿಯ ಮೀನುಕೊಲ್ಲಿ ಎಂಬಲ್ಲಿ ನಡೆದಿದೆ.
ನಂಜರಾಯಪಟ್ಟಣ ಗ್ರಾ.ಪಂ ಮಾಜಿ ಸದಸ್ಯೆ, ಬಾಳೆಗುಂಡಿ ಹಾಡಿ ನಿವಾಸಿ ಸ್ವಾಮಿ ಎಂಬುವವರ ಪತ್ನಿ ಜಲಜಾಕ್ಷಿ (೫೩) ಮೃತ ದುರ್ದೈವಿ. ಇಂದು ಬೆಳಿಗ್ಗೆ ಹಾಡಿ ಮುಂಭಾಗದಲ್ಲಿ ಆರು ಮಹಿಳೆಯರು ಹೋಗುತ್ತಿದ್ದಾಗ ಕಾಡಾನೆ ಏಕಾಏಕಿ ದಾಳಿ ಮಾಡಿದೆ. ಜಲಜಾಕ್ಷಿ ಅವರು ತೀವ್ರವಾಗಿ ಗಾಯಗೊಂಡು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಉಳಿದವರು ಓಡಿ ಹೋಗಿ ತಪ್ಪಿಸಿಕೊಂಡಿದ್ದಾರೆ.
ಸ್ಥಳಕ್ಕೆ ಎಸಿಎಫ್ ಗೋಪಾಲ್ ಸೇರಿದಂತೆ ವಲಯ ಅರಣ್ಯಾಧಿಕಾರಿಗಳು ಭೇಟಿ ನೀಡಿ ಪರಿಶೀಲಿಸಿದರು. ಇದೇ ಸಂದರ್ಭ ಕಾಡಾನೆ ಹಾವಳಿ ತಡೆಗಟ್ಟಬೇಕು, ಸ್ಥಳದಲ್ಲೇ ಪರಿಹಾರ ಘೋಷಿಸಬೇಕು ಎಂದು ಹಾಡಿ ನಿವಾಸಿಗಳು ಒತ್ತಾಯಿಸಿದರು.
ಕಾಡಾನೆ ಹಾವಳಿ ತಡೆಗಟ್ಟಲು ಅರಣ್ಯ ಇಲಾಖೆಯಿಂದ ಈ ಭಾಗದಲ್ಲಿ ಕೈಗೊಂಡಿರುವ ಯೋಜನೆಗಳು ವಿಫಲವಾಗಿವೆ ಎಂದು ನಂಜರಾಯಪಟ್ಟಣ ಗ್ರಾ.ಪಂ ಮಾಜಿ ಅಧ್ಯಕ್ಷ ಸಿ.ಎಲ್.ವಿಶ್ವ ಆರೋಪಿಸಿದರು.

ನಂಜರಾಯಪಟ್ಟಣ ಗ್ರಾ.ಪಂ ಮಾಜಿ ಸದಸ್ಯ ಗಿರಿಜನ ಮುಖಂಡ ಆರ್.ಕೆ.ಚಂದ್ರ ಮಾತನಾಡಿ ಆಗಾಗ್ಗೆ ಉಪಟಳ ನೀಡುತ್ತಿರುವ ಕಾಡಾನೆ ಹಾವಳಿ ನಿಯಂತ್ರಣಕ್ಕೆ ಇಲಾಖೆ ಸೂಕ್ತ ರೀತಿಯಲ್ಲಿ ಯೋಜನೆ ರೂಪಿಸಬೇಕಿದೆ ಎಂದು ಒತ್ತಾಯಿಸಿದರು.
ಹಿರಿಯ ಅಧಿಕಾರಿಗಳ ಸೂಚನೆಯಂತೆ ಮೃತರ ಕುಟುಂಬಕ್ಕೆ ಇಲಾಖೆ ವತಿಯಿಂದ ಅಗತ್ಯ ಪರಿಹಾರ ಒದಗಿಸಲು ಕ್ರಮವಹಿಸಲಾಗಿದೆ. ಉಪಟಳ ನೀಡುತ್ತಿರುವ ಕಾಡಾನೆ ಪತ್ತೆ ಕಾರ್ಯ ನಡೆಸಿ ಇಲಾಖೆ ಅನುಮತಿಯೊಂದಿಗೆ ಸೆರೆ ಹಿಡಿಯಲು ಮುಂದಾಗುವುದಾಗಿ ಎಸಿಫ್ ಗೋಪಾಲ್ ಭರವಸೆ ನೀಡಿದರು. ಕುಶಾಲನಗರ ತಾಲ್ಲೂಕು ತಹಸೀಲ್ದಾರ್ ಕಿರಣ್ ಜಿ.ಗೌರಯ್ಯ ಭೇಟಿ ನೀಡಿ ಪರಿಶೀಲಿಸಿದರು.
ವಾಲ್ನೂರು-ತ್ಯಾಗತ್ತೂರು ಗ್ರಾ.ಪಂ ಮಾಜಿ ಅಧ್ಯಕ್ಷೆ ಮಂಜುಳಾ, ಉಪಾಧ್ಯಕ್ಷ ಮನುಮಹೇಶ್ ಸೇರಿದಂತೆ ಮಾಜಿ ಸದಸ್ಯರುಗಳು, ಜಿ.ಪಂ ಮಾಜಿ ಸದಸ್ಯೆ ಸುನಿತಾ ಮಂಜುನಾಥ್ ಮತ್ತಿತರರು ಸ್ಥಳದಲ್ಲಿ ಇದ್ದರು. ಫೋಟೋ :: ಜಲಜಾಕ್ಷಿ






