
ಮಡಿಕೇರಿ NEWS DESK ಮಾ.30 : ನಗರದ ಫೀಲ್ಡ್ ಮಾರ್ಷಲ್ ಕೆ.ಎಂ.ಕಾರ್ಯಪ್ಪ ಕಾಲೇಜ್ ನಲ್ಲಿ ಹಿಂದಿ ವಿಭಾಗ ಮತ್ತು ಕೇಂದ್ರೀಯ ಹಿಂದಿ ಸಂಸ್ಥಾನ, ಆಗ್ರಾದ ಪ್ರಾದೇಶಿಕ ಕೇಂದ್ರ ಮೈಸೂರು ಇವರ ಸಹ ಭಾಗಿತ್ವದಲ್ಲಿ 12 ದಿನಗಳ “ಸಂಚೇತನಾ ಶಿಬಿರ” ನಡೆಯಿತು. ಶಿಬಿರವನ್ನು ಉದ್ಘಾಟಿಸಿ ಮಾತನಾಡಿದ ಕೊಡಗು ವಿಶ್ವ ವಿದ್ಯಾನಿಲಯದ ಕುಲಪತಿ ಪ್ರೊ.ಅಶೋಕ ಸಂಗಪ್ಪ ಆಲೂರ ಅವರು ವಿದ್ಯಾರ್ಥಿಗಳ ಪ್ರತಿಭೆ ಅನಾವರಣ, ಭಾಷೆಯ ಕಲಿಕೆ ಮತ್ತು ವಿವಿಧ ಅವಕಾಶಗಳ ಕುರಿತು ಮಾಹಿತಿ ಪಡೆಯಲು 12 ದಿನಗಳ ಈ ಶಿಬಿರ ಹೆಚ್ಚು ಸಹಕಾರಿಯಾಗಿದೆ ಎಂದರು. ಕೇಂದ್ರೀಯ ಹಿಂದಿ ಸಂಸ್ಥಾನದ ಪ್ರಾದೇಶಿಕ ಕೇಂದ್ರ ಮೈಸೂರಿನ ನಿರ್ದೇಶಕ ಪ್ರೊ.ಯೋಗೇಂದ್ರ ಮಿಶ್ರ ಅವರು ಕಾರ್ಯಕ್ರಮದ ಧ್ಯೇಯೋದ್ದೇಶ ಹಾಗೂ ವಿದ್ಯಾರ್ಥಿಗಳು ಕಲಿಯಬೇಕಾದ ವಿಷಯಗಳನ್ನು ವಿವರಿಸಿದರು. ಕೇಂದ್ರೀಯ ಹಿಂದಿ ಸಂಸ್ಥಾನ ಆಗ್ರಾ ನಿರ್ದೇಶಕ ಪ್ರೊ.ವಿನಯ ಬಾಬುರಾವ್ ಕುಲಕರ್ಣಿ ಆನ್ ಲೈನ್ ಮೂಲಕ ಮಾತನಾಡಿ ಶುಭ ಹಾರೈಸಿದರು. ಫೀ.ಮಾ.ಕಾರ್ಯಪ್ಪ ಕಾಲೇಜ್ ನ ಪ್ರಾಂಶುಪಾಲ ಪ್ರೊ.ಮೇಜರ್ ಡಾ.ರಾಘವ ಬಿ. ಅವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಕಾರ್ಯಕ್ರಮದ ಕುರಿತು ವಿದ್ಯಾರ್ಥಿಗಳಿಗೆ ಮಾಹಿತಿ ನೀಡಿ ಸದುಪಯೋಗಪಡಿಸಿಕೊಳ್ಳುವಂತೆ ಕರೆ ನೀಡಿದರು. 12 ದಿನಗಳ ಶಿಬಿರದಲ್ಲಿ ಹಿಂದಿ ಭಾಷೆ, ಸಾಹಿತ್ಯ, ವ್ಯಾಕರಣ ಔದ್ಯೋಗಿಕ ಅವಕಾಶಗಳು, ಮುಂದಿನ ಅಗತ್ಯತೆಗಳು, ಭಾಷೆಯ ಕಲಿಕೆ, ಅದರ ಅನ್ವಯ ಬರವಣಿಗೆ, ಮಾತನಾಡುವ ಕಲೆ, ಓದುವ ಕಲೆ ಮುಂತಾದ ಕಲಾಕೌಶಲ್ಯಗಳ ಸುದೀರ್ಘ ಮಾಹಿತಿಯನ್ನು ನೀಡಲಾಯಿತು.
*ಸಮಾರೋಪ ಸಮಾರಂಭ*
ಸಮಾರೋಪ ಭಾಷಣ ಮಾಡಿದ ಕೊಡಗು ವಿಶ್ವ ವಿದ್ಯಾನಿಲಯದ ಕುಲಪತಿ ಪ್ರೊ.ಅಶೋಕ ಸಂಗಪ್ಪ ಆಲೂರ ಅವರು ವಿದ್ಯಾರ್ಥಿಗಳಲ್ಲಿ ಹುದುಗಿರುವ ಪ್ರತಿಭೆಯನ್ನು ಹೊರ ಹಾಕುವಲ್ಲಿ ಈ ಶಿಬಿರ ಯಶಸ್ವಿಯಾಗಿದೆ ಎಂದು ಪ್ರಶಂಸಿಸಿದರು. ಹಿಂದಿ ಭಾಷೆಯ ಕಲಿಕೆ ಮತ್ತು ಅದರ ವಿಶ್ವಮಟ್ಟದ ಸ್ಥಾನಮಾನದ ಕುರಿತು ಮನವರಿಕೆ ಮಾಡಿಕೊಟ್ಟರು. ಮುಂದಿನ ದಿನಗಳಲ್ಲಿ ಇಂತಹ ಕಾರ್ಯಕ್ರಮಗಳು ಮುಂದುವರೆಯಲಿ ಮತ್ತು ಕೊಡಗು ವಿವಿ ಹಾಗೂ ಇತರ ವಿವಿಗಳೊಂದಿಗೆ ಕೇಂದ್ರೀಯ ಹಿಂದಿ ಸಂಸ್ಥಾನದ ಜೊತೆಗೆ ಒಪ್ಪಂದವನ್ನು ಮಾಡಿಕೊಂಡು ಭಾಷಾ ಕಲಿಕೆಯನ್ನು ಸಮೃದ್ಧಗೊಳಿಸುವ ನಿಟ್ಟಿನಲ್ಲಿ ಸಾಗೋಣ ಎಂದು ಆಶಯ ವ್ಯಕ್ತಪಡಿಸಿದರು. ಕೇಂದ್ರೀಯ ಹಿಂದಿ ಸಂಸ್ಥಾನದ ನಿರ್ದೇಶಕ ಪ್ರೊ.ವಿನಯ್ ಬಾಬುರಾವ್ ಕುಲಕರ್ಣಿ ಅವರು ಆನ್ ಲೈನ್ ನಲ್ಲಿ ಕಾರ್ಯಕ್ರಮದ ಯಶಸ್ಸಿಗೆ ಕಾರಣರಾದವರಿಗೆ ಅಭಿನಂದನೆಗಳನ್ನು ಸಲ್ಲಿಸಿದರು. ಸಂಸ್ಥಾನದ ಉಪಾಧ್ಯಕ್ಷ ಪ್ರೊ.ದುಬೆ ಅವರು ಮಾತನಾಡಿ ಭಾಷೆಯ ಕಲಿಕೆ ಅದರಲ್ಲಿಯೂ ಕನ್ನಡ ಪ್ರದೇಶದಲ್ಲಿ ಕನ್ನಡ ಮತ್ತು ಹಿಂದಿಯ ಸಂಬoಧದ ಕುರಿತಾಗಿ ಮಾಹಿತಿ ನೀಡಿದರು. ಸಮಾರೋಪ ಸಮಾರಂಭದ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದ ಪ್ರಾಂಶುಪಾಲ ಪ್ರೊ.ಮೇಜರ್ ಡಾ.ರಾಘವ ಬಿ. ಅವರು ಹಿಂದಿ ವಿಭಾಗದಿಂದ ನಡೆದ ಈ ಉತ್ತಮ ಕಾರ್ಯಕ್ರಮ ಹೆಚ್ಚು ಅರ್ಥಪೂರ್ಣವಾಗಿತ್ತು. ವಿದ್ಯಾರ್ಥಿಗಳು ಮುಂದಿನ ದಿನಗಳಲ್ಲಿ ಉತ್ತಮ ಬರಹಗಾರರಾಗಿ ಮತ್ತು ಮಾತುಗಾರರಾಗಿ ಉನ್ನತ ಸಾಧನೆ ಮಾಡಬೇಕು ಎಂದು ಕರೆ ನೀಡಿದರು. “ಸಂಚೇತನಾ ಶಿಬಿರ”ದ ಉಸ್ತುವಾರಿಯನ್ನು ವಹಿಸಿದ್ದ ಪ್ರೊಫೆಸರ್ ಶ್ರೀಧರ ಹೆಗಡೆ ಅವರು ಕಾರ್ಯಕ್ರಮ ನಿರೂಪಿಸಿದರು.
ವಿದ್ಯಾರ್ಥಿಗಳಿಗೆ ವಿಶೇಷವಾಗಿ ಬರವಣಿಗೆಯ ಕಲೆಯನ್ನು ಉತ್ತೇಜಿಸುವ ನಿಟ್ಟಿನಲ್ಲಿ “ಕೊಡಗು ಸಂಗಮ” ಎಂಬ ಪತ್ರಿಕೆಯನ್ನು ತಯಾರಿಸಿ ಸಮಾರೋಪ ಸಮಾರಂಭದಲ್ಲಿ ಬಿಡುಗಡೆ ಮಾಡಲಾಯಿತು. ಶಿಬಿರದ ಮೊದಲನೇ ದಿನ ಲಿಖಿತ ಪರೀಕ್ಷೆ ಮಾಡಲಾಯಿತು ಮತ್ತು ಕೊನೆಯ ದಿನ ಆನ್ ಲೈನ್ ನಲ್ಲಿ ಪರೀಕ್ಷೆ ನಡೆಸಿ ಅತಿ ಹೆಚ್ಚು ಅಂಕಗಳಿಸಿದವರಿಗೆ ಪ್ರಥಮ, ದ್ವಿತೀಯ, ಮತ್ತು ತೃತೀಯ ಬಹುಮಾನವನ್ನು ನೀಡಲಾಯಿತು.









