
ಮಡಿಕೇರಿ ಮೇ 25 NEWS DESK : ವಿದ್ಯಾರ್ಥಿಗಳು ಶಿಕ್ಷಣದಂತೆ ಕ್ರೀಡೆಗೂ ಮಹತ್ವ ನೀಡಿ ಕ್ರೀಡಾ ಕ್ಷೇತ್ರದಲ್ಲಿ ಕೀರ್ತಿ ಗಳಿಸಬೇಕು ಎಂದು ಭಾರತೀಯ ಮಹಿಳಾ ಹಾಕಿ ತಂಡದ ತರಬೇತುದಾರರಾದ ಅಂಕಿತಾ ಬಿ.ಎಸ್ ಕರೆ ನೀಡಿದ್ದಾರೆ. ನಗರದ ಕೊಡಗು ವಿಶ್ವ ವಿದ್ಯಾನಿಲಯದ ಫೀಲ್ಡ್ ಮಾರ್ಷಲ್ ಕೆ.ಎಂ.ಕಾರ್ಯಪ್ಪ ಕಾಲೇಜು ಸಭಾಂಗಣದಲ್ಲಿ ನಡೆದ “ಕ್ರೀಡೆ ಮತ್ತು ಪ್ರತಿಭೋತ್ಸವ” ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು. ವಿದ್ಯಾರ್ಥಿಗಳು ಉನ್ನತ ಶಿಕ್ಷಣವನ್ನು ಪಡೆಯಬೇಕು, ಶಿಕ್ಷಣದೊಂದಿಗೆ ಕ್ರೀಡೆಯಲ್ಲೂ ತೊಡಗಿಸಿಕೊಂಡು ಕ್ರೀಡಾ ಪ್ರತಿಭೆಯನ್ನು ಅನಾವರಣಗೊಳಿಸಬೇಕು. ಶಾಲಾ ಕಾಲೇಜುಗಳಲ್ಲಿ ನಡೆಯುವ ಕ್ರೀಡಾಕೂಟಗಳು ವಿದ್ಯಾರ್ಥಿಗಳಲ್ಲಿ ಸ್ಫೂರ್ತಿಯನ್ನು ತುಂಬುತ್ತವೆ. ಕ್ರೀಡೆಯಲ್ಲಿ ಪಾಲ್ಗೊಂಡು ಸಾಧನೆ ಮಾಡುವ ಮೂಲಕ ರಾಜ್ಯ, ರಾಷ್ಟ್ರ ಮತ್ತು ಅಂತರಾಷ್ಟ್ರೀಯ ಮಟ್ಟದಲ್ಲೂ ವಿದ್ಯಾರ್ಥಿಗಳು ಕೀರ್ತಿ ಗಳಿಸಬೇಕು ಎಂದರು. ಶೈಕ್ಷಣಿಕವಾಗಿ ಓದಿಗೆ ಕೊನೆ ಎಂಬುವುದೇ ಇಲ್ಲ, ಕ್ರೀಡೆಯಲ್ಲಿ ತೊಡಗಿಸಿಕೊಂಡೇ ಹೆಚ್ಚು ಹೆಚ್ಚು ಓದಬಹುದು. ಕ್ರೀಡಾಕ್ಷೇತ್ರದಲ್ಲಿ ದೊಡ್ಡ ಮಟ್ಟದಲ್ಲಿ ಗೌರವ ದೊರೆತಾಗ ಕಾಲೇಜು ದಿನಗಳಲ್ಲಿ ತೋರಿದ ಕ್ರೀಡಾ ಪ್ರತಿಭೆಯ ನೆಪಾಗುವುದು ಸಹಜ. ಕ್ರೀಡಾಪಟುಗಳಿಗೆ ಕ್ರೀಡಾಕೂಟಗಳು ಹಬ್ಬವಿದ್ದಂತೆ, ಕ್ರೀಡೆಗಳಿಂದಲೂ ಸುಂದರ ಜೀವನವನ್ನು ರೂಪಿಸಿಕೊಳ್ಳಬಹುದು ಎಂದು ಅಂಕಿತಾ ಬಿ.ಎಸ್ ತಿಳಿಸಿದರು. ಅಧ್ಯಕ್ಷತೆ ವಹಿಸಿ ಮಾತನಾಡಿದ ಫೀಲ್ಡ್ ಮಾರ್ಷಲ್ ಕೆ.ಎಂ.ಕಾರ್ಯಪ್ಪ ಕಾಲೇಜ್ ನ ಪ್ರಾಂಶುಪಾಲ ಮೇಜರ್ ಪ್ರೊ.ರಾಘವ ಬಿ. ಅವರು ವಿದ್ಯಾರ್ಥಿಗಳ ಶೈಕ್ಷಣಿಕ ಬದುಕು ಸಮಾಜಕ್ಕೆ ಉತ್ತಮ ಸಂದೇಶ ನೀಡುವಂತ್ತಿರಬೇಕು ಮತ್ತು ಮಾದರಿಯಾಗಿರಬೇಕು ಎಂದು ಕಿವಿಮಾತು ಹೇಳಿದರು. ಶೈಕ್ಷಣಿಕ ಜೀವನದಲ್ಲಿ ಪರಿಶ್ರಮದಿಂದ ಮಾತ್ರ ಗುರಿ ಮತ್ತು ಕನಸನ್ನು ಸಾಧಿಸಲು ಸಾಧ್ಯ. ವಿದ್ಯಾರ್ಥಿಗಳು ತಮ್ಮ ಶೈಕ್ಷಣಿಕ ಸಾಧನೆ ಹಾಗೂ ಪ್ರತಿಭೆಯ ಮೂಲಕವೇ ನಕ್ಷತ್ರದಂತೆ ಹೊಳೆಯಬೇಕು. ಆತ್ಮವಿಶ್ವಾಸವನ್ನು ಬೆಳೆಸಿಕೊಂಡು ಜೀವನದಲ್ಲಿ ಸಾರ್ಥಕತೆಯನ್ನು ಕಂಡುಕೊಳ್ಳಬೇಕು. ವಿದ್ಯಾರ್ಥಿ ಜೀವನದ ಉತ್ತಮ ಸಾಧನೆ ತಂದೆ, ತಾಯಿ, ಬಂಧು ಬಳಗದಲ್ಲಿ ಖುಷಿಯನ್ನು ತಂದು ಕೊಡುತ್ತದೆ, ಇದನ್ನು ಸಮಾಜ ಸದಾ ನೆನಪಿಸಿಕೊಳ್ಳುತ್ತದೆ. ವಿದ್ಯಾರ್ಥಿಗಳಲ್ಲಿ ಸ್ಫೂರ್ತಿ ತುಂಬುವ ಮೂಲಕವೇ ನಾಯಕತ್ವದ ಗುಣವನ್ನು ಬೆಳೆಸುವ ಕಾರ್ಯವನ್ನು ಫೀ.ಮಾ.ಕಾರ್ಯಪ್ಪ ಕಾಲೇಜು ಮಾಡುತ್ತಿದೆ. ಇಲ್ಲಿರುವ ಬೋಧಕ ಹಾಗೂ ಬೋಧಕೇತರ ಎಲ್ಲಾ ಸಿಬ್ಬಂದಿಗಳು ಒಗ್ಗಟ್ಟನಿಂದ ಕಾರ್ಯ ನಿರ್ವಹಿಸಿ ಕಾಲೇಜ್ ನ ಕೀರ್ತಿ ಹೆಚ್ಚುವಂತೆ ಮಾಡಿದ್ದಾರೆ. ಹಳೆಯ ವಿದ್ಯಾರ್ಥಿಗಳ ಸಂಘ ಸೇರಿದಂತೆ ದಾನಿಗಳ ಸಹಕಾರವೂ ಕಾಲೇಜ್ ಗೆ ದೊರೆಯುತ್ತಿದೆ. ಪ್ರತಿಯೊಬ್ಬ ವ್ಯಕ್ತಿ ಸಮಾಜದಲ್ಲಿ ಅಳಿಲು ಸೇವೆಯನ್ನಾದರೂ ಮಾಡುವ ಮೂಲಕ ಜೀವನವನ್ನು ಸಾರ್ಥಕ ಪಡಿಸಿಕೊಳ್ಳಬೇಕು ಎಂದು ಮೇಜರ್ ಪ್ರೊ.ರಾಘವ ಬಿ. ಅವರು ಕರೆ ನೀಡಿದರು. ಕಾಲೇಜ್ ಗೆ ಸೇರಿದ ಆಸ್ತಿಯನ್ನು ಮುಂದಿನ ವಿದ್ಯಾರ್ಥಿಗಳಿಗಾಗಿ ಸಂರಕ್ಷಿಸಬೇಕು, ಪರಿಸರ ಕಾಳಜಿ ತೋರಬೇಕು. ಕಾಲೇಜ್ ನಲ್ಲಿ ಲಭ್ಯವಿರುವ ಸೌಲಭ್ಯವನ್ನು ಸದುಪಯೋಗಪಡಿಸಿಕೊಳ್ಳಬೇಕು ಎಂದರು. ಮುಖ್ಯ ಅತಿಥಿಗಳಾಗಿ ಪಾಲ್ಗೊಂಡು ಮಾತನಾಡಿದ ಫೀಲ್ಡ್ ಮಾರ್ಷಲ್ ಕೆ.ಎಂ.ಕಾರ್ಯಪ್ಪ ಕಾಲೇಜ್ ನ ಹಳೆಯ ವಿದ್ಯಾರ್ಥಿ ಸಂಘದ ಅಧ್ಯಕ್ಷ ಬೊಳ್ಳಜಿರ ಬಿ.ಅಯ್ಯಪ್ಪ ಅವರು ಸೋಲು ಪಾಠವನ್ನು ಕಲಿಸುತ್ತದೆ, ಗೆಲುವಿನ ಮೆಟ್ಟಿಲಾಗುತ್ತದೆ. ಗೆದ್ದವರಿಗೆ ಅಹಂಕಾರ ಬಂದರೆ ಅದು ಅಪಾಯಕಾರಿ ಎಂದು ಅಭಿಪ್ರಾಯಪಟ್ಟರು. ಗುರಿ ಇದ್ದರೆ ಮಾತ್ರ ಸಾಧನೆ ಸಾಧ್ಯ, ಪ್ರತಿಯೊಬ್ಬ ವಿದ್ಯಾರ್ಥಿಯಲ್ಲೂ ಒಂದೊಂದು ರೀತಿಯ ಪ್ರತಿಭೆ ಇರುತ್ತದೆ. ಇದರ ಅನಾವರಣಕ್ಕೆ ಕಾಲೇಜು ಕಾರ್ಯಕ್ರಮಗಳು ಉತ್ತಮ ವೇದಿಕೆಯಾಗಿದೆ. ಕಾಲೇಜ್ ನ ಕ್ರೀಡೋತ್ಸವಗಳು ರಾಜ್ಯ, ರಾಷ್ಟ್ರ ಮತ್ತು ಅಂತರಾಷ್ಟ್ರೀಯ ಮಟ್ಟದ ಸಾಧನೆಗೆ ಮೊದಲ ಹೆಜ್ಜೆಯಾಗಿದೆ ಹಾಗೂ ವಿದ್ಯಾರ್ಥಿಗಳಲ್ಲಿ ಸ್ಫೂರ್ತಿಯನ್ನು ತುಂಬುತ್ತದೆ. ಗುರಿ, ಕನಸು ಮತ್ತು ಶಿಸ್ತು ಇದ್ದಾಗ ಮಾತ್ರ ವಿದ್ಯಾರ್ಥಿ ಜೀವನದಲ್ಲಿ ಯಶಸ್ಸು ಲಭಿಸಲು ಸಾಧ್ಯ ಎಂದರು. ಫೀ.ಮಾ.ಕಾರ್ಯಪ್ಪ ಕಾಲೇಜ್ ನ ವಿದ್ಯಾರ್ಥಿಗಳಿಗೆ ಯಾವುದೇ ರೀತಿಯಲ್ಲಿ ಕೊರತೆ ಆಗಬಾರದು ಎನ್ನುವ ಉದ್ದೇಶದಿಂದ ಪ್ರಾಂಶುಪಾಲರು ಪರಿಶ್ರಮ ವಹಿಸಿ ಅಗತ್ಯ ಸೌಲಭ್ಯಗಳನ್ನು ಮತ್ತು ಕಾರ್ಯಕ್ರಮಗಳನ್ನು ಒದಗಿಸುತ್ತಿದ್ದಾರೆ. ವಿದ್ಯಾರ್ಥಿಗಳು ಇದನ್ನು ಸದುಪಯೋಗ ಪಡಿಸಿಕೊಳ್ಳಬೇಕು ಎಂದು ಬೊಳ್ಳಜಿರ ಬಿ.ಅಯ್ಯಪ್ಪ ಕರೆ ನೀಡಿದರು. ಕೊಡಗು ವಿಶ್ವ ವಿದ್ಯಾನಿಲಯದ ಪರೀಕ್ಷಾಂಗ ವಿಭಾಗದ ವಿಶೇಷ ಅಧಿಕಾರಿ ಮೇಚಿರ ರವಿಶಂಕರ್ ನಾಣಯ್ಯ, ಸಹಪಠ್ಯ ಚಟುವಟಿಕೆ ವಿಭಾಗದ ಸಂಚಾಲಕಿ ಡಾ.ಹೆಚ್.ಕೆ.ರೇಣು ವಿದ್ಯಾರ್ಥಿ ಸಂಘದ ಸಲಹೆಗಾರ ಪ್ರೊ.ಶ್ರೀಧರ ಹೆಗಡೆ, ಕ್ರೀಡಾ ವಿಭಾಗದ ಸಂಯೋಜಕ ಡಾ.ತಳವಾರ ಬಿ.ಹೆಚ್, ವಿದ್ಯಾರ್ಥಿ ಸಂಘದ ಪದಾಧಿಕಾರಿಗಳು, ಸಾಂಸ್ಕøತಿಕ ಕಾರ್ಯದರ್ಶಿಗಳು, ಎನ್‍ಎಸ್‍ಎಸ್ ನಾಯಕರು, ಬೋಧಕ, ಬೋಧಕೇತರ ಸಿಬ್ಬಂದಿಗಳು ಮತ್ತಿತರ ಪ್ರಮುಖರು ಉಪಸ್ಥಿತರಿದ್ದರು. *ಸನ್ಮಾನ* ಭಾರತೀಯ ಮಹಿಳಾ ಹಾಕಿ ತಂಡದ ತರಬೇತುದಾರರಾದ ಅಂಕಿತಾ ಬಿ.ಎಸ್, ಫೀಲ್ಡ್ ಮಾರ್ಷಲ್ ಕೆ.ಎಂ.ಕಾರ್ಯಪ್ಪ ಕಾಲೇಜ್ ನ ಹಳೆಯ ವಿದ್ಯಾರ್ಥಿ ಸಂಘದ ಅಧ್ಯಕ್ಷ ಬೊಳ್ಳಜಿರ ಬಿ.ಅಯ್ಯಪ್ಪ ಹಾಗೂ ಸಮಾಜ ಸೇವಕ ಪ್ರಸನ್ನ ಭಟ್ ಅವರನ್ನು ಕಾರ್ಯಕ್ರಮದಲ್ಲಿ ಸನ್ಮಾನಿಸಿ ಗೌರವಿಸಲಾಯಿತು. *ಮೇ 26 ರಂದು ವಾರ್ಷಿಕೋತ್ಸವ* ಕ್ರೀಡಾಕೂಟದಲ್ಲಿ ಗೆಲುವು ಸಾಧಿಸಿದ ವಿದ್ಯಾರ್ಥಿಗಳಿಗೆ ಅತಿಥಿಗಳು ಬಹುಮಾನ ವಿತರಿಸಿದರು. ವಿವಿಧ ಸಾಂಸ್ಕøತಿಕ ಚಟುವಟಿಕೆಯಲ್ಲಿ ಗೆದ್ದವರಿಗೆ ಮೇ 26 ರಂದು ನಡೆಯುವ ಕಾಲೇಜು ವಾರ್ಷಿಕೋತ್ಸವದಲ್ಲಿ ಬಹುಮಾನ ವಿತರಿಸಲಾಗುವುದು. ಕೊಡಗು ವಿವಿ ಕುಲಪತಿ ಪ್ರೊ.ಅಶೋಕ್ ಸಂಗಪ್ಪ ಆಲೂರು ಅವರ ಅಧ್ಯಕ್ಷತೆಯಲ್ಲಿ ನಡೆಯುವ ವಾರ್ಷಿಕೋತ್ಸವವನ್ನು ಮಡಿಕೇರಿ ಶಾಸಕ ಡಾ.ಮಂತರ್ ಗೌಡ ಅವರು ಉದ್ಘಾಟಿಸಲಿದ್ದಾರೆ.










