
ಮಡಿಕೇರಿ NEWS DESK ಜೂ.2 : ರಾಜ್ಯ ಸರಕಾರದ ನೂತನ ಸಚಿವ ಸಂಪುಟದಲ್ಲಿ ಕೊಡಗು ಜಿಲ್ಲೆಯ ಶಾಸಕದ್ವಯರಿಗೆ ಸಚಿವ ಸ್ಥಾನ ನೀಡಬೇಕೆಂದು ಮಡಿಕೇರಿ ನಗರ ಮಹಿಳಾ ಕಾಂಗ್ರೆಸ್ ಒತ್ತಾಯಿಸಿದೆ. ಪತ್ರಿಕಾ ಪ್ರಕಟಣೆ ನೀಡಿರುವ ಮಹಿಳಾ ಕಾಂಗ್ರೆಸ್ ನಗರಾಧ್ಯಕ್ಷೆ ಶಶಿಕಲಾ ಅವರು ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕ ಡಿ.ಕೆ.ಶಿವಕುಮಾರ್ ಅವರು ಈ ರಾಜ್ಯದ 25ನೇ ಮುಖ್ಯಮಂತ್ರಿಯಾಗಿ ಅಧಿಕಾರ ವಹಿಸಿಕೊಳ್ಳುತ್ತಿರುವುದು ಹೆಮ್ಮೆ ಎನಿಸಿದೆ. ಇವರ ನೇತೃತ್ವದ ಸಚಿವ ಸಂಪುಟದಲ್ಲಿ ಮಡಿಕೇರಿ ಕ್ಷೇತ್ರದ ಶಾಸಕ ಡಾ.ಮಂತರ್ ಗೌಡ ಹಾಗೂ ವಿರಾಜಪೇಟೆ ಕ್ಷೇತ್ರದ ಶಾಸಕ ಎ.ಎಸ್.ಪೊನ್ನಣ್ಣ ಅವರಿಗೆ ಸಚಿವ ಸ್ಥಾನ ನೀಡಿದಲ್ಲಿ ರಾಜ್ಯದ ಪ್ರಗತಿಗೆ ಮತ್ತು ಉತ್ತಮ ಆಡಳಿತಕ್ಕೆ ಸಹಕಾರಿಯಾಗಲಿದೆ ಎಂದು ಅಭಿಪ್ರಾಯಪಟ್ಟಿದ್ದಾರೆ.
ಜಿಲ್ಲೆಯ ಇಬ್ಬರು ಶಾಸಕರು ರಾಜ್ಯ ಸರಕಾರದ ಗ್ಯಾರಂಟಿ ಯೋಜನೆಗಳನ್ನು ಯಶಸ್ವಿಯಾಗಿ ಅನುಷ್ಠಾನಗೊಳಿಸಿ ಮಹಿಳಾ ಸಬಲೀಕರಣ ಮತ್ತು ಸ್ವಾಭಿಮಾನದ ಬದುಕಿಗೆ ಸಹಕಾರ ನೀಡಿದ್ದಾರೆ. ಮಹಿಳಾ ಕಾಂಗ್ರೆಸ್ ಘಟಕದ ಸಂಘಟನೆಗೂ ಪ್ರೋತ್ಸಾಹ ನೀಡಿರುವ ಇವರು ಜನಸ್ನೇಹಿ ಶಾಸಕರಾಗಿ ಜಿಲ್ಲೆ ಮಾತ್ರವಲ್ಲದೆ ರಾಜ್ಯದಲ್ಲೂ ಮನೆ ಮಾತಾಗಿದ್ದಾರೆ. ಅಭಿವೃದ್ಧಿ ಕಾರ್ಯಗಳಲ್ಲಿ ಇತರರಿಗೆ ಮಾದರಿಯಾಗಿರುವ ಇವರಿಬ್ಬರಿಗೆ ಸಚಿವ ಸ್ಥಾನ ನೀಡುವುದರಿಂದ ದಕ್ಷ ಆಡಳಿತಕ್ಕೆ ಉತ್ತೇಜನ ನೀಡಿದಂತ್ತಾಗುತ್ತದೆ ಮತ್ತು ಕೊಡಗಿನ ಸಮಗ್ರ ಅಭಿವೃದ್ಧಿಗೆ ಪೂರಕ ವಾತಾವರಣ ಸೃಷ್ಟಿಯಾಗುತ್ತದೆ ಎಂದು ಶಶಿಕಲಾ ತಿಳಿಸಿದ್ದಾರೆ.








