
ಮಡಿಕೇರಿ ಜೂ.26 NEWS DESK : ಶಾಮಿಯಾನ ಮತ್ತು ಡೆಕೋರೇಶನ್ ಕ್ಷೇತ್ರದಲ್ಲಿ ಕಾರ್ಯ ನಿರ್ವಹಿಸುತ್ತಿರುವವರಿಗೆ ಅಗತ್ಯ ಸೌಲಭ್ಯ ಒದಗಿಸಿಕೊಡುವ ನಿಟ್ಟಿನಲ್ಲಿ “ಕೊಡಗು ಜಿಲ್ಲಾ ಸೌಂಡ್, ಲೈಟ್, ಶಾಮಿಯಾನ, ಡೆಕೋರೇಶನ್ ಅಸೋಸಿಯೇಷನ್” ಅಸ್ತಿತ್ವಕ್ಕೆ ಬಂದಿದೆ. ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ನೂತನ ಸಂಘಟನೆಯ ಅಧ್ಯಕ್ಷ ಅಜ್ಜೆಟ್ಟಿರ ಲೋಕೇಶ್ ಅವರು, ಜಿಲ್ಲಾ ವ್ಯಾಪ್ತಿಯಲ್ಲಿ ಶಾಮಿಯಾನ ಮತ್ತು ಡೆಕೋರೇಶನ್ ಕ್ಷೇತ್ರದಲ್ಲಿ ಕಾರ್ಯ ನಿರ್ವಹಿಸುತ್ತಿರುವವರನ್ನು ಸಂಘಟಿಸುವ ಉದ್ದೇಶದಿಂದ ಸಂಘಟನೆಯನ್ನು ಆರಂಭಿಸಲಾಗಿದೆ. ಜಿಲ್ಲಾ ವ್ಯಾಪ್ತಿಯಲ್ಲಿನ 80ಕ್ಕೂ ಹೆಚ್ಚು ಮಂದಿ ಈಗಾಗಲೇ ಸದಸ್ಯತ್ವವನ್ನು ಹೊಂದಿಕೊಂಡಿದ್ದಾರೆ ಎಂದರು. ಸಂಘಟನೆಯ ಪ್ರಧಾನ ಕಾರ್ಯದರ್ಶಿ ಅವಿನ್ ಕುಮಾರ್ ಮಾತನಾಡಿ, ಶಾಮಿಯಾನ ಮತ್ತು ಡೆಕೋರೇಶನ್ ಗೆ ಸಂಬಂಧಿಸಿದಂತೆ ಕೊಡಗು ಜಿಲ್ಲೆಯಲ್ಲಿ ಸುಮಾರು 150 ಸಂಸ್ಥೆಗಳು ಕಾರ್ಯನಿರ್ವಹಿಸುತ್ತಿವೆ. ಈ ಸಂಸ್ಥೆಗಳಲ್ಲಿ ಕಾರ್ಯನಿರ್ವಹಿಸುತ್ತಿರುವವರಿಗೆ ಅಗತ್ಯ ಮೂಲಭೂತ ಸೌಲಭ್ಯ ಒದಗಿಸುವುದು ಮತ್ತು ಆರೋಗ್ಯ ರಕ್ಷಣೆಯ ಕಾರ್ಯಕ್ರಮ ಹಮ್ಮಿಕೊಳ್ಳುವುದು ಸಂಘಟನೆಯ ಉದ್ದೇಶವಾಗಿದೆ ಎಂದು ಹೇಳಿದರು. ಜಾಂಚಿ ಲೋಕೇಶ್ ಹೆಚ್.ಪಿ. ಮಾತನಾಡಿ, ಜಿಲ್ಲಾ ವ್ಯಾಪ್ತಿಯಲ್ಲಿ ಪರವಾನಗಿ ಪಡೆದು ಕಾರ್ಯನಿರ್ವಹಿಸುತ್ತಿರುವ ಸೌಂಡ್, ಲೈಟ್, ಶಾಮಿಯಾನ ಸಂಸ್ಥೆಗಳಿಗಷ್ಟೆ ಕೆಲಸ ನೀಡುವಂತೆ ಸಾರ್ವಜನಿಕರಲ್ಲಿ ಮನವಿ ಮಾಡಿಕೊಂಡರು.
ಈಗಾಗಲೇ ಜಿಲ್ಲೆಯ ವಿವಿಧೆಡೆಗಳ ಸಮಾರಂಭಗಳಲ್ಲಿ ಕೆಲಸ ನಿರ್ವಹಿಸುವುದಾಗಿ ಒಪ್ಪಿಕೊಂಡ ಕೆಲವರು ಮುಂಗಡ ಹಣ ಪಡೆದು ಗ್ರಾಹಕರನ್ನು ವಂಚಿಸುತ್ತಿರುವ ಪ್ರಕರಣಗಳು ನಡೆಯತ್ತಿದೆ. ಈ ಹಿನ್ನೆಲೆ ಪರವಾನಗಿ ಹೊಂದಿರುವವರಿಗೆ ಮಾತ್ರ ಕೆಲಸ ನೀಡುವಂತೆ ಕೋರಿದರು. ಸಂಘದ ನಿರ್ದೇಶಕ ಉಜ್ವಲ್ ಬಿದ್ರುಪಣೆ ಮಾತನಾಡಿ, ನೂತನ ಸಂಘದ ಉದ್ಘಾಟನಾ ಸಮಾರಂಭ ಮತ್ತು ಸದಸ್ಯರುಗಳ ಕುಟುಂಬದ ಸಮ್ಮಿಲನ ಕಾರ್ಯಕ್ರಮವನ್ನು ಶೀಘ್ರದಲ್ಲೆ ಆಯೋಜಿಸಲಾಗುವುದು ಎಂದು ತಿಳಿಸಿದರು. ಸುದ್ದಿಗೋಷ್ಠಿಯಲ್ಲಿ ಕಾರ್ಯದರ್ಶಿ ರವೀಂದ್ರ ಹಾಗೂ ನಿರ್ದೇಶಕ ಯಾಸಿನ್ ಉಪಸ್ಥಿತರಿದ್ದರು.








