
ಮಡಿಕೇರಿ NEWS DESK ಜೂ.17 : ಮಳೆಗಾಲ ಆರಂಭಗೊoಡು ಎರಡು ವಾರಗಳೇ ಕಳೆದಿದ್ದರೂ ಕಾವೇರಿ ನಾಡು ಕೊಡಗಿಗೆ ಮಳೆಯಾಗದೆ ಇರುವುದರಿಂದ ಆತಂಕ ಎದುರಾಗಿದೆ. ಈ ಕಾರಣದಿಂದ ಮಳೆಗಾಗಿ ಪ್ರಾರ್ಥಿಸಲು ನಾಪೋಕ್ಲು ಹೋಬಳಿಯ ಬಲಮುರಿಯ ಶ್ರೀ ಅಗಸ್ತೇಶ್ವರ ದೇವಾಲಯದಲ್ಲಿ ಜೂ.20 ರಂದು ವಿಶ್ವ ಹಿಂದೂ ಪರಿಷತ್ ವತಿಯಿಂದ ಪರ್ಜನ್ಯ ಜಪ ನಡೆಸಲಾಗುವುದು ಎಂದು ವಿಹೆಚ್‌ಪಿಯ ಕೊಡಗು ಜಿಲ್ಲಾ ಮಠ ಮಂದಿರ ಪುರೋಹಿತ ಪ್ರಮುಖ್ ಮಹಾಬಲೇಶ್ವರ ಭಟ್ ಅವರು ತಿಳಿಸಿದ್ದಾರೆ. ಶನಿವಾರ ಬೆಳಿಗ್ಗೆ 10.30 ಗಂಟೆಗೆ ಶ್ರೀ ಅಗಸ್ತೇಶ್ವರನ ಸನ್ನಿಧಿಯಲ್ಲಿ ಪರ್ಜನ್ಯ ಜಪ, ಪಂಚಾಮೃತ ಅಭಿಷೇಕ, ಅಲಂಕಾರ ಪೂಜೆ, ರುದ್ರ ಪಠಣ, ಮಹಾಪೂಜೆ, ಮಹಾ ಮಂಗಳಾರತಿ ಹಾಗೂ ತೀರ್ಥ ಪ್ರಸಾದ ವಿತರಣೆಯಾಗಲಿದೆ. ಭಕ್ತರು ದೇವರಿಗೆ ಹಾಲು, ಹಣ್ಣು, ಎಳನೀರು, ತೆಂಗಿನ ಕಾಯಿ, ಮೊಸರು, ಜೇನು, ಹಸುವಿನ ತುಪ್ಪ ಮತ್ತು ಹೂವನ್ನು ತರಬಹುದು. ನಾಡಿಗೆ ಉತ್ತಮ ಮಳೆ ಬೆಳೆಯಾಗಿ ಸಮೃದ್ಧಿಯಾಗಲಿ ಎಂದು ಪ್ರಾರ್ಥಿಸಲು ಜಿಲ್ಲೆಯ ಸರ್ವ ಭಕ್ತರು, ವಿಶ್ವ ಹಿಂದೂ ಪರಿಷತ್ ಸೇರಿದಂತೆ ಎಲ್ಲಾ ಹಿಂದೂ ಸಂಘಟನೆಗಳ ಪ್ರಮುಖರು, ಕಾರ್ಯಕರ್ತರು, ಬಲಮುರಿ ಗ್ರಾಮಸ್ಥರು, ದೇವಾಲಯದ ತಕ್ಕರು ಹಾಗೂ ಆಡಳಿತ ಮಂಡಳಿಯ ಸದಸ್ಯರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳುವಂತೆ ಕೊಡಗು ಜಿಲ್ಲಾ ವಿಶ್ವ ಹಿಂದೂ ಪರಿಷತ್ ಪರವಾಗಿ ಮಹಾಬಲೇಶ್ವರ ಭಟ್ ಮನವಿ ಮಾಡಿದ್ದಾರೆ.

















