
ವಿರಾಜಪೇಟೆ ಮಾ.21 NEWS DESK : ವಿರಾಜಪೇಟೆಯಲ್ಲಿ ಮುತ್ತಪ್ಪ ತೆರೆ ಜಾತ್ರೆ ಮಹೋತ್ಸವ ಶ್ರದ್ಧಾಭಕ್ತಿಯಿಂದ ನೆರವೇರಿತು. ವಿರಾಜಪೇಟೆ ಮೀನುಪೇಟೆಯ ಚೈತನ್ಯ ಮಠಪುರ ಶ್ರೀ ಮುತ್ತಪ್ಪ ದೇವಾಲಯದಲ್ಲಿ 82ನೇ ವರ್ಷದ ಶ್ರೀ ಮುತ್ತಪ್ಪ ತೆರೆ ಮಹೋತ್ಸವವು 3 ದಿನಗಳ ಕಾಲ ಸಕಲ ಪೂಜಾ ವಿಧಿ ವಿಧಾನಗಳೊಂದಿಗೆ ನೆರವೇರಿತು. ಸಾವಿರಾರು ಭಕ್ತಾಧಿಗಳು ದೇವರ ದರ್ಶನ ಪಡೆದರು. ಮುತ್ತಪ್ಪ, ವಸೂರಿಮಾಲಾ, ತಿರುವಪ್ಪನ್, ಗುಳಿಗ, ವಿಷ್ಣುಮೂರ್ತಿ, ಪೌವ್ವದಿ ದೇವತೆಗಳು ಭಕ್ತಾಧಿಗಳಿಗೆ ದರ್ಶನ ನೀಡಿದವು. ಪಯಂಗುತ್ತಿ ಹಾಗೂ ತುಲಾಭಾರ, ಇನ್ನಿತರ ಹರಕೆ ಒಪ್ಪಿಸಿದರು. ಶ್ರೀ ಮುತ್ತಪ್ಪ ದೇವರ ಕಲಶ ಮೆರವಣಿಗೆ ಹಾಗೂ ತಾಲಪ್ಪೋಲಿ ಮೆರವಣಿಗೆ ತೆಲುಗರ ಬೀದಿಯ ಮಾರಿಯಮ್ಮ ದೇವಾಲಯದ ಬಳಿಯಿಂದ ಹೊರಟಿತು. ನಗರದ ಮುಖ್ಯ ರಸ್ತೆಗಳಲ್ಲಿ ಪ್ರಸಿದ್ಧ ಕಲಾ ತಂಡದವರಿಂದ ವಿವಿಧ ಕಲಾ ರೂಪಗಳೊಂದಿಗೆ ನಡೆಯಿತು. ಗಣಪತಿ ಹೋಮ, ಬಳಿಕ ಧ್ವಜಾರೋಹಣ ಮಾಡುವುದರೊಂದಿಗೆ ಹಬ್ಬಕ್ಕೆ ಚಾಲನೆ ನೀಡಲಾಗಿತ್ತು. ಸಂಜೆ ಶ್ರೀ ಮುತ್ತಪ್ಪ ವೆಳ್ಳಾಟಂ ನಡೆಯಿತು. ಬುಧವಾರ ಮದ್ಯಾಹ್ನ ದೇವರ ಮಲೆ ಇಳಿಸುವುದು, ಸಂಜೆ ಶ್ರೀ ಮುತ್ತಪ್ಪ ವೆಳ್ಳಾಟಂ, ಬಳಿಕ ತೆಲುಗರ ಬೀದಿಯಿಂದ ಮೊದ ಕಳಶದೊಂದಿಗೆ ತಾಲಪೆÇ್ಪಲಿ ಮೆರವಣಿಗೆ ನಡೆಯಿತು. ಮೆರವಣಿಗೆಯಲ್ಲಿ ವಿವಿಧ ಚಂಡೆ ಮೇಳ, ವಾದ್ಯ ಗೋಷ್ಟಿಯೊಂದಿಗೆ ದೇವಾಲಯಕ್ಕೆ ಆಗಮಿಸಿ ಪೂಜೆ ಸಲ್ಲಿಸಲಾಯಿತು. ಪಂಜರಪೇಟೆ ಮುತ್ತಪ್ಪ ಸೇವಾ ಸಮಿತಿ, ಹಾಗೂ ಕಲ್ಲುಬಾಣೆಯ ಮುತ್ತಪ್ಪ ಸೇವಾ ಸಮಿತಿ ವತಿಯಿಂದ ಕಳಶ ಮೆರವಣಿಗೆ ನಡೆಯಿತು. ಗುರುವಾರ ಪ್ರಾತಃಕಾಲ 1 ಗಂಟೆಗೆ ಶಾಸ್ತಪ್ಪನ್ ಹಾಗೂ ಗುಳಿಗನ ಕೋಲ, 4 ಗಂಟೆಗೆ ತಿರುವಪ್ಪನ ತೆರೆ, ಭಗವತಿ ತೆರೆ, ವಸೂರಿಮಾಲ, ವಿಷ್ಣುಮೂರ್ತಿ ತೆರೆ ನಡೆಯಿತು. ಮದ್ಯಾಹ್ನ ಅನ್ನ ಸಂತರ್ಪಣೆ ಬಳಿಕ 3 ಗಂಟೆಗೆ ವಿಷ್ಣು ಮೂರ್ತಿ ವಾರಣದೊಂದಿಗೆ 2026 ಸಾಲಿನ ಶ್ರೀ ಮುತ್ತಪ್ಪ ತೆರೆ ಮಹೋತ್ಸವಕ್ಕೆ ತೆರೆ ಎಳೆಯಲಾಯಿತು. ಜಾತ್ರೆಯ ಅಂಗವಾಗಿ ಮೀನುಪೇಟೆ ಮುಖ್ಯರಸ್ತೆಯುದ್ದಕ್ಕೂ ವಿದ್ಯುತ್ ದೀಪಗಳಿಂದ ಅಲಂಕರಿಸಲಾಗಿತ್ತು. ದೇವಾಲಯದ ಆಡಳಿತ ಮಂಡಳಿ ವತಿಯಿಂದ ಮೂರು ದಿನಗಳ ಕಾಲ ಅನ್ನ ಸಂತರ್ಪಣೆ ಮಾಡಲಾಯಿತು. ಹೆಚ್ಚಿನ ಸಂಖ್ಯೆಯಲ್ಲಿ ಭಕ್ತಾಧಿಗಳು ಆಗಮಿಸಿದ್ದು ಕಂಡುಬಂತು. ವಿರಾಜಪೇಟೆಯ ಮಲೆತಿರಿಕೆ ಬೆಟ್ಟದ ಮಲೆ ಮಹಾದೇಶ್ವರ ದೇವರ ಪೇಟೆ ಮೆರವಣಿಗೆ ಹಾಗೂ ಶ್ರೀ ಮುತ್ತಪ್ಪ ದೇವರ ಮೊದಕಳಶ ಹಾಗೂ ತಾಲಪ್ಪೋಲಿ ಮೆರವಣಿಗೆ ಏಕಕಾಲದಲ್ಲಿ ನಡೆದು ವಿರಾಜಪೇಟೆ ಪಟ್ಟಣಕ್ಕೆ ಶೋಭೆ ತಂದು ಭಕ್ತಾಧಿಗಳ ಮನ ತಣಿಸಿತು. ಈ ಸಂದರ್ಭದಲ್ಲಿ ಮುತ್ತಪ್ಪ ದೇವಾಲಯ ಸಮಿತಿಯ ಆಡಳಿತ ಮಂಡಳಿಯ ಅಧ್ಯಕ್ಷ ಟಿ.ಕೆ. ರಾಜನ್, ಹಾಗೂ ಆಡಳಿತ ಮಂಡಳಿಯ ಪದಾಧಿಕಾರಿಗಳು, ಮುತ್ತಪ್ಪ ಮಲಯಾಳಿ ಸಮಾಜದ ಆಡಳಿತ ಮಂಡಳಿ ಅಧ್ಯಕ್ಷ ಸುಮೇಶ್ ಪಿ.ಜಿ. ಹಾಗೂ ಆಡಳಿಯ ಮಂಡಳಿಯ ಪದಾಧಿಕಾರಿಗಳು ಸೇರಿದಂತೆ ಸಮುದಾಯ ಭಾಂಧವರು, ವಿರಾಜಪೇಟೆ ಹಾಗೂ ಸುತ್ತಮುತ್ತಲಿನ ಸಾರ್ವಜನಿಕ ಭಕ್ತಾಧಿಗಳು ತೆರೆ ಮಹೋತ್ಸವದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡಿದ್ದರು.











