
ತುಮಕೂರು ಮೇ 19 NEWS DESK : ದುಬಾರೆ ಆನೆ ಶಿಬಿರದಲ್ಲಿ ದಸರಾ ಆನೆ ಕಂಜನ್ ಮತ್ತು ಮಕನಾ ಆನೆ ಮಾರ್ತಾಂಡ ನಡುವೆ ನಡೆದ ಕಾಳಗದಲ್ಲಿ ತೀವ್ರವಾಗಿ ಗಾಯಗೊಂಡಿದ್ದ ಮಾರ್ತಾಂಡ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದು ಅರಣ್ಯ, ಜೀವಿಶಾಸ್ತ್ರ ಮತ್ತು ಪರಿಸರ ಸಚಿವ ಈಶ್ವರ ಬಿ ಖಂಡ್ರೆ ತೀವ್ರ ಶೋಕ ವ್ಯಕ್ತಪಡಿಸಿದ್ದಾರೆ. ಅನಿರೀಕ್ಷಿತವಾದ ಮತ್ತು ಊಹಿಸಲೂ ಆಗದ ದುರ್ಘಟನೆಯಲ್ಲಿ ಒಬ್ಬ ಪ್ರವಾಸಿ ಮಹಿಳೆ ಮತ್ತು ಒಂದು ಆನೆ ಮೃತಪಟ್ಟಿರುವುದು ಅತ್ಯಂತ ದುಃಖದ ಸಂಗತಿ ಎಂದು ತಿಳಿಸಿರುವ ಅವರು ಸಂತಾಪ ಸೂಚಿಸಿದ್ದಾರೆ. ಹಾಸನ ಜಿಲ್ಲೆ ಆಲೂರಿನಲ್ಲಿ 2023 ರಲ್ಲಿ ಸೆರೆ ಹಿಡಿಯಲಾಗಿದ್ದ 53 ವರ್ಷದ ಮಾರ್ತಾಂಡ 4500 ಕೆ.ಜಿ. ತೂಕವಿತ್ತು. ಹಾಸನ ಜಿಲ್ಲೆ ಯಸಳೂರಿನ ಬಳಿ 2014ರಲ್ಲಿ ಸೆರೆ ಹಿಡಿಯಲಾಗಿದ್ದ 26 ವರ್ಷದ ಕಂಜನ್ 3 ಬಾರಿ ದಸರಾ ಮಹೋತ್ಸವದಲ್ಲಿ ಭಾಗಿಯಾಗುತ್ತಿದ್ದ. ಇನ್ನು ಮುಂದೆ ದಸರಾ ಮಹೋತ್ಸವಕ್ಕೆ ಈ ಆನೆಯನ್ನು ಬಳಸದಂತೆ ಸೂಚಿಸಿರುವುದಾಗಿಯೂ ಈಶ್ವರ ಖಂಡ್ರೆ ತಿಳಿಸಿದ್ದಾರೆ.









