
ಮಡಿಕೇರಿ ಏ.16 NEWS DESK : ನಮ್ಮ ಗಣತಿ, ನಮ್ಮ ಅಭಿವೃದ್ಧಿ 2027 ರ ಜನಗಣತಿಯ ಮೊದಲ ಹಂತವು ಈಗಾಗಲೇ ಆರಂಭವಾಗಿದ್ದು, ಸ್ವಯಂ ಗಣತಿ ಕಾರ್ಯ ಪೂರ್ಣಗೊಂಡಿದೆ. ಆ ದಿಸೆಯಲ್ಲಿ ಕೊಡಗು ಜಿಲ್ಲೆಯಲ್ಲಿ ಸುಮಾರು 1,74,114 ಕುಟುಂಬಗಳಲ್ಲಿ 7,379 ಪ್ರಗತಿಯಾಗಿದೆ. ಉಳಿದಂತೆ ಏಪ್ರಿಲ್, 16 ರಿಂದ ಮೇ, 15 ರವರೆಗೆ ಗಣತಿದಾರರು ಮನೆ ಮನೆಗೆ ಭೇಟಿ ನೀಡಿ ಗಣತಿ ಕಾರ್ಯ ಕೈಗೊಳ್ಳಲಿದ್ದಾರೆ ಎಂದು ಜಿಲ್ಲಾಧಿಕಾರಿ ಎಸ್.ಜೆ.ಸೋಮಶೇಖರ್ ಅವರು ಮಾಹಿತಿ ನೀಡಿದ್ದಾರೆ. ಮನೆ ಮನೆ ಗಣತಿ ಕಾರ್ಯಕ್ಕಾಗಿ ಜಿಲ್ಲೆಯಲ್ಲಿ 999 ಗಣತಿದಾರರನ್ನು ನಿಯೋಜಿಸಲಾಗಿದೆ. ಮಡಿಕೇರಿ ತಾಲ್ಲೂಕಿಗೆ 187, ಮಡಿಕೇರಿ ನಗರಕ್ಕೆ 61, ಸೋಮವಾರಪೇಟೆ ತಾಲ್ಲೂಕಿಗೆ 186, ಸೋಮವಾರಪೇಟೆ ಪಟ್ಟಣ ಪಂಚಾಯಿತಿಗೆ 12, ವಿರಾಜಪೇಟೆ ತಾಲ್ಲೂಕಿಗೆ 133, ವಿರಾಜಪೇಟೆ ಪುರಸಭೆ ವ್ಯಾಪ್ತಿಗೆ 36, ಪೊನ್ನಂಪೇಟೆ ತಾಲ್ಲೂಕಿನಲ್ಲಿ 161, ಪೊನ್ನಂಪೇಟೆ ಪಟ್ಟಣ ಪಂಚಾಯಿತಿ ವ್ಯಾಪ್ತಿಯಲ್ಲಿ 19, ಕುಶಾಲನಗರ ತಾಲ್ಲೂಕಿಗೆ 158, ಕುಶಾಲನಗರ ಪುರಸಭೆ ವ್ಯಾಪ್ತಿಯಲ್ಲಿ 46, ಒಟ್ಟು 999 ಗಣತಿದಾರರನ್ನು ನಿಯೋಜಿಸಲಾಗಿದೆ. ಜೊತೆಗೆ 172 ಮಂದಿ ಗಣತಿ ಮೇಲ್ವಿಚಾರಕರಾಗಿ ಕರ್ತವ್ಯ ನಿರ್ವಹಿಸಲಿದ್ದಾರೆ. ಹಾಗೆಯೇ ಶೇ.10 ರಷ್ಟು ಗಣತಿದಾರರನ್ನು ಕಾಯ್ದಿರಿಸಲಾಗಿದೆ ಎಂದು ಜಿಲ್ಲಾಧಿಕಾರಿ ಅವರು ಮಾಹಿತಿ ನೀಡಿದ್ದಾರೆ. ಸರ್ಕಾರದ ಮಹತ್ವಾಕಾಂಕ್ಷೆ ಕಾರ್ಯಕ್ರಮಗಳಲ್ಲಿ ಗಣತಿ ಕಾರ್ಯವು ಒಂದಾಗಿದ್ದು, ಸಾರ್ವಜನಿಕರು ಗಣತಿಯಲ್ಲಿ ಪಾಲ್ಗೊಂಡು ಮಾಹಿತಿ ನೀಡುವಂತಾಗಬೇಕು. ಜನಗಣತಿಯಲ್ಲಿ ಭಾಗವಹಿಸಬೇಕು. ಜನಗಣತಿಯು ದೇಶದ ಶಕ್ತಿ ಎಂಬುದನ್ನು ಮರೆಯಬಾರದು. ಎಲ್ಲರೂ ಇದರ ಪ್ರಯೋಜನವನ್ನು ಪಡೆದುಕೊಳ್ಳುವಂತೆ ಜಿಲ್ಲಾಧಿಕಾರಿ ಎಸ್.ಜೆ.ಸೋಮಶೇಖರ್ ಅವರು ಕೋರಿದ್ದಾರೆ.









