
ಸೋಮವಾರಪೇಟೆ ಜೂ.29 NEWS DESK : ಗ್ರಾಮೀಣ ರಸ್ತೆಗಳ ಅಭಿವೃದ್ಧಿಗೂ ಹೆಚ್ಚಿನ ಅನುದಾನ ಕಲ್ಪಿಸುವುದು ನಮ್ಮ ಜವಾಬ್ದಾರಿಯಾಗಿದೆ. ಗ್ರಾಮೀಣ ರಸ್ತೆಗಳ ಕಾಮಗಾರಿ ಕಳಪೆಯಾಗದಂತೆ ಗ್ರಾಮಸ್ಥರು ಹೆಚ್ಚಿನ ಮುತುವರ್ಜಿ ವಹಿಸಬೇಕು ಎಂದು ಶಾಸಕ ಡಾ.ಮಂತರ್‍ಗೌಡ ಹೇಳಿದರು. ಹೊನವಳ್ಳಿ, ಸುಳಿಮಳ್ತೆ ಮಾರ್ಗದಲ್ಲಿ 50 ಲಕ್ಷ ರೂ.ಗಳ ಹೊನ್ನಮ್ಮನ ಕೆರೆ ಸಂಪರ್ಕ ರಸ್ತೆ ಕಾಮಗಾರಿಗೆ ಸೋಮವಾರ ಭೂಮಿ ಪೂಜೆ ನೆರವೇರಿಸಿ ಮಾತನಾಡಿದರು. ಗ್ರಾಮೀಣ ಭಾಗದ ರಸ್ತೆ ಕಾಮಗಾರಿಗಳು ನಡೆಯುವಾಗ ಅವಶ್ಯಕತೆವಿದ್ದಲ್ಲಿ ಗ್ರಾಮಸ್ಥರು ಒಂದಷ್ಟು ಜಾಗವನ್ನು ಬಿಟ್ಟುಕೊಡಬೇಕು. ಸುಗಮರಸ್ತೆಗಳ ನಿರ್ಮಾಣದಿಂದ ಮುಂದಿನ ಪೀಳಿಗೆಗೆ ಉಪಯೋಗವಾಗಲಿದೆ ಎಂದು ಹೇಳಿದರು. ಸುಳಿಮಳ್ತೆ ರಸ್ತೆಗಾಗಿ ಅನೇಕ ವರ್ಷಗಳಿಂದ ಗ್ರಾಮಸ್ಥರು ಮನವಿ ಮಾಡುತ್ತಿದ್ದಾರೆ ಎಂಬ ಸತ್ಯ ನಮಗೂ ತಿಳಿದಿದೆ. ಕಳೆದ ಮೂರು ವರ್ಷಗಳಿಂದ ಒಂದಷ್ಟು ಅನುದಾನ ಕಲ್ಪಿಸಿ ರಸ್ತೆ ಕಾಂಕ್ರೀಟಿಕರಣ ಮಾಡಲಾಗಿದೆ. ಈಗ ಸಚಿವ ಪ್ರಿಯಾಂಕ ಖರ್ಗೆ ಅವರು ಆರ್‍ಡಿಪಿಆರ್ ಯೋಜನೆಯಲ್ಲಿ ಅನುದಾನ ಕಲ್ಪಿಸಿ ನಮಗೆ ಸಹಾಯ ಮಾಡಿ ಗ್ರಾಮಸ್ಥರ ಬೇಡಿಕೆ ಈಡೇರಿಸಿದ್ದಾರೆ ಎಂದು ಹೇಳಿದರು. ಹೊನ್ನಮ್ಮನ ಕೆರೆ ಜಾತ್ರೋತ್ಸವ ಪ್ರಾರಂಭಕ್ಕೂ ಮೊದಲೇ ಕಾಮಗಾರಿ ಮುಗಿಸುವಂತೆ ಇಂಜಿನಿಯರ್ ಅವರಿಗೆ ಸೂಚಿಸಲಾಗಿದೆ ಎಂದು ತಿಳಿಸಿದರು. ಹೊನವಳ್ಳಿ-ಸುಳಿಮಳ್ತೆ ಗ್ರಾಮಾಭಿವೃದ್ಧಿ ಮಂಡಳಿ ಅಧ್ಯಕ್ಷ ಶ್ರೀಧರ್, ಕಾರ್ಯದರ್ಶಿ ಪುಟ್ಟಸ್ವಾಮಿ, ದೊಡ್ಡಮಳ್ತೆ ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ ದಿವಾಕರ್, ಗ್ರಾಮಸ್ಥರರಾದ ಎಂ.ಪಿ.ರವಿ, ಪುಟ್ಟರಾಜು, ವಿರೇಶ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಬಿ.ಬಿ.ಸತೀಶ್, ವಲಯ ಅಧ್ಯಕ್ಷ ಎಂ.ಬಿ.ವಸಂತ್ ಮತ್ತಿತರರು ಇದ್ದರು. ಸಬ್ಬನಕೊಪ್ಪ ಗ್ರಾಮದಲ್ಲಿ 5 ಲಕ್ಷ ರೂ, ವೆಚ್ಚದ ರಸ್ತೆ ಕಾಮಗಾರಿಗೂ ಪೂಜೆ ಸಲ್ಲಿಸಿದರು. ತಾಲೂಕು ಪಂಚಾಯಿತಿ ಮಾಜಿ ಸದಸ್ಯ ಎಚ್.ಆರ್.ಸುರೇಶ್, ದೊಡ್ಡಮಳ್ತೆ ಗ್ರಾಮ ಪಂಚಾಯಿತಿ ಮಾಜಿ ಸದಸ್ಯ ಶಿವಣ್ಣಯ್ಯ, ಪ್ರಮುಖರಾದ ಎಸ್.ಎ.ಸುರೇಶ್ ಮತ್ತಿತರರು ಇದ್ದರು. ಕೂಗೇಕೋಡಿ ಗ್ರಾಮದಲ್ಲಿ ರಸ್ತೆ ಮತ್ತು ಸೇತುವೆ ನಿರ್ಮಾಣಕ್ಕೆ ಗ್ರಾಮಸ್ಥರು ಮನವಿ ಪತ್ರ ಸಲ್ಲಿಸಿದರು. ರಸ್ತೆಗೆ ಅನುದಾನ ಕಲ್ಪಿಸುವ ಬಗ್ಗೆ ಶಾಸಕರು ಭರವಸೆ ನೀಡಿದರು. ದೊಡ್ಡಮಳ್ತೆ ಗ್ರಾಮಕ್ಕೆ ಭೇಟಿ ನೀಡಿದ ಶಾಸಕರು ಗ್ರಾಮಸ್ಥರ ಆಹವಾಲು ವಿಚಾರಿಸಿದರು.








