
ವಿರಾಜಪೇಟೆ ಮೇ 22 NEWS DESK : ಕೊಡಗು ವಿಶ್ವವಿದ್ಯಾನಿಲಯದ ಚಿಕ್ಕ ಅಳುವಾರದಲ್ಲಿ ನಡೆದ ವಿಶ್ವವಿದ್ಯಾನಿಲಯ ಮಟ್ಟದ ಯುವ ವೈಭವ ಕಾರ್ಯಕ್ರಮದಲ್ಲಿ ವಿರಾಜಪೇಟೆಯ ಸೆಂಟ್ ಆನ್ಸ್ ಪದವಿ ಕಾಲೇಜಿನ 88 ವಿದ್ಯಾರ್ಥಿಗಳು ಭಾಗವಹಿಸಿ ವಿವಿಧ ಸ್ಪರ್ಧೆಗಳಲ್ಲಿ ಉತ್ತಮ ಪ್ರದರ್ಶನವನ್ನು ತೋರುವ ಮೂಲಕ ಸಮಗ್ರ ವಿನ್ನರ್ ಅಪ್ ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡಿದ್ದಾರೆ. ರಂಗೋಲಿಯಲ್ಲಿ ದ್ವಿತೀಯ ಸ್ಥಾನ, ಸೆಲ್ಫಿ ಪಾಯಿಂಟ್ ನಲ್ಲಿ ದ್ವಿತೀಯ , ಕ್ಲಿಕ್ ಕ್ಯಾಂಡಿಡ್ ನಲ್ಲಿ ಪ್ರಥಮ, ಬೆಸ್ಟ್ ಮ್ಯಾನೇಜರ್ ನಲ್ಲಿ ಪ್ರಥಮ, ಚರ್ಚಾ ಸ್ಪರ್ಧೆಯಲ್ಲಿ ಪ್ರಥಮ, ಫ್ಯೂಷನ್ ಡ್ಯಾನ್ಸ್ ನಲ್ಲಿ ದ್ವಿತೀಯ, ವಿಜ್ಞಾನ ಮಾದರಿ ರಚನೆಯಲ್ಲಿ ಪ್ರಥಮ, ಪೋಸ್ಟರ್ ನಿರ್ಮಾಣ ಹಾಗೂ ವಿವರಣೆಯಲ್ಲಿ ದ್ವಿತೀಯ ಸ್ಥಾನವನ್ನು ಪಡೆದುಕೊಂಡು ಸಾಧನೆ ಮಾಡಿದ್ದಾರೆ. ಕಾಲೇಜಿನಲ್ಲಿ ಜರುಗಿದ ಸಮಾರಂಭದಲ್ಲಿ ವಿದ್ಯಾರ್ಥಿಗಳನ್ನು ಉದ್ದೇಶಿಸಿ ಮಾತನಾಡಿದ ಸೆಂಟ್ ಆನ್ಸ್ ಪದವಿ ಕಾಲೇಜಿನ ವ್ಯವಸ್ಥಾಪಕರಾದ ರೆ. ಫಾ. ಮದಲೈ ಮುತ್ತು ಅವರು, ವಿದ್ಯಾರ್ಥಿಗಳ ಈ ಸಾಧನೆಯು ಅಭಿನಂದನಾರ್ಹವಾಗಿದ್ದು, ನಮ್ಮ ಕಾಲೇಜಿನ ವಿದ್ಯಾರ್ಥಿಗಳು ಶಿಕ್ಷಣ ಹಾಗೂ ಪಠ್ಯೇತರ ಚಟುವಟಿಕೆಗಳಲ್ಲಿಯೂ ಉತ್ತಮವಾದ ಸಾಧನೆಯನ್ನು ಮಾಡುತ್ತಾ ಬಂದಿದ್ದಾರೆ. ಕ್ರೀಡೆ, ಸಾಂಸ್ಕೃತಿಕ ಚಟುವಟಿಕೆ, ಎನ್ ಎಸ್ ಎಸ್ ಹಾಗೂ ಇತರ ಘಟಕಗಳಲ್ಲಿ ಉತ್ತಮ ಪ್ರದರ್ಶನವನ್ನು ನೀಡುತ್ತಿದ್ದು, ಉಪನ್ಯಾಸಕರ ಪರಿಶ್ರಮ, ಮಾರ್ಗದರ್ಶನ ಹಾಗೂ ವಿದ್ಯಾರ್ಥಿಗಳ ಕಠಿಣ ಪರಿಶ್ರಮದಿಂದ ಈ ಸಾಧನೆ ಸಾಧ್ಯವಾಗಿದೆ ಎಂದು ಹೇಳಿದರು. ವಿಜೇತ ವಿದ್ಯಾರ್ಥಿಗಳಿಗೆ ಶುಭ ಕೋರಿದರು. ಪದವಿ ಕಾಲೇಜಿನ ಪ್ರಾಂಶುಪಾಲೆ ತೃಪ್ತಿ ಬೋಪಣ್ಣ ಮಾತನಾಡಿ, ವಿಶ್ವವಿದ್ಯಾಲಯ ಮಟ್ಟದಲ್ಲಿ ನಮ್ಮ ಕಾಲೇಜಿನ ವಿದ್ಯಾರ್ಥಿಗಳು ಸಮಗ್ರ ಚಾಂಪಿಯನ್ ಆಗಿ ಹೊರಹೊಮ್ಮಿರುವುದು ಸಂತಸ ತಂದಿದ್ದು, ಇದಕ್ಕಾಗಿ ಶ್ರಮಿಸಿದ ಉಪನ್ಯಾಸಕರಿಗೂ ಹಾಗೂ ವಿಜೇತ ವಿದ್ಯಾರ್ಥಿಗಳಿಗೆ ಧನ್ಯವಾದಗಳನ್ನು ಸಲ್ಲಿಸಿದರು. ಈ ಸಂದರ್ಭ ಕಾಲೇಜಿನ ಐಕ್ಯೂಎಸಿ ಸಂಚಾಲಕಿ ಹೇಮ, ಸಾಂಸ್ಕೃತಿಕ ಘಟಕದ ಸಂಚಾಲಕಿ ಶಿಲ್ಪ ಕೆ ಪಿ,ಉಪನ್ಯಾಸಕರು ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.









