
ಮಡಿಕೇರಿ ಜೂ.16 NEWS DESK : 12ನೇ ಅಂತರಾಷ್ಟ್ರೀಯ ಯೋಗ ದಿನಾಚರಣೆಯನ್ನು ಪ್ರತಿ ವರ್ಷದಂತೆ ಜೂನ್, 21 ರಂದು ಆಯುಷ್ ಮಂತ್ರಾಲಯ, ಭಾರತ ಸರ್ಕಾರ, ಆಯುಷ್ ಇಲಾಖೆ ಕರ್ನಾಟಕ ಸರ್ಕಾರ ಮತ್ತು ಕೊಡಗು ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಆಯುಷ್ ಇಲಾಖೆ ವತಿಯಿಂದ ಆಚರಿಸಲು ನಿರ್ಧರಿಸಲಾಗಿದೆ. 12ನೇ ಅಂತರಾಷ್ಟ್ರೀಯ ಯೋಗ ದಿನಾಚರಣೆಯ ಅಂಗವಾಗಿ ಕೊಡಗು ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಆಯುಷ್ ಇಲಾಖೆ, ಕೊಡಗು ಜಿಲ್ಲೆ, ಶಾಲಾ ಶಿಕ್ಷಣ ಇಲಾಖೆ, ಯೋಗ ಒಕ್ಕೂಟ, ಮಡಿಕೇರಿ, ಸ್ಕೌಟ್ಸ್ ಮತ್ತು ಗೈಡ್ಸ್, ಜಿಲ್ಲಾ ಪೋಲೀಸ್ ಇಲಾಖೆ ಸಂಯುಕ್ತ ಆಶ್ರಯದಲ್ಲಿ ನಗರದ ಗಾಂಧಿ ಮೈದಾನದಿಂದ ಹಳೆಯ ಖಾಸಗಿ ಬಸ್ ನಿಲ್ದಾಣ ಮೂಲಕ ಗಾಂಧಿ ಮೈದಾನದವರೆಗೆ ಜಾಥಾ ನಡೆಯಿತು. ನಗರಸಭೆ ಅಧ್ಯಕ್ಷರಾದ ಪಿ.ಕಲಾವತಿ ಅವರು ಕಾರ್ಯಕ್ರಮಕ್ಕೆ ಹಸಿರು ನಿಶಾನೆ ತೋರುವುದರ ಮೂಲಕ ಜಾಥಾಗೆ ಚಾಲನೆ ನೀಡಿದರು. ಕಾರ್ಯಕ್ರಮದಲ್ಲಿ ನಗರಸಭೆ ಸದಸ್ಯರಾದ ಶ್ರೀನಾಥ್, ಜಿಲ್ಲಾ ಆಯುಷ್ ಅಧಿಕಾರಿ ಡಾ.ಶೈಲಜಾ.ಜಿ, ಕೊಡಗು ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯ ಡಾ.ರಾಮಚಂದ್ರ ಕಾಮತ್, ಶಾಲಾ ಶಿಕ್ಷಣ ಇಲಾಖೆ, ಡಿ.ಪಿ.ಓ ಶ್ರೀನಿವಾಸ, ಸೌಟ್ಸ್ ಮತ್ತು ಗೈಡ್ಸ್‍ನ ಮುಖ್ಯಸ್ಥರಾದ ಬೇಬಿ ಮ್ಯಾಥ್ಯೂ, ಯೋಗ ಒಕ್ಕೂಟದ ಮಹೇಶ್ ಕುಮಾರ್, ಯೋಗ ಮತ್ತು ಪ್ರಕೃತಿ ಚಿಕಿತ್ಸೆ, ವೈದ್ಯಾಧಿಕಾರಿ ಡಾ.ಅರುಣ್.ಪಿ.ಜಿ ಉಪಸ್ಥಿತರಿದ್ದರು. ಕಾರ್ಯಕ್ರಮದಲ್ಲಿ ಸುಮಾರು 400 ಜನ ಭಾಗವಹಿಸಿದ್ದರು. ನಗರ ಪೊಲೀಸ್ ಠಾಣೆ ಬಳಿ ಯೋಗ ಪ್ರದರ್ಶನ ನಡೆಯಿತು. ಜಿಲ್ಲಾ ಆಯುಷ್ ಅಧಿಕಾರಿ ಡಾ.ಜಿ.ಶೈಲಜಾ ಅವರು ಮಾತನಾಡಿ ದೈಹಿಕ ಮತ್ತು ಮಾನಸಿಕ ಆರೋಗ್ಯಕ್ಕೆ ಯೋಗ ಮತ್ತು ವ್ಯಾಯಾಮ ಉಪಯುಕ್ತವಾಗಿದೆ ಎಂದರು. ಯೋಗವು ಕೇವಲ ವ್ಯಾಯಾಮವಲ್ಲ. ಬದಲಿಗೆ ಒತ್ತಡವನ್ನು ಕಡಿಮೆ ಮಾಡಿ ದೇಹ ಮತ್ತು ಮನಸ್ಸಿಗೆ ಸಮತೋಲನ ನೀಡುತ್ತದೆ ಎಂದು ಅವರು ಅಭಿಪ್ರಾಯಪಟ್ಟರು. ಯೋಗವು ದೈಹಿಕ, ಮಾನಸಿಕ ಮತ್ತು ಆಧ್ಯಾತ್ಮಿಕ ಆರೋಗ್ಯವನ್ನು ಸಮತೋಲನಗೊಳಿಸುವಲ್ಲಿ ಸಹಕಾರಿಯಾಗಿದೆ. ಇದು ಉಸಿರಾಟದ ನಿಯಂತ್ರಣ, ಆಸನಗಳು ಮತ್ತು ಧ್ಯಾನದ ಮೂಲಕ ಒತ್ತಡ ಕಡಿಮೆ ಮಾಡುತ್ತದೆ. ಜೊತೆಗೆ ನವ್ಯತೆಯನ್ನು ಹೆಚ್ಚಿಸುತ್ತದೆ. ಇದರಿಂದ ದೇಹದ ಆರೋಗ್ಯ ಗುಣಮಟ್ಟ ಸುಧಾರಿಸಲಿದೆ ಎಂದು ಡಾ.ಶೈಲಜಾ ಅವರು ಮಾಹಿತಿ ನೀಡಿದರು. ಯೋಗಾಭ್ಯಾಸದಿಂದ ದೈಹಿಕ ಆರೋಗ್ಯ, ಮಾನಸಿಕ ಮತ್ತು ಭಾವನಾತ್ಮಕ ಆರೋಗ್ಯ ಚೆನ್ನಾಗಿರಲಿದೆ. ಜೀವನ ಶೈಲಿ ಸುಧಾರಣೆಯಾಗಲಿದೆ ಎಂದು ಜಿಲ್ಲಾ ಆಯುಷ್ ಅಧಿಕಾರಿ ಅವರು ಅಭಿಪ್ರಾಯ ವ್ಯಕ್ತಪಡಿಸಿದರು.









