
ಮಡಿಕೇರಿ NEWS DESK ಮಾ.26 : ಜಿಲ್ಲಾ ಕೇಂದ್ರ ಮಡಿಕೇರಿಯ ಸಮೀಪದ ಇಬ್ನಿವಳವಾಡಿ ಗ್ರಾಮದ ಸುತ್ತಮುತ್ತ ಕಾಣಿಸಿಕೊಂಡಿದ್ದ ಹುಲಿಯ ಪತ್ತೆಗಾಗಿ ಅರಣ್ಯ ಇಲಾಖೆ ಸಾಕಾನೆಗಳು ಮತ್ತು ಆಧುನಿಕ ಡ್ರೋನ್ ಬಳಸಿ ಕಾರ್ಯಾಚರಣೆ ಆರಂಭಿಸಿದೆ. ಇಬ್ನಿವಳವಾಡಿ ಗ್ರಾಮದ ಕಾಫಿ ತೋಟವೊಂದರಲ್ಲಿ ಅಳವಡಿಸಲಾಗಿದ್ದ ಸಿಸಿ ಕ್ಯಾಮೆರಾದಲ್ಲಿ ಬುಧವಾರ ಬೆಳಗ್ಗೆ ನಿರಾತಂಕವಾಗಿ ಸಂಚರಿಸುತ್ತಿರುವ ಹುಲಿಯ ದೃಶ್ಯ ಸೆರೆಯಾಗಿತ್ತು. ಹುಲಿ ಸಂಚಾರದಿoದ ಗ್ರಾಮಸ್ಥರಲ್ಲಿ ಆತಂಕ ಸೃಷ್ಟಿಯಾಗಿತ್ತು. ಇಬ್ನಿವಳವಾಡಿ ಗ್ರಾಮದ ಪಕ್ಕದಲ್ಲೆ ಇರುವ ಅರಣ್ಯ ಪ್ರದೇಶ, ಸಿಂಕೋನ, ಕಗ್ಗೋಡ್ಲು ಮತ್ತಿತರ ಗ್ರಾಮಗಳಲ್ಲಿ ಹುಲಿ ತೆರಳಿರುವ ಸಾಧ್ಯತೆಗಳಿರುವ ಕಾರಣ ಅರಣ್ಯ ಇಲಾಖೆ, ಹುಲಿಯ ಶೋಧ ಕಾರ್ಯಕ್ಕೆ ಸಾಕಾನೆಗಳನ್ನು ಬಳಸಿಕೊಂಡಿದೆ.
ಸಾಕಾನೆಗಳಾದ ಕಂಜನ್, ಈಶ್ವರ್, ಪ್ರಶಾಂತ್ ಆನೆಗಳನ್ನು ಬಳಸಿಕೊಂಡು ಇಬ್ನಿವಳವಾಡಿ ಸುತ್ತಮುತ್ತಲ ಪ್ರದೇಶಗಳಲ್ಲಿ ಹುಲಿಯ ಶೋಧ ಕಾರ್ಯವನ್ನು ಇಲಾಖಾ ಸಿಬ್ಬಂದಿಗಳು ನಡೆಸುತ್ತಿದ್ದಾರೆ. ಸಾಕಾನೆಗಳೊಂದಿಗೆ ಅತ್ಯಾಧುನಿಕ ಥರ್ಮಲ್ ಡ್ರೋನ್ ಬಳಸಿ ಇಬ್ನಿವಳವಾಡಿ ಸೇರಿದಂತೆ ಸುತ್ತಮುತ್ತಲ ಪ್ರದೇಶಗಳಲ್ಲಿ ಹುಲಿಗಾಗಿ ತೀವ್ರ ಶೋಧ ಕಾರ್ಯ ನಡೆಯುತ್ತಿದೆಯಾದರು, ಇಲ್ಲಿಯವರೆಗು ಸುಳಿವು ದೊರಕಿಲ್ಲ. ಅರಣ್ಯ ಇಲಾಖೆಯ ಡಿಸಿಎಫ್, ಎಸಿಎಫ್ ಒಳಗೊಂಡoತೆ ಹಿರಿಯ ಅಧಿಕಾರಿಗಳ ಉಸ್ತುವಾರಿಯಲ್ಲಿ ಕಾರ್ಯಾಚರಣೆ ಮುಂದುವರೆದಿದೆ.








