
ಮಡಿಕೇರಿ ಜು.3 NEWS DESK : ಕಾವೇರಿ ಜಲಾನಯನ ಪ್ರದೇಶಗಳಲ್ಲಿ ಕಳೆದ ಮೂರು ದಿನಗಳಿಂದ ಸುರಿಯುತ್ತಿರುವ ಮಳೆಯ ಹಿನ್ನೆಲೆಯಲ್ಲಿ ಕುಶಾಲನಗರ ವ್ಯಾಪ್ತಿಯಲ್ಲಿ ಹರಿಯುತ್ತಿರುವ ಕಾವೇರಿ ನದಿ ನೀರಿನ ಹರಿವಿನ ಮಟ್ಟ ಏರಿಕೆಯಾಗಿದೆ. ಕುಶಾಲನಗರ ಕೊಪ್ಪ ಗಡಿಭಾಗದ ಕಾವೇರಿ ಸೇತುವೆಯ ಕೆಳಭಾಗದಲ್ಲಿ ಶುಕ್ರವಾರ ಸಂಜೆ ವೇಳೆಗೆ ಸುಮಾರು ಐದು ಅಡಿಗಳಷ್ಟು ಏರಿಕೆ ಗೋಚರಿಸಿದೆ. ಭಾಗಮಂಡಲ ತಲಕಾವೇರಿ ವ್ಯಾಪ್ತಿಯಲ್ಲಿ ಗುರುವಾರ 33.2 ಮಿಲಿ ಮೀಟರ್ ಪ್ರಮಾಣದ ಮಳೆಯಾದ ಬಗ್ಗೆ ವರದಿಯಾಗಿದೆ. ಕಳೆದ ಬಾರಿ ಇದೇ ಅವಧಿಯಲ್ಲಿ ಕುಶಾಲನಗರ ಕಾವೇರಿ ಸೇತುವೆ ಕೆಳಭಾಗ 23 ಅಡಿಗಳಷ್ಟು ಎತ್ತರದಲ್ಲಿ ನೀರು ಹರಿಯುವುದರೊಂದಿಗೆ ನದಿ ತಟದ ವ್ಯಾಪ್ತಿಯ ನಾಗರಿಕರು ಆತಂಕಕ್ಕೆ ಒಳಗಾಗಿದ್ದ ಪರಿಸ್ಥಿತಿ ಎದುರಾಗಿದ್ದನ್ನು ಸ್ಮರಿಸಬಹುದು. ಕುಶಾಲನಗರ ತಾಲೂಕಿನ ವ್ಯಾಪ್ತಿಯಲ್ಲಿ ಸರಾಸರಿ ಈ ಸಾಲಿನಲ್ಲಿ ಇದುವರೆಗೆ ಒಟ್ಟು 205.69 ಮಿಲಿ ಮೀಟರ್ ಪ್ರಮಾಣದ ಮಳೆ ಸುರಿದಿದೆ. ಕಳೆದ ವರ್ಷ ಇದೇ ಅವಧಿಯಲ್ಲಿ 796.54 ಮಿಲಿ ಮೀಟರ್ ಪ್ರಮಾಣದ ಮಳೆ ಆಗಿತ್ತು.









