
ಮಡಿಕೇರಿ ಏ.2 NEWS DESK : ಹಿಂದೂ ಸುರಕ್ಷಾ ಸಮಿತಿ ವತಿಯಿಂದ ನಾಪೋಕ್ಲುವಿನಲ್ಲಿ ಹಿಂದೂ ಸಮಾಜದ ಸಂಘಟನೆಯ ಧ್ಯೇಯದೊಂದಿಗೆ ಬೃಹತ್ ಜನಜಾಗೃತಿ ಜಾಥ ನಡೆಯಿತು. ನಾಪೋಕ್ಲು ಮಾರುಕಟ್ಟೆ ಆವರಣದಲ್ಲಿ ಯೋಜಿತ ಸಮಾವೇಶದಲ್ಲಿ ಹಿಂದೂ ಜಾಗರಣ ವೇದಿಕೆಯ ದಕ್ಷಿಣ ಪ್ರಾಂತ್ಯ ಕಾರ್ಯಕಾರಿ ಸಮಿತಿಯ ಶ್ರೀಕಾಂತ್ ಶೆಟ್ಟಿ ಕಾರ್ಕಳ ಮಾತನಾಡಿ, ಹಿಂದು ಸಮಾಜಕ್ಕೆ ಸಂಕಷ್ಟ ತಲೆದೋರಿದಾಗ ಅದನ್ನು ದಿಟ್ಟವಾಗಿ ಎದುರಿಸುವ ಕೆಲಸವನ್ನು ಪ್ರತಿಯೊಬ್ಬರು ಮಾಡಬೇಕಿದೆ ಎಂದರು. ಹಿಂದೂ ವಿರೋಧಿ ಶಕ್ತಿಗಳು ಸಮಾಜವನ್ನು ಕೆಣಕುವ ಮೊದಲು ಸಾವಿರ ಬಾರಿ ಯೋಚಿಸಬೇಕೆಂದು ತಿಳಿಸಿದ ಅವರು, ಇಂದು ಹಿಂದೂ ಸಮಾಜ ಜಾಗೃತವಾಗಿದೆ. ಒಂದು ಸಣ್ಣ ಘಟನೆಗೆ ಜಾಗೃತವಾಗಿ ಕೊಡಗಿನ ವೀರತ್ವ ಶೂರತ್ವವನ್ನು ಎಲ್ಲರಿಗೂ ಮನದಟ್ಟು ಮಾಡಿದೆ. ಹಿಂದೂ ಸಮಾಜದಲ್ಲಿ ಅನೇಕ ಜಾತಿ ಮತಗಳಿದ್ದು, ಇದನ್ನೆ ಅಸ್ತ್ರವನ್ನಾಗಿ ಹಿಂದೂ ಸಮಾಜದೊಳಗಡೆ ಜಾತಿಯ ವಿಷ ಬೀಜ ಬಿತ್ತುವ ಕೆಲಸ ಆಗುತ್ತಿದೆ, ಸಮಾಜದಲ್ಲಿ ಬೆಂಕಿ ಹುಟ್ಟದ ಹಾಗೆ ಜಾಗೃತೆ ವಹಿಸಬೇಕಿದ್ದು, ಇದಕ್ಕಾಗಿ ಹಿಂದೂ ಸಮಾಜ ಸಂಘಟನೆಯಾಗಬೇಕಾದ ಅನಿವಾರ್ಯತೆ ಇದೆ ಎಂದರು. ನಾಪೋಕ್ಲು ಸುರಕ್ಷಾ ಸಮಿತಿ ಸಂಚಾಲಕ ಕರಮಂಡ ಲವ ನಾಣಯ್ಯ ಮಾತನಾಡಿ, ರಾಷ್ಟ್ರೀಯ ಸ್ವಯಂಸೇವಾ ಸಂಘಕ್ಕೆ ನೂರು ವರ್ಷ ತುಂಬಿದ ಹಿನ್ನೆಲೆಯಲ್ಲಿ ದೇಶದಾದ್ಯಂತ 80 ಮಂಡಲಗಳಲ್ಲಿ ಹಿಂದೂ ಸಮಾವೇಶವನ್ನು ಆಯೋಜಿಸಲಾಗಿದೆ. ನಾಲ್ಕುನಾಡಿನಲ್ಲಿ ಹಿಂದೂ ಸಮಾಜಕ್ಕೆ ಯಾರಿಂದಲೂ ಬೆದರಿಕೆ ಬರಬಾರದು. ಸಮಾಜದ ಮಂದಿ ಬದುಕಲು ಭಯ ಮುಕ್ತ ವಾತಾವರಣ ನಿರ್ಮಾಣವಾಗಬೇಕಾಗಿದೆ ಎಂದರು. ವೇದಿಕೆಯಲ್ಲಿ ಕರ್ನಾಟಕ ದಕ್ಷಿಣ ಪ್ರಾಂತ್ಯ ಸಮಿತಿ ಸದಸ್ಯ ಕುಕ್ಕೇರ ಅಜಿತ್, ನಾಪೋಕ್ಲು ಹಿಂದೂ ಸುರಕ್ಷಾ ಸಮಿತಿಯ ಸಹ ಸಂಚಾಲಕರಾದ ರಾಧಾಕೃಷ್ಣ ರೈ, ಪ್ರತೀಪ ಬಿ.ಎಂ. ಉಪಸ್ಥಿತರಿದ್ದರು. ಕಾರ್ಯಕ್ರಮದಲ್ಲಿ ಮಾಜಿ ಶಾಸಕ ಕೆ.ಜಿ.ಬೋಪಯ್ಯ, ರವಿ ಕುಶಾಲಪ್ಪ, ರಾಬಿನ್ ದೇವಯ್ಯ, ಚಲನ್, ಎ.ಕೆ.ಮನುಮುತ್ತಪ್ಪ , ಅಪ್ಪಚ್ಚಿರ ಗೌತಮ್, ಕಲಿಯಂಡ ವಿಠಲ, ನರೇಂದ್ರ ಎಂ.ಎಂ., ಬಿದ್ದಾಟಂಡ ರೋಜಿ ಚಿಣ್ಣಪ್ಪ, ಬಿದ್ದಂಡ ಉಷಾ ದೇವಮ್ಮ, ಹಿಂದೂ ಪರ ಸಂಘಟನೆಗಳ ಪ್ರಮುಖರು ಉಪಸ್ಥಿತರಿದ್ದರು. ಹೇಮಾ ಅಜಿತ್ ಮಾದಾಪುರ ಅವರ ಪ್ರಾರ್ಥನೆಯೊಂದಿಗೆ ಆರಂಭಗೊಂಡ ಕಾರ್ಯಕ್ರಮದಲ್ಲಿ ಹಿಂದೂ ಜಾಗರಣ ವೇದಿಕೆಯ ಜಿಲ್ಲಾ ಸಂಚಾಲಕ ಬೋಜೇಗೌಡ ಸ್ವಾಗತಿಸಿದರು .ಕೊಡಗು ಜಿಲ್ಲಾ ಕಾರ್ಯಕಾರಿ ಸಮಿತಿ ಸದಸ್ಯ ಸುನಿಲ್ ಪ್ರಮಾಣವಚನ ಬೋಧಿಸಿದರು. ಸರಸ್ವತಿ ಮನೋಹರಿ ಭಾರತ್ ಮಾತಾ ಪೂಜನ ಗೀತೆಯನ್ನು ಹಾಡಿದರು ಹಿಂದು ಸುರಕ್ಷಾ ಸಮಿತಿಯ ಸದಸ್ಯ ಚಂದ್ರ ಉಡೊತ್ ನಿರೂಪಿಸಿ, ಕಂಗಂಡ , ಜಾಲಿ ಪೂವಪ್ಪ ವಂದಿಸಿದರು.


















