
ಮಡಿಕೇರಿ ಜೂ.9 NEWS DESK : ಕೊಡಗು ಜಿಲ್ಲೆಯಲ್ಲಿ ಮುಂಗಾರು ಆರಂಭವಾಗಿದ್ದು, ಮುಂದಿನ ದಿನಗಳಲ್ಲಿ ಹೆಚ್ಚಿನ ಮಳೆಯಾಗುವ ಸಾಧ್ಯತೆ ಇದೆ. ಆದ್ದರಿಂದ ಕುಡಿಯುವ ನೀರನ್ನು ಆಗಾಗ ಪರೀಕ್ಷೆ ಮಾಡಿ, ಶುದ್ಧ ಕುಡಿಯುವ ನೀರು ಪೂರೈಕೆಗೆ ಗಮನ ಹರಿಸಬೇಕು ಎಂದು ಶಾಸಕರಾದ ಡಾ. ಮಂತರ್ ಗೌಡ ಅವರು ಸಲಹೆ ಮಾಡಿದ್ದಾರೆ. ನಗರದ ತಹಶೀಲ್ದಾರ್ ಅವರ ಕಚೇರಿಯಲ್ಲಿ ಮಡಿಕೇರಿ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ತಾಲ್ಲೂಕು ಮಟ್ಟದ ಅಧಿಕಾರಿಗಳು, ಪಿಡಿಒಗಳು, ಕಂದಾಯ ಇಲಾಖೆ ಅಧಿಕಾರಿಗಳು, ಪೊಲೀಸರು ಸೇರಿದಂತೆ ವಿವಿಧ ಇಲಾಖೆ ಅಧಿಕಾರಿಗಳ ಜೊತೆ ‘ಕಾರ್ಯಪಡೆ ಸಮಿತಿ ಸಭೆ’ ನಡೆಸಿ ಅವರು ಮಾತನಾಡಿದರು. ಮಳೆಗಾಲದಲ್ಲಿ ಸಾಂಕ್ರಾಮಿಕ ರೋಗ ಹರಡದಂತೆ ಎಚ್ಚರವಹಿಸಬೇಕು. ತೆಂಗಿನ ಚಿಪ್ಪು, ಟೈರು ಮತ್ತಿತರ ವಸ್ತುಗಳಲ್ಲಿ ನೀರು ನಿಲ್ಲದಂತೆ ಗಮನಹರಿಸಬೇಕು. ಮಳೆ ನೀರು ಸರಾಗವಾಗಿ ಹರಿಯುವಂತಾಗಲು ನಗರ ಮತ್ತು ಗ್ರಾಮೀಣ ಪ್ರದೇಶಗಳಲ್ಲಿ ಕಾಲುವೆ, ಚರಂಡಿಗಳನ್ನು ಸ್ವಚ್ಛಗೊಳಿಸುವ ಕಾರ್ಯ ಆಗಬೇಕು. ರಸ್ತೆ ಬದಿ ಚರಂಡಿಯಲ್ಲಿ ಸರಾಗವಾಗಿ ನೀರು ಹರಿಯುವಂತಾಗಲು ಶುಚಿಗೊಳಿಸುವ ಕಾರ್ಯ ಆಗಬೇಕು ಎಂದು ಸಂಬಂಧಪಟ್ಟ ಎಂಜಿನಿಯರ್‍ಗಳಿಗೆ ಶಾಸಕರು ಸೂಚಿಸಿದರು. ‘ಮಡಿಕೇರಿ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಹಲವು ಗ್ರಾಮಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ಇದೆ ಎಂದರೆ ನಮ್ಮ ವ್ಯವಸ್ಥೆ ವಿಫಲ ಎಂದೇ ಅರ್ಥ. ಅಂಗೈಯಲ್ಲಿ ಬೆಣ್ಣೆ ಇಟ್ಟುಕೊಂಡು ತುಪ್ಪಕ್ಕೆ ಹುಡುಕಾಡಿದಂತಾಗುತ್ತದೆ ನಮ್ಮ ಪರಿಸ್ಥಿತಿ, ಆದ್ದರಿಂದ ಕುಡಿಯುವ ನೀರು ಪೂರೈಕೆಯಲ್ಲಿ ವ್ಯತ್ಯಯವಾಗದಂತೆ ಗಮನಹರಿಸಬೇಕು ಎಂದು ಡಾ. ಮಂತರ್ ಗೌಡ ಅವರು ತಾಕೀತು ಮಾಡಿದರು.’
ಭೂಕುಸಿತ ಹಾಗೂ ಪ್ರವಾಹ ಪೀಡಿತ ಪ್ರದೇಶಗಳಲ್ಲಿನ ಜನರಿಗೆ ಮುನ್ನೆಚ್ಚರಿಕೆ ವಹಿಸುವ ಸಂಬಂಧ ಮಾಹಿತಿ ನೀಡುವುದು. ಕಾಳಜಿ ಕೇಂದ್ರ ತೆರೆಯಲು ಸಿದ್ಧತೆ ಮಾಡಿಕೊಳ್ಳುವುದು, ಸ್ಥಳೀಯರಿಗೆ ಹೆಚ್ಚಿನ ಮಳೆ ಸಂದರ್ಭದಲ್ಲಿ ಸಂತ್ರಸ್ತರಿಗೆ ಧೈರ್ಯ ತುಂಬುವ ಕೆಲಸ ಮಾಡಬೇಕು ಎಂದು ಶಾಸಕರು ಸಲಹೆ ಮಾಡಿದರು. ನೋಡಲ್ ಅಧಿಕಾರಿಗಳು, ಪಿಡಿಒ ಹಾಗೂ ಕಂದಾಯ ಇಲಾಖೆ ಅಧಿಕಾರಿಗಳ ದೂರವಾಣಿ ಸಂಖ್ಯೆ ಸ್ಥಳೀಯರಿಗೆ ಮಾಹಿತಿ ಇರಬೇಕು. ತುರ್ತು ಸಂದರ್ಭದಲ್ಲಿ ಸ್ಥಳಾಂತರಕ್ಕೆ ಸಹಕಾರಿಯಾಗಲಿದೆ. ಆ ನಿಟ್ಟಿನಲ್ಲಿ ಕ್ರಮ ಕೈಗೊಳ್ಳುವಂತೆ ಶಾಸಕರು ನಿರ್ದೇಶನ ನೀಡಿದರು. ಸ್ವಯಂ ಸೇವಕರ ನಿಯೋಜನೆ ಸೇರಿದಂತೆ ಸ್ಥಳೀಯ ಮಟ್ಟದಲ್ಲಿ ಸಂವಹನ ಮತ್ತು ಸಂಪರ್ಕಕ್ಕೆ ಸದಾ ಸಿದ್ಧವಿರಬೇಕು. ಅಗ್ನಿಶಾಮಕ, ಲೋಕೋಪಯೋಗಿ, ಪಂಚಾಯತ್ ರಾಜ್, ಕಂದಾಯ, ಅರಣ್ಯ ಹೀಗೆ ವಿವಿಧ ಇಲಾಖೆಗಳು ಸಮನ್ವಯತೆಯಿಂದ ಕಾರ್ಯನಿರ್ವಹಿಸಬೇಕು. ಮರ ಬಿದ್ದ ಸಂದರ್ಭದಲ್ಲಿ ತೆರವುಗೊಳಿಸುವುದು, ಸುಗಮ ಸಾರಿಗೆ ಸಂಚಾರಕ್ಕೆ ವ್ಯವಸ್ಥೆ ಮಾಡುವುದು, ಹೆಚ್ಚಿನ ಗಾಳಿ-ಮಳೆ ಸಂದರ್ಭದಲ್ಲಿ ವಿದ್ಯುತ್ ಕಂಬಗಳು ಬೀಳುವ ಸಾಧ್ಯತೆ ಇದೆ. ಈ ಬಗ್ಗೆ ಎಚ್ಚರವಹಿಸಬೇಕು ಎಂದರು.
ಕಾಳಜಿ ಕೇಂದ್ರಗಳಲ್ಲಿ ಆಹಾರ ದಾಸ್ತಾನು ಮಾಡಿಕೊಳ್ಳಬೇಕು. ಗುಣಮಟ್ಟದ ಆಹಾರ ಪೂರೈಸಬೇಕು. ಶಾಲೆಯ ಮುಖ್ಯೋಪಾಧ್ಯಾಯರು ಅಗತ್ಯ ಸಹಕಾರ ನೀಡಬೇಕು ಎಂದರು. ಪ್ರಾಕೃತಿಕ ವಿಕೋಪಗಳು ಯಾವ ಸಂದರ್ಭದಲ್ಲಿ ಹೇಗೆ ಬರುತ್ತದೆ ಎಂದು ಹೇಳುವುದು ಅಸಾಧ್ಯ. ಆದ್ದರಿಂದ ಅಗತ್ಯ ಮುನ್ನೆಚ್ಚರ ವಹಿಸುವುದು ಅತ್ಯಗತ್ಯವಾಗಿದೆ ಎಂದರು. ಕೃಷಿಕರು ಜಾನುವಾರುಗಳ ಬಗ್ಗೆ ಅವಿನಾಭಾವ ಸಂಬಂಧ ಹೊಂದಿರುತ್ತಾರೆ. ಆಯಾಯ ಗ್ರಾ.ಪಂ.ವ್ಯಾಪ್ತಿಯಲ್ಲಿ ಜಾನುವಾರು ರಕ್ಷಣೆಗೆ ಮುಂದಾಗಬೇಕು. ಗೋರಕ್ಷಣಾ ಕೇಂದ್ರ ಆರಂಭಕ್ಕೆ ಮುಂದಾಗಬೇಕು. ಅಗತ್ಯ ಮೇವು ಪೂರೈಕೆಗೆ ಕ್ರಮವಹಿಸಬೇಕು ಎಂದು ಶಾಸಕರು ಸೂಚಿಸಿದರು. ಸಾರ್ವಜನಿಕರ ಸಂಕಷ್ಟಕ್ಕೆ ಸ್ಪಂದಿಸುವುದು ಅಧಿಕಾರಿಗಳ ಕರ್ತವ್ಯವಾಗಿದೆ. ಆ ನಿಟ್ಟಿನಲ್ಲಿ ಗಮನಹರಿಸಬೇಕು. ಲೋಕೋಪಯೋಗಿ, ಪಂಚಾಯತ್ ರಾಜ್, ಸೆಸ್ಕ್, ಅರಣ್ಯ ಹೀಗೆ ವಿವಿಧ ಇಲಾಖೆಗಳು ತಮ್ಮ ತಮ್ಮ ವ್ಯಾಪ್ತಿಯಲ್ಲಿ ಅಗತ್ಯ ಸಿದ್ಧತೆ ಮಾಡಿಕೊಳ್ಳುವಂತೆ ಸೂಚಿಸಿದರು. ವಸತಿ ಶಾಲೆಗಳು, ವಿದ್ಯಾರ್ಥಿ ನಿಲಯಗಳು, ಅಂಗನವಾಡಿ ಹಾಗೂ ಶಾಲೆಗಳು ಸುಸ್ಥಿತಿಯಲ್ಲಿರುವ ಬಗ್ಗೆ ಗಮನಹರಿಸಬೇಕು ಎಂದು ಸಲಹೆ ಮಾಡಿದರು. ಶಾಲೆಗಳಿಗೆ ಮಕ್ಕಳು ಬಸ್ಸು, ವ್ಯಾನ್ ಅಥವಾ ನಡೆದುಕೊಂಡು ಹೋಗುತ್ತಾರೆಯೇ ಎಂಬ ಬಗ್ಗೆ ಅಧಿಕಾರಿಗಳಲ್ಲಿ ಮಾಹಿತಿ ಇರಬೇಕು ಎಂದು ಶಾಸಕರು ಹೇಳಿದರು. ಪ್ರತೀ ಗ್ರಾ.ಪಂ.ಯಲ್ಲಿ ಆಡಳಿತಾಧಿಕಾರಿಗಳು ಸಭೆ ನಡೆಸಿ ವರದಿ ನೀಡುವಂತೆ ಸೂಚಿಸಿದರು. ಅಗತ್ಯವಿರುವ ಕಡೆ ಟಾರ್ಪಲ್ ವಿತರಿಸುವಂತಾಗಬೇಕು. ಸಹಾಯವಾಣಿ ಕೇಂದ್ರ ತೆರೆದು ಮಾಹಿತಿ ನೀಡಬೇಕು. ಸಾರ್ವಜನಿಕರಿಗೆ ಸ್ಪಂದಿಸುವ ನಿಟ್ಟಿನಲ್ಲಿ ಕ್ರಮವಹಿಸುವಂತೆ ಶಾಸಕರಾದ ಡಾ.ಮಂತರ್ ಗೌಡ ಅವರು ನಿರ್ದೇಶನ ನೀಡಿದರು. ನಗರಸಭೆ ಅಧ್ಯಕ್ಷರಾದ ಪಿ.ಕಲಾವತಿ ಅವರು ಮಾತನಾಡಿ ನಗರಸಭೆ ವ್ಯಾಪ್ತಿಯ ಎಲ್ಲಾ ಬಡಾವಣೆಗಳಲ್ಲಿ ಗಿಡಗಂಟೆಗಳನ್ನು ಕಡಿಯುವ ಕೆಲಸ ಮಾಡಲಾಗುತ್ತಿದೆ. ಕಾಲುವೆ ಹಾಗೂ ಚರಂಡಿ ಶುಚಿಗೊಳಿಸುವ ಕಾರ್ಯ ನಡೆದಿದೆ. ಭೂಕುಸಿತ ಪ್ರದೇಶಗಳಲ್ಲಿನ ಜನರಿಗೆ ಹೆಚ್ಚಿನ ಮಳೆ ಸಂದರ್ಭದಲ್ಲಿ ಕಾಳಜಿ ಕೇಂದ್ರಕ್ಕೆ ಸ್ಥಳಾಂತರಕ್ಕೆ ಮಾಹಿತಿ ನೀಡಲಾಗಿದೆ ಎಂದರು. ಮಡಿಕೇರಿ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾದ ರಾಜೇಶ್ ಯಲ್ಲಪ್ಪ ಅವರು ಮಾತನಾಡಿ ಮಡಿಕೇರಿ ನಗರ ವ್ಯಾಪ್ತಿಯಲ್ಲಿ ಬೀಳುವ ಹಂತದಲ್ಲಿರುವ ಮರದ ಕೊಂಬೆಗಳನ್ನು ತೆರವುಗೊಳಿಸಲು ಅನುಮತಿ ನೀಡುವಂತಾಗಬೇಕು ಎಂದು ಕೋರಿದರು. ತಾ.ಪಂ.ಇಒ ಶೇಖರ್ ಅವರು ಮಾತನಾಡಿ ಸೂಕ್ಷ್ಮ ಹಾಗೂ ಪ್ರವಾಹ ಪೀಡಿತ ಪ್ರದೇಶದಲ್ಲಿ ವಾಸಿಸುವ ಸಂತ್ರಸ್ತರಿಗೆ ಆಯಾಯ ಗ್ರಾ.ಪಂ. ವ್ಯಾಪ್ತಿಯಲ್ಲಿ ನಿವೇಶನ ಗುರುತಿಸಿ, ಮನೆ ನಿರ್ಮಿಸಿಕೊಡಲು ಪ್ರಯತ್ನಗಳು ನಡೆದಿವೆ ಎಂದರು.
ತಹಶೀಲ್ದಾರಾದ ಶ್ರೀಧರ ಅವರು ಮಾತನಾಡಿ ಮಡಿಕೇರಿ ತಾಲ್ಲೂಕು ವ್ಯಾಪ್ತಿಯಲ್ಲಿ ಮಳೆಗಾಲದಲ್ಲಿ ಅಗತ್ಯ ಮುನ್ನೆಚ್ಚರ ವಹಿಸುವ ಬಗ್ಗೆ ಗಮನಹರಿಸಲಾಗಿದೆ ಎಂದರು. ಪೌರಾಯುಕ್ತರಾದ ಎಚ್.ಆರ್.ರಮೇಶ್ ಅವರು ಮಾಹಿತಿ ನೀಡಿ ಮಡಿಕೇರಿ ನಗರದಲ್ಲಿ ಮಳೆಗಾಲದಲ್ಲಿ ಕೈಗೊಳ್ಳಲಾಗಿರುವ ಕ್ರಮಗಳ ಬಗೆ ಮಾಹಿತಿ ನೀಡಿದರು. ತಾಲ್ಲೂಕು ಅಧಿಕಾರಿಗಳು, ಪೊಲೀಸ್ ಅಧಿಕಾರಿಗಳು, ಎಂಜಿನಿಯರ್‍ಗಳು, ಪಿಡಿಒಗಳು, ಮಳೆಗಾಲದಲ್ಲಿ ವಹಿಸಲಾಗಿರುವ ಮುನ್ನೆಚ್ಚರಿಕಾ ಕ್ರಮಗಳ ಬಗ್ಗೆ ಮಾಹಿತಿ ನೀಡಿದರು.









