
ಮಡಿಕೇರಿ ಏ.16 NEWS DESK : ಕೊಡಗು ಜಿಲ್ಲಾ ಮಟ್ಟದ 15ನೇ ವರ್ಷದ ರೋಮನ್ ಕ್ಯಾಥೋಲಿಕ್ ಕ್ರೀಡೋತ್ಸವ, ಟೆನ್ನಿಸ್ ಬಾಲ್ ಕ್ರಿಕೆಟ್ ಪಂದ್ಯಾವಳಿ ಮತ್ತು ಸಾಧಕರಿಗೆ ಸನ್ಮಾನ ಸಮಾರಂಭ ಏ.18 ಮತ್ತು 19 ರಂದು ಪೊನ್ನಂಪೇಟೆ ತಾಲ್ಲೂಕಿನ ತಿತಿಮತಿಯ ಸರ್ಕಾರಿ ಮಾದರಿ ಪ್ರಾಥಮಿಕ ಶಾಲಾ ಕ್ರೀಡಾಂಗಣದಲ್ಲಿ ನಡೆಯಲಿದೆ. ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಈ ಕುರಿತು ಮಾಹಿತಿ ನೀಡಿದ ಜಿಲ್ಲಾ ರೋಮನ್ ಕ್ಯಾಥೋಲಿಕ್ ಅಸೋಸಿಯೇಷನ್ ಅಧ್ಯಕ್ಷ ಜಾನ್ಸನ್ ಪಿಂಟೋ ಅವರು, ಅಸೋಸಿಯೇಷನ್, ಪಾಲಿಬೆಟ್ಟದ ಲೂರ್ದ್ ಮಾತೆಯ ಚರ್ಚ್, ತಿತಿಮತಿಯ ಫಾತಿಮಾ ಮಾತೆಯ ಚರ್ಚ್‍ನ ಸಂಯುಕ್ತಾಶ್ರಯದಲ್ಲಿ ಕ್ರೀಡಾಕೂಟ ನಡೆಯಲಿದೆ. ಇದರಲ್ಲಿ ಜಿಲ್ಲಾ ವ್ಯಾಪ್ತಿಯ ಧರ್ಮ ಕೇಂದ್ರಗಳ ಕ್ರೈಸ್ತ ಬಾಂಧವರು ಪಾಲ್ಗೊಳ್ಳಲಿರುವುದಾಗಿ ತಿಳಿಸಿದರು. ಕೊಡಗು ಜಿಲ್ಲಾ ವ್ಯಾಪ್ತಿಯ 23 ಧರ್ಮಕೇಂದ್ರಗಳ ಕ್ರಿಕೆಟ್ ತಂಡಗಳು ಟೆನ್ನಿಸ್ ಬಾಲ್ ಕ್ರಿಕೆಟ್ ಪಂದ್ಯಾವಳಿಯಲ್ಲಿ ಪಾಲ್ಗೊಳ್ಳಲಿವೆ. ಎರಡು ದಿನಗಳ ಕಾಲ ನಡೆಯುವ ಈ ಪಂದ್ಯಾವಳಿ ವಿಜೇತ ತಂಡಕ್ಕೆ 50 ಸಾವಿರ ರೂ.ನಗದು ಮತ್ತು ಟ್ರೋಫಿ, ದ್ವಿತೀಯ 30 ಸಾವಿರ ರೂ. ಮತ್ತು ಟ್ರೋಫಿ, ತೃತೀಯ 10 ಸಾವಿರ ರೂ. ಮತ್ತು ಟ್ರೋಫಿ, ನಾಲ್ಕನೇ ಬಹುಮಾನವಾಗಿ 5 ಸಾವಿರ ರೂ. ಮತ್ತು ಟ್ರೋಫಿಯನ್ನು ಬಹುಮಾನವಾಗಿ ನೀಡಲಾಗುತ್ತದೆಂದು ಮಾಹಿತಿಯನ್ನಿತ್ತರು. ಏ.19 ರಂದು ಮಹಿಳೆಯರ ಥ್ರೋಬಾಲ್, ಮಹಿಳೆಯರು ಮತ್ತು ಪುರುಷರ ವಿಭಾಗಗಳಲ್ಲಿ ಹಗ್ಗಜಗ್ಗಾಟ ಸ್ಪರ್ಧೆಗಳನ್ನು ಆಯೋಜಿಸಲಾಗಿದೆ. ಥ್ರೋಬಾಲ್ ಸ್ಪರ್ಧೆಯಲ್ಲಿ ಸುಮಾರು 10 ತಂಡಗಳು ಪಾಲ್ಗೊಳ್ಳಲಿದ್ದು, ಹಗ್ಗಜಗ್ಗಾಟ ಸ್ಪರ್ಧೆಯಲ್ಲಿ 10 ರಿಂದ 15 ತಂಡಗಳು ಪಾಲ್ಗೊಳ್ಳಲಿವೆ. ಥ್ರೋಬಾಲ್ ಪಂದ್ಯಾವಳಿ ವಿಜೇತ ತಂಡಕ್ಕೆ 10 ಸಾವಿರ ರೂ. ನಗದು ಮತ್ತು ಟ್ರೋಫಿ, ದ್ವಿತೀಯ 5 ಸಾವಿರ ಮತ್ತು ಟ್ರೋಫಿಯನ್ನು ನೀಡಲಾಗುತ್ತದೆ. ಹಗ್ಗಜಗ್ಗಾಟ ಸ್ಪರ್ಧಾ ವಿಜೇತರಿಗೆ ಪ್ರಥಮ ಬಹುಮಾನವಾಗಿ 15 ಸಾವಿರ ರೂ. ನಗದು ಮತ್ತು ಟ್ರೋಫಿ, ದ್ವಿತೀಯ ಬಹುಮಾನವಾಗಿ 8 ಸಾವಿರ ರೂ. ಮತ್ತು ಟ್ರೋಫಿಯನ್ನು ನೀಡಲಾಗುತ್ತದೆಂದರು. ಉದ್ಘಾಟನೆ-ಕ್ರೀಡೋತ್ಸವದ ಉದ್ಘಾಟನಾ ಸಮಾರಂಭ ಏ.18ರಂದು ಬೆ.11 ಗಂಟೆಗೆ ನಡೆಯಲಿದೆ. ಸಭಾ ಕಾರ್ಯಕ್ರಮವನ್ನು ವಿರಾಜಪೇಟೆ ಕ್ಷೇತ್ರದ ಶಾಸಕರಾದ ಎ.ಎಸ್.ಪೊನ್ನಣ್ಣ ಉದ್ಘಾಟಿಸಲಿದ್ದು, ಮೈಸೂರು ಧರ್ಮಕ್ಷೇತ್ರದ ಧರ್ಮಾಧ್ಯಕ್ಷರಾದ ರೆ.ಡಾ.ಫ್ರಾನ್ಸಿಸ್ ಸೆರಾವೋ ಎಸ್.ಜೆ. ಅವರು ದಿವ್ಯ ಸಾನಿಧ್ಯ ವಹಿಲಿದ್ದಾರೆ. ಸಭಾಧ್ಯಕ್ಷತೆಯನ್ನು ತಾನೇ ವಹಿಸಲಿರುವುದಾಗಿ ತಿಳಿಸಿ, ಸಮಾರಂಭದಲ್ಲಿ ವಿವಿಧ ಕ್ಷೇತ್ರಗಳ ಸಾಧಕರನ್ನು ಸನ್ಮಾನಿಸಿ ಗೌರವಿಸಲಾಗುವುದೆಂದು ತಿಳಿಸಿದರು. ಸಮಾರೋಪ ಸಮಾರಂಭ ಏ.19 ರಂದು ಸಂಜೆ 4.40 ಗಂಟೆಗೆ ನಡೆಯಲಿದೆ. ಇದರಲ್ಲಿ ವಿರಾಜಪೇಟೆ ಸಂತ ಅನ್ನಮ್ಮ ಚರ್ಚ್‍ನ ಗುರುಗಳಾದ ರೆ.ಫಾ.ಜೇಮ್ಸ್ ಡೊಮಿನಿಕ್, ಮಡಿಕೇರಿ ಸಂತ ಮೈಕೆಲರ ಚರ್ಚ್‍ನ ರೆ.ಫಾ.ದೀಪಕ್ ಪಾಲ್ಗೊಳ್ಳಲಿದ್ದಾರೆಂದರು. ಸುದ್ದಿಗೋಷ್ಠಿಯಲ್ಲಿ ಕೊಡಗು ರೋಮನ್ ಕ್ಯಾಥೋಲಿಕ್ ಅಸೋಸಿಯೇಷನ್ ಗೌರವಾಧ್ಯಕ್ಷ ಜೋಕಿಂ ವಾಜ್, ಜಿಲ್ಲಾ ಉಪಾಧ್ಯಕ್ಷ ಜೋಕಿಂ ರೋಡ್ರಿಗಸ್, ಕಾರ್ಯಾಧ್ಯಕ್ಷ ವಿ.ಎ.ಲಾರೆನ್ಸ್, ಅಸೋಸಿಯೇಷನ್‍ನ ಜಿಲ್ಲಾ ಯುವ ಘಟಕದ ಅಧ್ಯಕ್ಷ ಶಾಲುಮೋನ್, ಸೋಮವಾರಪೇಟೆ ಘಟಕದ ಅಧ್ಯಕ್ಷ ಡೆನ್ಸಿಲ್ ವರ್ಗೀಸ್ ಉಪಸ್ಥಿತರಿದ್ದರು.









