
ಮಡಿಕೇರಿ ಮಾ.21 NEWS DESK : ರೋಟರಿ ಮಡಿಕೇರಿ ವತಿಯಿಂದ ಮೂರ್ನಾಡು ಎಜುಕೇಷನ್ ಟ್ರಸ್ಟ್ ವಿದ್ಯಾ ಸಂಸ್ಥೆಯ ಪ್ರೌಢ ಶಾಲಾ ವಿದ್ಯಾರ್ಥಿನಿಯರಿಗೆ ಗರ್ಭಕಂಠದ ಕ್ಯಾನ್ಸರ್ ನಿರೋಧಕ ಲಸಿಕೆ ವಿತರಿಸಲಾಯಿತು. ಗರ್ಭಕಂಠದ ಕ್ಯಾನ್ಸರ್ ಕುರಿತು ವಿದ್ಯಾ ಸಂಸ್ಥೆಯ ಸಭಾಂಗಣದಲ್ಲಿ ನಡೆದ ಲಸಿಕೆ ವಿತರಣಾ ಕಾರ್ಯಕ್ರಮದಲ್ಲಿ 13 ವಿದ್ಯಾರ್ಥಿಗಳು ಲಸಿಕೆ ಪಡೆದುಕೊಂಡರು. ಲಸಿಕೆ ನೀಡಿ ಮಾತನಾಡಿದ ಸ್ತ್ರೀರೋಗ ತಜ್ಞೆ ಡಾ.ಸುಮಂಗಲಿ ಅವರು ಇತ್ತೀಚಿನ ದಿನಗಳಲ್ಲಿ ಗರ್ಭಕಂಠದ ಕ್ಯಾನ್ಸರ್ ಮಹಿಳೆಯರನ್ನು ಕಾಡುತ್ತಿದ್ದು, ಜಾಗೃತಿ ಅಗತ್ಯ. 9 ರಿಂದ 14 ವಯಸ್ಸಿನ ಮಕ್ಕಳಿಗೆ ಹೆಚ್‍ಪಿವಿ ಲಸಿಕೆ ನೀಡಲಾಗುತ್ತಿದೆ. ಈ ರೋಗದ ಬಗ್ಗೆ ಮಕ್ಕಳಲ್ಲಿ ಹಾಗೂ ಪೋಷಕರಲ್ಲಿ ಅರಿವು ಮೂಡಿಸುವ ಅನಿವಾರ್ಯತೆ ಇದೆ ಎಂದರು. *ನಿರಂತರ ಜಾಗೃತಿ*
ಕಳೆದ ವರ್ಷ ರೋಟರಿ ವತಿಯಿಂದ 51 ವಿದ್ಯಾರ್ಥಿನಿಯರಿಗೆ ಹೆಚ್‍ಪಿವಿ ಲಸಿಕೆ ನೀಡಲಾಗಿತ್ತು. ಈ ಬಾರಿ 250 ವಿದ್ಯಾರ್ಥಿನಿಯರ ಗುರಿ ಹೊಂದಲಾಗಿತ್ತಾದರೂ 13 ವಿದ್ಯಾರ್ಥಿನಿಯರು ಸ್ವಯಂ ಇಚ್ಛೆಯಿಂದ ಲಸಿಕೆ ಪಡೆದುಕೊಂಡಿದ್ದಾರೆ. ಸರಕಾರದಿಂದ ಲಸಿಕೆ ನೀಡುವ ಯೋಜನೆಯ ಮೂಲಕ ಲಸಿಕೆ ಪಡೆದುಕೊಳ್ಳುವ ಇಂಗಿತವನ್ನು ಇತರ ವಿದ್ಯಾರ್ಥಿಗಳು ವ್ಯಕ್ತಪಡಿಸಿದರು. ಗರ್ಭಕಂಠದ ಕ್ಯಾನ್ಸರ್ ಬಗ್ಗೆ ರೋಟರಿ ಸಂಸ್ಥೆ ನಿರಂತರವಾಗಿ ವಿದ್ಯಾರ್ಥಿನಿಯರಲ್ಲಿ ಜಾಗೃತಿ ಮೂಡಿಸುತ್ತಿದೆ. ಲಸಿಕೆ ವಿತರಣಾ ಕಾರ್ಯಕ್ರಮಕ್ಕೆ ಪೂರ್ವಭಾವಿಯಾಗಿ ಇತ್ತೀಚೆಗೆ ಮೂರ್ನಾಡು ಎಜುಕೇಷನ್ ಟ್ರಸ್ಟ್ ವಿದ್ಯಾ ಸಂಸ್ಥೆಯಲ್ಲಿ ಜಾಗೃತಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಹೆಚ್‍ಪಿವಿ ಲಸಿಕೆ ಕುರಿತು ಡಾ.ಸುಮಂಗಲಿ ಅವರು ವಿದ್ಯಾರ್ಥಿನಿಯರಲ್ಲಿ ಅರಿವು ಮೂಡಿಸಿದ್ದರು.
ರೋಟರಿ ಮಡಿಕೇರಿ ಅಧ್ಯಕ್ಷೆ ಲಲಿತಾ ರಾಘವನ್, ಸಮುದಾಯ ಸೇವಾ ವಿಭಾಗದ ನಿರ್ದೇಶಕ ಸುದಯ್ ನಾಣಯ್ಯ, ಮಲ್ಲಿಗೆ ಪೈ, ಡಾ.ಸುಮಂಗಲಿ ಅವರ ನೇತೃತ್ವದಲ್ಲಿ ಆರೋಗ್ಯ ಸಿಬ್ಬಂದಿಗಳು, ವಿದ್ಯಾ ಸಂಸ್ಥೆಯ ಪ್ರಾಂಶುಪಾಲರು, ಶಿಕ್ಷಕರು, ಪೋಷಕರು ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು. ಸ್ಥಳೀಯ ಸರಕಾರಿ ಪ್ರೌಢ ಶಾಲೆಯ ವಿದ್ಯಾರ್ಥಿಗಳು ಕೂಡ ಜಾಗೃತಿ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಗರ್ಭಕಂಠದ ಕ್ಯಾನ್ಸರ್ ಕುರಿತು ಮಾಹಿತಿ ಪಡೆದರು.









