
ವಿರಾಜಪೇಟೆ ಜೂ.19 NEWS DESK : ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ವತಿಯಿಂದ ತಿತಿಮತಿಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಗಿಡ ನೆಡುವ ಕಾರ್ಯಕ್ರಮ ನಡೆಯಿತು. ಯೋಜನೆಯ ಪದಾಧಿಕಾರಿಗಳು ಹಾಗೂ ಶಾಲಾ ಮಕ್ಕಳು ಶಾಲೆಯ ಆವರಣದೊಳಗೆ ವಿವಿಧ ಗಿಡಗಳನ್ನು ನೆಟ್ಟರು. ನಂತರ ಶಾಲಾ ಮಕ್ಕಳಿಗೆ ವಿವಿಧ ಹಸಿರು ಎಲೆಗಳನ್ನು ಗುರುತಿಸಿ ಹೇಳುವ ಸ್ಪರ್ಧೆಯನ್ನು ಆಯೋಜಿಸಲಾಗಿತ್ತು. ಅತೀ ಹೆಚ್ಚು ಹಸಿರೆಲೆಗಳನ್ನು ಗುರುತಿಸಿ ಹೇಳಿದ ಮಕ್ಕಳಿಗೆ ಬಹುಮಾನಗಳನ್ನು ಸಂಘದ ವತಿಯಿಂದ ವಿತರಿಸಲಾಯಿತು. ಶಾಲಾ ಮಕ್ಕಳಿಗೆ ಪರಿಸರ ಜಾಗೃತಿಯ ಕುರಿತು ವಿವರಣೆ ನೀಡಲಾಯಿತು. ಹಾಗೂ ಗಿಡಗಳನ್ನು ನೆಡುವುದರಿಂದ ಆಗುವ ಪ್ರಯೋಜನಗಳ ಕುರಿತು ಮಾಹಿತಿಯನ್ನು ನೀಡಲಾಯಿತು. ಈ ಸಂದರ್ಭ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಜಿಲ್ಲಾ ನಿರ್ದೇಶಕರಾದ ವಿಠಲ್, ವಲಯದ ಮೇಲ್ವಿಚಾರಕರಾದ ಗೀತಾ, ಶೌರ್ಯ ವಿಪತ್ತು ತಂಡದ ಸದಸ್ಯರುಗಳಾದ ಜಯಪ್ರಕಾಶ್, ಪದ್ಮ, ಸರೋಜ, ಶಾಲಾ ಮುಖ್ಯ ಶಿಕ್ಷಕರು, ಸಹ ಶಿಕ್ಷಕರು ಹಾಗೂ ಶಾಲಾ ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.









