
ಸೋಮವಾರಪೇಟೆ ಜು.10 NEWS DESK : ರೋಟರಿ ಸಂಸ್ಥೆ ಸೇವೆ, ನಾಯಕತ್ವ ಹಾಗೂ ಮಾನವೀಯ ಮೌಲ್ಯಗಳಿಗೆ ಬದ್ಧವಾಗಿರುವ ಅಂತರರಾಷ್ಟ್ರೀಯ ಸ್ವಯಂಸೇವಾ ಸಂಘಟನೆಯಾಗಿದೆ ಎಂದು ರೋಟರಿ ಸಂಸ್ಥೆಯ ಮಾಜಿ ಜಿಲ್ಲಾ ಪ್ರಾಂತಪಾಲ ಅಭಿನಂದನ್ ಶೆಟ್ಟಿ ಹೇಳಿದರು. ಪಟ್ಟಣದ ಜಾನಕಿ ಕನ್ವೆನ್ಷನ್ ಹಾಲ್‍ನಲ್ಲಿ ನಡೆದ ರೋಟರಿ ಹಿಲ್ಸ್ ಸೋಮವಾರಪೇಟೆ 2026–27ನೇ ಸಾಲಿನ ನೂತನ ಅಧ್ಯಕ್ಷರು ಹಾಗೂ ಪದಾಧಿಕಾರಿಗಳ ಪದಗ್ರಹಣ ಸಮಾರಂಭವನ್ನು ಉದ್ಘಾಟಿಸಿ ಅವರು ಮಾತನಾಡಿದರು. ರೋಟರಿಯ ವಿಶ್ವವ್ಯಾಪಿ ಸಾಧನೆಗಳಲ್ಲಿ ಪೋಲಿಯೋ ನಿರ್ಮೂಲನಾ ಅಭಿಯಾನ ಪ್ರಮುಖವಾಗಿದ್ದು, ಸಮಾಜಸೇವಾ ಮನೋಭಾವ ಹಾಗೂ ಉತ್ತಮ ವ್ಯಕ್ತಿತ್ವ ಹೊಂದಿರುವ ಯುವಕರು ರೋಟರಿ ಸದಸ್ಯರಾಗಿ ಸೇರ್ಪಡೆಗೊಂಡು ಸಮಾಜಮುಖಿ ಕಾರ್ಯಗಳಲ್ಲಿ ತೊಡಗಿಸಿಕೊಳ್ಳಬೇಕು ಎಂದು ಕರೆ ನೀಡಿದರು. ನಂತರ ಅಭಿನಂದನ್ ಶೆಟ್ಟಿ ನೂತನ ಅಧ್ಯಕ್ಷ ಹಾಗೂ ಪದಾಧಿಕಾರಿಗಳಿಗೆ ಪ್ರತಿಜ್ಞಾವಿಧಿ ಬೋಧಿಸಿದರು. ಜಿಲ್ಲಾ ರೋಟರಿ ಸದಸ್ಯತ್ವ ವಿಸ್ತರಣಾ ಸಮಿತಿ ಅಧ್ಯಕ್ಷ ಎಚ್.ಟಿ. ಅನಿಲ್ ಮಾತನಾಡಿ, ದಾಖಲೆಯ ಸದಸ್ಯತ್ವ ನೋಂದಣಿ ಮಾಡಿದ ಕೀರ್ತಿ ಸೋಮವಾರಪೇಟೆ ರೋಟರಿ ಹಿಲ್ಸ್‍ಗೆ ಸಲ್ಲುತ್ತದೆ. ರೋಟರಿ ಜಿಲ್ಲೆ 3181ರಲ್ಲಿ ಕೇವಲ ಎಂಟು ದಿನಗಳಲ್ಲಿ 180 ಹೊಸ ಸದಸ್ಯರು ಸೇರ್ಪಡೆಯಾಗಿರುವುದು ರೋಟರಿ ಸಂಸ್ಥೆಯ ಮೇಲಿನ ಜನರ ವಿಶ್ವಾಸಕ್ಕೆ ಸಾಕ್ಷಿಯಾಗಿದೆ ಎಂದು ಪ್ರಶಂಸಿಸಿದರು. ಇದೇ ವೇಳೆ ಕ್ಲಬ್‍ಗೆ ಪ್ರಶಂಸಾಪತ್ರ ಪ್ರದಾನ ಮಾಡಲಾಯಿತು. ನಸಿರ್ಂಗ್ ಕ್ಷೇತ್ರದಲ್ಲಿ ಉತ್ತಮ ಸೇವೆ ಸಲ್ಲಿಸುತ್ತಿರುವ ದಾದಿಯರಾದ ಅನಿತಾ ಹಾಗೂ ಬಿ.ಬಿ. ದಿವ್ಯ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು. ವೇದಿಕೆಯಲ್ಲಿ 2025–26ನೇ ಸಾಲಿನ ಅಧ್ಯಕ್ಷೆ ವೀಣಾ ಮನೋಹರ್, ಕಾರ್ಯದರ್ಶಿ ಡಿ.ಪಿ. ರಮೇಶ್, ವಸಂತ್, ಎ.ಎಸ್.ಮಲ್ಲೇಶ್ ಇದ್ದರು.









