
ಸೋಮವಾರಪೇಟೆ ಮಾ.16 NEWS DESK : ಶ್ರೀ ಆಂಜನೇಯಸ್ವಾಮಿ ದೇವಾಲಯ ಸಮಿತಿ ವತಿಯಿಂದ ಮಾ.27 ರಂದು ಅರ್ಥಪೂರ್ಣವಾಗಿ ಶ್ರೀ ರಾಮನವಮಿ ಉತ್ಸವ ಆಚರಿಸಲಾಗುವುದು ಎಂದು ಶ್ರೀ ಆಂಜನೇಯ ದೇವಾಲಯ ಸಮಿತಿ ಅಧ್ಯಕ್ಷ ಸಿ.ಪಿ.ಗೋಪಾಲ್ ಹೇಳಿದರು. ಮಾ.19 ರಿಂದ 27 ರ ತನಕ ಪ್ರತಿದಿನ ಬೆಳಿಗ್ಗೆ ಮತ್ತು ಸಂಜೆ 6 ಗಂಟೆಯಿಂದ 8 ಗಂಟೆ ತನಕ ವಿಶೇಷ ಪೂಜೆ ನಡೆಯಲಿದೆ. 19 ರಿಂದ ದಿನಕ್ಕೊಂದರಂತೆ ಶ್ರೀಗಂಧ, ವಿಳ್ಯೆದೆಲೆ, ಬೆಣ್ಣೆ, ಕೇಸರಿ, ತುಳಸಿ, ಕುಂಕುಮ, ಹೂವಿನ ಮತ್ತು ಮುತ್ತಿನ ಆಲಂಕಾರರನ್ನು ಶ್ರೀರಾಮನ ಉತ್ಸವ ಮೂರ್ತಿಗೆ ಮಾಡಿ ಪೂಜೆ ಸಲ್ಲಿಸಲಾಗುತ್ತದೆ ಎಂದು ಸುದ್ದಿಗೋಷ್ಠಿಯಲ್ಲಿ ತಿಳಿಸಿದರು. 27 ರ ಸಂಜೆ 6 ಗಂಟೆಯಿಂದ ಶ್ರೀ ರಾಮಾಂಜನೇಯೋತ್ಸವ ಮೆರವಣಿಗೆ ಪಟ್ಟಣದ ನಿಗದಿತ ರಸ್ತೆಯಲ್ಲಿ ನಡೆಯಲಿದೆ. ಕಳೆದ 60 ವರ್ಷಗಳಿಂದಲೂ ಅಂಜನೇಯ ದೇವಾಲಯದಲ್ಲಿ ರಾಮನವಮಿ ಆಚರಿಸಿ, ಮೆರವಣಿಗೆ ಮಾಡಲಾಗುತ್ತಿದೆ. 27 ರಂದು ಪಾನಕ ವಿತರಣೆ, ಅನ್ನದಾನ ನಡೆಯಲಿದೆ ಎಂದು ಹೇಳಿದರು. ಅಂದಾಜು 4.50 ಕೋಟಿ ರೂ.ಗಳ ವೆಚ್ಚದಲ್ಲಿ ಆಂಜನೇಯ ದೇವಾಲಯದ ನಿರ್ಮಾಣವಾಗುತ್ತಿದ್ದು, ಈಗಾಗಲೆ ಶೇ.70ರಷ್ಟು ಕೆಲಸಗಳು ಮುಗಿದಿವೆ ಎಂದು ದೇವಾಲಯ ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ಸೀತಾರಾಮ್ ಹೇಳಿದರು. ದೇವಾಲಯ ನಿರ್ಮಾಣಕ್ಕೆ ಆನೇಕ ದಾನಿಗಳು ಧನಸಹಾಯ ಮಾಡಿದ್ದಾರೆ. ಇನ್ನು ಒಂದು ಕೋಟಿ ರೂ.ಗಳಷ್ಟು ಕಾಮಗಾರಿ ನಡೆಯಬೇಕಿದೆ ಎಂದು ಹೇಳಿದರು. ಸುದ್ದಿಗೋಷ್ಟಿಯಲ್ಲಿ ಸಮಿತಿ ನಿರ್ದೇಶಕರಾದ ಕೆ.ಜಿ.ಸುರೇಶ್, ಆನಂದ್ ಇದ್ದರು.









