
ಮಡಿಕೇರಿ NEWS DESK ಏ.15 : ರಾಜ್ಯ ಸರ್ಕಾರ ಪ್ರಸಕ್ತ ಸಾಲಿನ ಮುಂಗಡ ಪತ್ರದಲ್ಲಿ ನೂತನವಾಗಿ ಕೊಡವ ಅಭಿವೃದ್ದಿ ನಿಗಮವನ್ನು ಘೋಷಿಸಿದ ಹಿನ್ನಲೆಯಲ್ಲಿ, ಯುನೈಟೆಡ್ ಕೊಡವ ಆರ್ಗನೈಸೇಷನ್ ಸಂಘಟನೆಯ ಅಧ್ಯಕ್ಷ ಕೊಕ್ಕಲೆಮಾಡ ಮಂಜು ಚಿಣ್ಣಪ್ಪರವರನ್ನು ಪಾಡಿ ಶ್ರೀ. ಇಗ್ಗುತ್ತಪ್ಪ ದೇವಸ್ಥಾನದಲ್ಲಿ ಅಖಿಲ ಕೊಡವ ಸಮಾಜ ಹಾಗು ಇಗ್ಗುತ್ತಪ್ಪ ಭಕ್ತಜನ ಸಂಘದ ವತಿಯಿಂದ ಸ್ಮರಣಿಕೆ ನೀಡಿ ಸನ್ಮಾನಿಸಿ ಗೌರವಿಸಲಾಯಿತು. ಈ ಸಂದರ್ಭ ಮಾತನಾಡಿದ ಅಖಿಲ ಕೊಡವ ಸಮಾಜ ಹಾಗು ಭಕ್ತಜನ ಸಂಘದ ಅಧ್ಯಕ್ಷ ಪರದಂಡ ಸುಮನ್ ಸುಬ್ರಮಣಿ , ಕೊಡವರಿಗೆ ನೂತನವಾಗಿ ಅಭಿವೃದ್ಧಿ ನಿಗಮ ಬೇಕೆಂಬ ಮಹತ್ವದ ಪರಿಕಲ್ಪನೆಯನ್ನು ಹುಟ್ಟು ಹಾಕಿ, ಬೇಡಿಕೆಯನ್ನು ವ್ಯವಸ್ಥಿತವಾಗಿ ಸರ್ಕಾರಕ್ಕೆ ಮುಟ್ಟಿಸಿ, ಇದೀಗ ಶಾಸಕ ಎ.ಎಸ್ ಪೊನ್ನಣ್ಣನವರ ಮೂಲಕ ಸರ್ಕಾರದಿಂದ ಅಧಿಕೃತವಾಗಿ ಕೊಡವ ಅಭಿವೃದ್ಧಿ ನಿಗಮವನ್ನು ಘೋಷಣೆ ಮಾಡಿಸುವಲ್ಲಿ ಮಂಜು ಚಿಣ್ಣಪ್ಪನವರ ಶ್ರಮ ಎಷ್ಟಿದೆ ಎಂಬುವುದು ಎಲ್ಲರಿಗೂ ಗೊತ್ತಿರುವ ವಿಚಾರ. ಕೊಡವರ ಸಮಗ್ರ ಅಭಿವೃದ್ಧಿಯ ನಿಟ್ಟಿನಲ್ಲಿ ನಿಗಮ ಸ್ಥಾಪನೆಯು ಕೊಡವರ ಪಾಲಿಗೆ ಒಂದು ಐತಿಹಾಸಿಕ ಮೈಲಿಗಲ್ಲಾಗಿದ್ದು, ಇದನ್ನು ಪಡೆದುಕೊಳ್ಳುವುದು ಸಾಮಾನ್ಯ ವಿಷಯವಲ್ಲ. ಈನಿಟ್ಟಿನಲ್ಲಿ ಶಾಸಕ ಪೊನ್ನಣ್ಣ ಹಾಗು ಮಂಜು ಚಿಣ್ಣಪ್ಪನವರ ಪಾತ್ರವನ್ನು ಕೊಡವರು ಮರೆಯುವಂತಿಲ್ಲ. ಅದ್ದರಿಂದ ಅವರ ಕೊಡುಗೆಯನ್ನು ಗೌರವಿಸುವ ಕೆಲಸವನ್ನು ಅಖಿಲ ಕೊಡವ ಸಮಾಜ ಹಾಗು ಭಕ್ತಜನ ಸಂಘ ಮಾಡಿದೆ ಎಂದು ಹೇಳಿದರು. ಸನ್ಮಾನ ಸ್ವೀಕರಿಸಿ ಮಾತನಾಡಿದ ಕೊಕ್ಕಲೆಮಾಡ ಮಂಜು ಚಿಣ್ಣಪ್ಪ, ಈ ಸನ್ಮಾನವು ಕೊಡವ ಹಾಗು ಕೊಡವಾಮೆಯ ಉಳಿವಿಗಾಗಿ ಸದುದ್ದೇಶವಿಟ್ಟುಕೊಂಡು ಕೆಲಸಮಾಡುತ್ತಿರುವ ಪ್ರತಿಯೊಬ್ಬರಿಗೂ ಸ್ಪೂರ್ತಿಯಾಗಲಿ. ಉದ್ಧೇಶದಲ್ಲಿ ಸ್ಪಷ್ಟತೆಯಿಲ್ಲದಿದ್ದರೆ ಯಾವುದೇ ಹೋರಾಟಕ್ಕೆ ಯಶಸ್ಸು ಸಿಗುವುದು ಕಷ್ಟಸಾದ್ಯ. ಕೊಡವರಿಗಾಗಿ ಹೋರಾಟ ಮಾಡುವವರು ಸ್ವಾರ್ಥ ಬಿಟ್ಟು ಕೊಡವರ ಬೇಡಿಕೆಗಳನ್ನು ಸಾದಿಸುವ ನಿಟ್ಟಿನಲ್ಲಿ ಬದ್ಧತೆ ತೋರಬೇಕಿದೆ ಎಂದು ಹೇಳಿದರು. ಮುಂದುವರಿದು ಮಾತನಾಡಿದ ಅವರು, ಕೊಡವ ಜನಾಂಗವು ಮೊದಲಿಗೆ ಕೊಡವ ಅಭಿವೃದ್ಧಿ ನಿಗಮದ ಪ್ರಾಮುಖ್ಯತೆಯನ್ನು ಅರಿತು, ನಿಗಮವನ್ನು ಕೊಡವರ ಶ್ರೇಯೋಭಿವೃದ್ದಿಗೆ ಸಮಗ್ರವಾಗಿ ಬಳಸಿಕೊಳ್ಳುವ ನಿಟ್ಟಿನಲ್ಲಿ ಚಿಂತಿಸಬೇಕಿದೆ ಎಂದು ಅಬಿಪ್ರಾಯ ವ್ಯಕ್ತಪಡಿಸಿದರು. ಈ ಸಂದರ್ಬದಲ್ಲಿ, ದೇಶ ತಕ್ಕರಾದ ಪರದಂಡ ಸುಮನ್ ಸುಬ್ರಮಣಿ, ಮಂಜು ಚಿಣ್ಣಪ್ಪ ಹಾಗು ಯುಕೊ ಸಂಘಟನೆಯ ಎಲ್ಲಾ ಸದಸ್ಯರು ಹಾಗು ಸಂಘಟನೆಯ ಒಳಿತಿಗಾಗಿ ಇಗ್ಗುತಪ್ಪ ದೇವರಿಗೆ ಸಾಂಪ್ರದಾಯದಂತೆ ಪ್ರಾರ್ಥನೆ ಸಲ್ಲಿಸಿದರು. ಯುನೈಟೆಡ್ ಕೊಡವ ಆರ್ಗನೈಸೇಷನ್ ಸದಸ್ಯರು. ಅಖಿಲ ಕೊಡವ ಸಮಾಜದ ಕೇಂದ್ರ ಸಮಿತಿ ಸದಸ್ಯರು, ಇಗ್ಗುತ್ತಪ್ಪ ಭಕ್ತಜನ ಸಂಘದ ಪದಾದಿಕಾರಿಗಳು ಮತ್ತು ಮಡಿಕೇರಿ ಕೊಡವ ಸಮಾಜದ ಅಧ್ಯಕ್ಷರಾದ ಮಂಡುವಂಡ ಮುತ್ತಪ್ಪ ಹಾಗು ಸರ್ವ ಸದಸ್ಯರು ಈ ಸಂದರ್ಭ ಹಾಜರಿದ್ದರು.










