
ಮಡಿಕೇರಿ ಏ.9 NEWS DESK : ದ್ವಿತೀಯ ಪಿಯುಸಿ ಪರೀಕ್ಷಾ ಫಲಿತಾಂಶ ಪ್ರಕಟಗೊಂಡಿದ್ದು, ಕೊಡಗು ಜಿಲ್ಲೆ 3 ಸ್ಥಾನ ಪಡೆದು ಉತ್ತಮ ಸಾಧನೆ ತೋರಿದೆ. ಕಳೆದ ಬಾರಿ ಶೇ.83.84 ರಷ್ಟು ಫಲಿತಾಂಶ ದಾಖಲಿಸಿ ರಾಜ್ಯದಲ್ಲಿ 4ನೇ ಸ್ಥಾನ ಪಡೆದಿದ್ದರೆ, ಈ ಬಾರಿ ಶೇ.92.34 ಫಲಿತಾಂಶದೊಂದಿಗೆ 3ನೇ ಸ್ಥಾನಕ್ಕೇರಿದೆ. ಈ ಬಾರಿಯೂ ಫಲಿತಾಂಶದಲ್ಲಿ ಬಾಲಕಿಯರೇ ಮೇಲುಗೈ ಸಾಧಿಸಿದ್ದಾರೆ. ಜಿಲ್ಲೆಯಲ್ಲಿ 4745 ವಿದ್ಯಾರ್ಥಿಗಳ ಪೈಕಿ 1898 ಗಂಡು ಹಾಗೂ 2847 ಹೆಣ್ಣು ಮಕ್ಕಳು ಪರೀಕ್ಷೆ ಬರೆದಿದ್ದು, ಈ ಪೈಕಿ ಒಟ್ಟು 4380 ವಿದ್ಯಾರ್ಥಿಗಳು ತೇರ್ಗಡೆಯಾಗಿದ್ದಾರೆ. ಜಿಲ್ಲೆಯ ಒಟ್ಟು 13 ಪಿ.ಯು ಕಾಲೇಜುಗಳು ಶೇ.100ರಷ್ಟು ಫಲಿತಾಂಶ ದಾಖಲಿಸಿವೆ ಎಂದು ಪದವಿ ಪೂರ್ವ ಶಿಕ್ಷಣ ಇಲಾಖೆ ಉಪನಿರ್ದೇಶಕರು ತಿಳಿಸಿದ್ದಾರೆ. *ಕಲಾ ವಿಭಾಗ* ಕಲಾ ವಿಭಾಗದಲ್ಲಿ ಶನಿವಾರಸಂತೆ ಭಾರತಿ ಪದವಿ ಪೂರ್ವ ಕಾಲೇಜಿನ ಫಾತಿಮಾ ಎಸ್.ಎ.(592) ಪ್ರಥಮ, ಕೂಡಿಗೆ ಸರಕಾರಿ ಪದವಿ ಪೂರ್ವ ಕಾಲೇಜಿನ ನಂದಿತಾ(584) ದ್ವಿತೀಯ ಸ್ಥಾನ, ಮೂರ್ನಾಡು ಪಿ.ಯು ಕಾಲೇಜು ಮೂರ್ನಾಡುವಿನ ಕೆ.ಎಂ.ಜುಹಾರ(570) ತೃತೀಯ ಸ್ಥಾನ ಪಡೆದಿದ್ದಾರೆ. *ವಾಣಿಜ್ಯ ವಿಭಾಗ* ವಾಣಿಜ್ಯ ವಿಭಾಗದಲ್ಲಿ ಮಡಿಕೇರಿ ಸಂತ ಮೈಕಲರ ಪಿ.ಯು. ಕಾಲೇಜಿನ ಸಿಂಚನ ಪ್ರಸನ್ನ(597) ಪ್ರಥಮ, ಕುಶಾಲನಗರದ ವಿವೇಕಾನಂದ ಪಿ.ಯು. ಕಾಲೇಜಿನ ರೈಲಾ ಸಾರಮ್ಮ(590) ದ್ವಿತೀಯ, ಕುಶಾಲನಗರದ ವಿವೇಕಾನಂದ ಪಿ.ಯು. ಕಾಲೇಜಿನ ಕೀರ್ತನ(588) ಹಾಗೂ ವಿರಾಜಪೇಟೆ ಕಾವೇರಿ ಪಿ.ಯು. ಕಾಲೇಜಿನ ಫರೀದ ಎಂ.ಎಸ್.(588) ಅಂಕಗಳನ್ನು ಪಡೆದು ತೃತೀಯ ಸ್ಥಾನ ಹಂಚಿಕೊಂಡಿದ್ದಾರೆ. *ವಿಜ್ಞಾನ ವಿಭಾಗ* ವಿಜ್ಞಾನ ವಿಭಾಗದಲ್ಲಿ ಪೊನ್ನಂಪೇಟೆ ಸಿಐ ಪಿಯು. ಕಾಲೇಜಿನ ಭಾಶಿತ ಕೆ.ಡಿ(594)ಪ್ರಥಮ ಸ್ಥಾನ ಪಡೆದಿದ್ದಾರೆ. ವಿದ್ಯಾನಿಕೇತನ ಪಿಯು. ಕಾಲೇಜಿನ ಗೋಣಿಕೊಪ್ಪದ ಹರಿಕೃಷ್ಣನ್ ಎಂ. (591) ಮತ್ತು ವಿಪುಲ್ ಉತ್ತಪ್ಪ(591) ದ್ವಿತೀಯ ಸ್ಥಾನ ಹಂಚಿಕೊಂಡಿದ್ದಾರೆ. ಕುಶಾಲನಗರದ ವಿವೇಕಾನಂದ ಪಿ.ಯು. ಕಾಲೇಜಿನ ಗ್ರೀಷ್ಮ ಕೆ.ಎಲ್.(590) ಅಂಕ ಪಡೆದು ತೃತೀಯ ಸ್ಥಾನ ಪಡೆದಿದ್ದಾರೆ.








