
ವಿರಾಜಪೇಟೆ ಜೂ.25 NEWS DESK : ವಿದ್ಯಾರ್ಥಿಗಳು ದುಶ್ಚಟಗಳಿಗೆ ಬಲಿಯಾಗದೆ ಆರೋಗ್ಯವಂತ ಸಮಾಜವನ್ನು ನಿರ್ಮಿಸಬೇಕು. ಅದಕ್ಕಾಗಿ ಮಾದಕ ದ್ರವ್ಯಗಳ ವಿರುದ್ಧ ಯುದ್ಧ ಸಾರಬೇಕಿದೆ ಎಂದು ವಿರಾಜಪೇಟೆ ಉಪವಿಭಾಗದ ಡಿವೈಎಸ್ಪಿ ಮಹೇಶ್ ಕುಮಾರ್ ಅವರು ಹೇಳಿದರು. ಕೊಡಗು ಜಿಲ್ಲಾ ಪೋಲಿಸ್ ಇಲಾಖೆ, ವಿರಾಜಪೇಟೆ ಪೋಲಿಸ್ ಠಾಣೆ ಹಾಗೂ ಸಂತ ಅನ್ನಮ್ಮ ಪದವಿ ಪೂರ್ವ ಕಾಲೇಜಿನ ಸಹಯೋಗದಲ್ಲಿ ಕಾಲೇಜಿನ ಸಭಾಂಗಣದಲ್ಲಿ ಆಯೋಜಿಸಲಾಗಿದ್ದ ಮಾದಕ ವಸ್ತುಗಳ ಸೇವನೆಯ ಕುರಿತ ಜಾಗೃತಿ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದರು. ಉತ್ತಮ ಹವ್ಯಾಸಗಳನ್ನು ಬೆಳೆಸಿಕೊಳ್ಳಲು ವಿದ್ಯಾರ್ಥಿಗಳು ಉತ್ತಮ ಸ್ನೇಹಿತರ ಗೆಳೆತನವನ್ನು ಮಾಡಬೇಕು. ಭವ್ಯ ಭಾರತದಲ್ಲಿ ಯುವ ಜನತೆಯ ಮೇಲೆ ಅಪಾರ ನಿರೀಕ್ಷೆಯಿದ್ದು ಡ್ರಗ್ ನಿರ್ಮೂಲನೆಯನ್ನು ಮಾಡಿ ಎಂದು ಹೇಳಿದರು. ಡ್ರಗ್ಸ್ ಪ್ರಪಂಚದಲ್ಲಿ ಅತೀ ದೊಡ್ಡ ಸಾಮಾಜಿಕ ಪಿಡುಗು ಆಗಿದ್ದು ಅದರ ನಿರ್ಮೂಲನೆ ಮಾಡುವುದು ಎಲ್ಲರ ಜವಾಬ್ದಾರಿಯಾಗಿದೆ ಎಂದರು. ಪೊಲೀಸ್ ಇಲಾಖೆಯ ವತಿಯಿಂದ ಸನ್ಮಿತ್ರ ಕಾರ್ಯಯೋಜನೆಯನ್ನು ಹಮ್ಮಿಕೊಂಡಿದ್ದು ಡ್ರಗ್ಸ್ ನಿರ್ಮೂಲನೆಗೆ ಸಹಕಾರಿಯಾಗಿದೆ ಎಂದು ಹೇಳಿದರು. ಮಾದಕ ವಸ್ತುಗಳು ಸೇವನೆಯ ದಾಸರಾಗದೇ ನಿಮ್ಮ ಕನಸು, ತಂದೆ ತಾಯಿಗಳ ತ್ಯಾಗ,ಶಿಕ್ಷಕರ ಸೇವೆಯನ್ನು ಗೌರವಿಸಿ ಭವ್ಯ ರಾಷ್ಟ್ರದ ಪ್ರಜೆಗಳಾಗಿ ಬಾಳಿ ಎಂದು ಕರೆ ನೀಡಿದರು. ಜಿಲ್ಲಾ ಪೋಲಿಸ್ ಇಲಾಖೆಯ ಕ್ರೈಂ ವಿಭಾಗದ ಅಧಿಕಾರಿ ಸಚಿನ್ ಮಾತನಾಡಿ, ಡ್ರಗ್ಸ್ ಸೇವನೆಯು ಒಂದು ಪಿಡುಗಾಗಿದ್ದು ಅದನ್ನು ನಿಯಂತ್ರಣ ಮಾಡದಿದ್ದರೆ ಸಮಾಜ ಹಾಗೂ ರಾಷ್ಟ್ರಕ್ಕೆ ಆಪತ್ತು ಎಂದು ಹೇಳಿದರು. ಸಾಕ್ಷ್ಯ ಚಿತ್ರಗಳ ಮೂಲಕ ಮಾದಕ ವಸ್ತುಗಳ ವಿಧಗಳು, ಸೇವನೆಯ ಪರಿಣಾಮಗಳು ಹಾಗೂ ಆರೋಗ್ಯದ ಮೇಲೆ ಆಗುವ ಹಾನಿಗಳ ಕುರಿತು ಉದಾಹರಣೆ ಸಮೇತ ವಿವರಿಸಿದರು. ಸಮಾಜದಲ್ಲಿಯೂ ಪ್ರತಿಯೊಬ್ಬರು ಜಾಗೃತಿಯನ್ನು ಮೂಡಿಸಿ ಎಂದು ಹೇಳಿದರು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಸಂತ ಅನ್ನಮ್ಮ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲರಾದ ರೆ. ಫಾ.ಮದಲೈ ಮುತ್ತು ಅವರು ಮಾತನಾಡಿ, ಯುವ ಜನರು ಮಾದಕ ವಸ್ತುಗಳ ಸೇವನೆಗೆ ಬಲಿಯಾಗದೆ ಸ್ವಾಸ್ತ್ಯ ಸಮಾಜವನ್ನು ನಿರ್ಮಾಣ ಮಾಡಬೇಕು. ಆರೋಗ್ಯವನ್ನು ಕಾಪಾಡಿಕೊಳ್ಳುವುದರ ಜೊತೆಗೆ ದೈಹಿಕವಾಗಿ ಹಾಗೂ ಮಾನಸಿಕವಾಗಿ ಸದೃಢರಾಗಿ ಎಂದು ಹೇಳಿದರು. ಪೋಲಿಸ್ ಇಲಾಖೆಯ ವತಿಯಿಂದ ಇಂದು ಆಯೋಜಿಸಲಾದ ಜಾಗೃತಿ ಕಾರ್ಯಕ್ರಮವು ಅತ್ಯಂತ ಮಹತ್ವದ್ದಾಗಿದ್ದು ವಿದ್ಯಾರ್ಥಿಗಳು ಅದನ್ನು ಅರಿತು ಇತರರಲ್ಲಿಯೂ ಜಾಗೃತಿ ಮೂಡಿಸಿ ಎಂದು ಕರೆ ನೀಡಿದರು. ಈ ಸಂದರ್ಭದಲ್ಲಿ ಡ್ರಗ್ಸ್ ಜಾಗೃತಿಯ ಘೋಷಣಾ ಫಲಕಗಳನ್ನು ಹಿಡಿದು ವಿದ್ಯಾರ್ಥಿಗಳು ಡ್ರಗ್ಸ್ ಮುಕ್ತ ಸಮಾಜ ನಿರ್ಮಿಸುವುದಾಗಿ ಘೋಷಣೆಯನ್ನು ಮಾಡಿದರು. ವೇದಿಕೆಯಲ್ಲಿ ವಿರಾಜಪೇಟೆ ಪೋಲಿಸ್ ವೃತ್ತ ನಿರೀಕ್ಷಕ ಪಿ. ಅನೂಪ್ ಮಾದಪ್ಪ, ನಗರ ಪೊಲೀಸ್ ಠಾಣಾಧಿಕಾರಿ ಪ್ರಮೋದ್, ಅಪರಾದ ವಿಭಾಗದ ಠಾಣಾಧಿಕಾರಿ ಕಾವೇರಪ್ಪ, ಗ್ರಾಮಾಂತರ ಪೊಲೀಸ್ ಠಾಣಾಧಿಕಾರಿ ಲತಾ ಉಪಸ್ಥಿತರಿದ್ದರು. ಉಪನ್ಯಾಸಕ ವಿವೇಕ್ ಸ್ವಾಗತಿಸಿ ನಿರೂಪಿಸಿದರು. ಈ ಸಂದರ್ಭದಲ್ಲಿ ಉಪನ್ಯಾಸಕರು, ಪೋಲಿಸ್ ಇಲಾಖೆಯ ಸಿಬ್ಬಂದಿಗಳು, ವಿದ್ಯಾರ್ಥಿಗಳು ಉಪಸ್ಥಿತರಿದ್ದರು.


















