
ಮಡಿಕೇರಿ ಏ.20 NEWS DESK : ಸ್ವಾತಂತ್ರ್ಯ ಹೋರಾಟಗಾರ ಕೆದಂಬಾಡಿ ರಾಮಯ್ಯ ಗೌಡ ಸ್ಮಾರಕ ಉಸ್ತುವಾರಿ ಸಮಿತಿಯ ಗೌರವ ಸಲಹೆಗಾರರು, ಸಂಶೋಧಕರು ಹಾಗೂ ಲೇಖಕರಾದ ಅನಂತರಾಜ ಗೌಡ (82) ಇಂದು ಹೃದಯಾಘಾತದಿಂದ ನಿಧನರಾಗಿದ್ದಾರೆ. ಮಡಿಕೇರಿ ನಗರದ ಮಾರುಕಟ್ಟೆ ಸಮೀಪ ಕಾರಿನಲ್ಲಿ ಪ್ರಯಾಣಿಸುತ್ತಿದ್ದ ಅನಂತರಾಜ ಗೌಡ ಅವರಿಗೆ ಲಘು ಹೃದಯಾಘಾತವಾಗಿದೆ ಎಂದು ತಿಳಿದು ಬಂದಿದೆ. ನಿಯಂತ್ರಣ ತಪ್ಪಿದ ಕಾರು ರಸ್ತೆ ಬದಿಗೆ ವಾಲಿದೆ. ಅನಂತರಾಜ ಗೌಡ ಅವರನ್ನು ಸ್ಥಳೀಯ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಯಿತ್ತಾದರೂ ಅಷ್ಟೊತ್ತಿಗಾಗಲೇ ಅವರು ಇಹಲೋಕ ತ್ಯಜಿಸಿದ್ದರು. ಮೂಲತ: ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರು ತಾಲ್ಲೂಕಿನವರಾದ ಅನಂತರಾಜ ಗೌಡ ಅವರು ಮಡಿಕೇರಿ ತಾಲ್ಲೂಕಿನ ಕೆ.ನಿಡುಗಣೆ ಗ್ರಾ.ಪಂ ವ್ಯಾಪ್ತಿಯ ಕೋಟೆಕಾಡು ಗ್ರಾಮದಲ್ಲಿ ತೋಟವನ್ನು ಹೊಂದಿ ವಾಸವಾಗಿದ್ದರು. ಅರೆಭಾಷೆ ಗೌಡ ಜನಾಂಗದ ಇತಿಹಾಸ, ಐತಿಹಾಸಿಕ ದಾಖಲೆಗಳನ್ನು ಸಂಗ್ರಹಿಸಿ, ಅನೇಕ ಪುಸ್ತಕಗಳನ್ನು ಬರೆದಿದ್ದಾರೆ. ಮುಖ್ಯವಾಗಿ ಕೆದಂಬಾಡಿ ರಾಮಯ್ಯ ಗೌಡರ ಇತಿಹಾಸವನ್ನು ಸಮಾಜಕ್ಕೆ ಒಪ್ಪಿಸಿದ್ದಾರೆ. ಕೆದಂಬಾಡಿ ರಾಮಯ್ಯ ಗೌಡರ ಕಂಚಿನ ಪ್ರತಿಮೆ ಸ್ಥಾಪನೆಗೆ ಸಾಕಷ್ಟು ಶ್ರಮಿಸಿದ್ದರು. ಅರೆಭಾಷೆ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಸೇರಿದಂತೆ ಅನೇಕ ಪ್ರಶಸ್ತಿಗಳಿಗೆ ಅನಂತರಾಜ ಗೌಡರು ಪಾತ್ರರಾಗಿದ್ದಾರೆ. ಮೃತರು ಪತ್ನಿ ಹಾಗೂ ಓರ್ವ ಪುತ್ರನನ್ನು ಅಗಲಿದ್ದಾರೆ. ಅಂತ್ಯಕ್ರಿಯೆ ಏ.21 ರಂದು ನಡೆಯಲಿದೆ.









