
ಗೋಣಿಕೊಪ್ಪ ಮಾ.28 NEWS DESK : ಗೋಣಿಕೊಪ್ಪಲು ಕ್ಲಸ್ಟರ್ ಮಟ್ಟದ ಶಾಲಾ ಅಭಿವೃದ್ಧಿ ಮತ್ತು ಮೇಲುಸ್ತುವಾರಿ ಸಮಿತಿಗಳ ರಚನೆ ಮತ್ತು ನಿರ್ವಹಣೆ ತರಬೇತಿಯು ಗೋಣಿಕೊಪ್ಪ ಸರ್ಕಾರಿ ಮಾದರಿ ಪ್ರಾಥಮಿಕ ಶಾಲೆಯಲ್ಲಿ ನಡೆಯಿತು. ಗೋಣಿಕೊಪ್ಪ ಸರ್ಕಾರಿ ಮಾದರಿ ಪ್ರಾಥಮಿಕ ಶಾಲೆಯ ಎಸ್‍ಡಿಎಂಸಿ ಅಧ್ಯಕ್ಷ ಜಗದೀಶ್ ಜೋಡುಬೀಟಿ ತರಬೇತಿ ಕಾರ್ಯಕ್ರಮನ್ನು ಉದ್ಘಾಟಿಸಿದರು. ನಂತರ ಮಾತನಾಡಿ, ಶಾಲೆಯ ಸವಾರ್ಂಗೀಣ ಅಭಿವೃದ್ಧಿಗೆ ಸಮಿತಿಯ ಕರ್ತವ್ಯ ಪ್ರಮುಖವಾಗಿದೆ. ಮಕ್ಕಳ ಶೈಕ್ಷಣಿಕ ಪ್ರಗತಿಯ ಮುನ್ನೋಟಕ್ಕೆ ಸಮಿತಿ ಪೂರ್ವಕವಾಗಿ ಸ್ಪಂದಿಸಿ ಕಾರ್ಯನಿರ್ವಹಿಸಬೇಕಾದ ಜವಾಬ್ದಾರಿ ಇದೆ ಎಂದು ತಿಳಿಸಿದರು. ಶಾಲೆಯ ಮುಖ್ಯ ಶಿಕ್ಷಕ ಹೆಚ್.ಕೆ.ಕುಮಾರ್ ಮಾತನಾಡಿ, ಎಸ್‍ಡಿಎಂಸಿ ಸಮಿತಿಯು ಶಾಲೆಯ ಅಭಿವೃದ್ಧಿಗೆ ಸ್ಪಂದಿಸುವ ನಿಟ್ಟಿನಲ್ಲಿ ಕಾರ್ಯನಿರ್ವಹಿಸಬೇಕಾಗಿದೆ. ಮಕ್ಕಳ ದಾಖಲಾತಿ ಶಾಲೆಯ ಮೂಲ ಸೌಕರ್ಯಗಳ ಅಗತ್ಯತೆಗಳ ಬಗ್ಗೆ ಪೂರೈಕೆ ಮಾಡುವ ಕರ್ತವ್ಯ ಹೊಂದಿದೆ ಎಂದು ತಿಳಿಸಿದರು. ಗೋಣಿಕೊಪ್ಪ ಕ್ಲಸ್ಟರ್‍ನ ಸಿ.ಆರ್.ಪಿ ರಾಧಾ ಅವರು, ನೂತನವಾಗಿ ಆಯ್ಕೆಯಾದ ಎಸ್‍ಡಿಎಂಸಿ ಅಧ್ಯಕ್ಷರು ಮತ್ತು ಸದಸ್ಯರುಗಳ ಜವಾಬ್ದಾರಿ, ಸಮಿತಿ ನಿರ್ವಹಿಸಬೇಕಾದ ಪ್ರಕಾರಗಳ ಬಗ್ಗೆ ತಿಳಿಸುತ್ತಾ, ಸಮಿತಿ ರಚನೆ ಮತ್ತು ಹಿನ್ನೆಲೆ, ಶಿಕ್ಷಣ ಹಕ್ಕು ಕಾಯ್ದೆ ಅಧ್ಯಕ್ಷರ ಆಯ್ಕೆ, ಮತ್ತು ಸದಸ್ಯ ಕಾರ್ಯದರ್ಶಿಯ ನೇಮಕ, ಸಮಿತಿಯ ನಿರ್ವಹಿಸಬೇಕಾದ ಕರ್ತವ್ಯಗಳ ಬಗ್ಗೆ ಮಾಹಿತಿ ನೀಡಿದರು. ಹಾತೂರು ಶಾಲೆಯ ಮುಖ್ಯ ಶಿಕ್ಷಕಿ ಮಾಲಿನಿ, ಗೋಣಿಕೊಪ್ಪ ಪ್ರೌಢಶಾಲೆಯ ಪ್ರಭಾರ ಮುಖ್ಯ ಶಿಕ್ಷಕಿ ಸೇರಿದಂತೆ ಗೋಣಿಕೊಪ್ಪ ಕ್ಲಸ್ಟರ್ ವ್ಯಾಪ್ತಿಯ ಶಾಲೆಯ ಮುಖ್ಯ ಶಿಕ್ಷಕರು ಎಸ್.ಡಿಎಂಸಿ ಅಧ್ಯಕ್ಷರು ಸದಸ್ಯರುಗಳು ಇದ್ದರು.









