
ವಿರಾಜಪೇಟೆ ಜು.14 NEWS DESK : ಮಗ್ಗುಲ ಗ್ರಾಮದ ವಿದ್ಯಾಸಂಸ್ಥೆಯಾದ ಲಿಟಲ್ ಸ್ಕಾಲರ್ಸ್ ಅಕಾಡೆಮಿ ವತಿಯಿಂದ ಹೆಗ್ಗಳ ಗ್ರಾಮದ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯ ವಿದ್ಯಾರ್ಥಿಗಳಿಗೆ ಉಚಿತ ನೋಟ್ ಬುಕ್ ವಿತರಣೆ ಮಾಡಲಾಯಿತು. ಸಂಸ್ಥೆಯು ತನ್ನ ಸಾಮಾಜಿಕ ಚಟುವಟಿಕೆಗಳನ್ನು ವಿಸ್ತರಿಸುವ ಉದ್ದೇಶದಿಂದ ನೂತನವಾಗಿ ಆರಂಭಿಸಿರುವ ‘ಎಲ್ ಎಸ್ ಎ ಕೇರ್’ (LSA Care) ಘಟಕದ ವತಿಯಿಂದ ಈ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಘಟಕದ ಪ್ರಪ್ರಥಮ ಯೋಜನೆಯಾದ ‘ಪೀಪಲ್ ಹೌಸ್ ವಿದ್ಯಾರ್ಥಿ ತಂಡ’ದ ಅಡಿಯಲ್ಲಿ ಹೆಗ್ಗಳದ ಸರ್ಕಾರಿ ಶಾಲಾ ಮಕ್ಕಳಿಗೆ ನೋಟ್ ಪುಸ್ತಕಗಳನ್ನು ವಿತರಿಸಲಾಯಿತು. :: ತಿಂಗಳಿಗೊಂದು ಸಮಾಜಮುಖಿ ಕಾರ್ಯಕ್ರಮ: : ಲಿಟಲ್ ಸ್ಕಾಲರ್ಸ್ ಅಕಾಡೆಮಿಯ ಮುಖ್ಯಸ್ಥೆ ಹಾಗೂ ಸಮಾಜ ಸೇವಕರಾದ ಪೂಜಾ ಸಜೇಶ್ ಅವರು ವಿದ್ಯಾರ್ಥಿಗಳಿಗೆ ನೋಟ್ ಪುಸ್ತಕಗಳನ್ನು ವಿತರಿಸಿ ಮಾತನಾಡಿ, ”ಸಂಸ್ಥೆಯು ‘ಎಲ್ ಎಸ್ ಎ ಕೇರ್’ ಮೂಲಕ ಪ್ರತೀ ತಿಂಗಳು ವೈವಿಧ್ಯಮಯ ಸಮಾಜಮುಖಿ ಕಾರ್ಯಕ್ರಮಗಳನ್ನು ಆಯೋಜಿಸುವ ಗುರಿ ಹೊಂದಿದೆ. ಈ ಹಿಂದೆಯೂ ಹೆಗ್ಗಳ ಗ್ರಾಮದ ಸರ್ಕಾರಿ ಶಾಲೆ ಸೇರಿದಂತೆ ವಿವಿಧೆಡೆ ಸಾಮಾಜಿಕ ಕಾರ್ಯಕ್ರಮಗಳನ್ನು ನಡೆಸಲಾಗಿದ್ದು, ಮುಂದಿನ ದಿನಗಳಲ್ಲೂ ಇದು ಮುಂದುವರಿಯಲಿದೆ. ಗ್ರಾಮೀಣ ಭಾಗದ ವಿದ್ಯಾರ್ಥಿಗಳು ಶೈಕ್ಷಣಿಕವಾಗಿ ಮತ್ತಷ್ಟು ಸಾಧನೆ ಮಾಡಬೇಕು,” ಎಂದು ಅವರು ಶುಭ ಹಾರೈಸಿದರು. ವಿರಾಜಪೇಟೆ ಹಾಗೂ ಕಲ್ತೋಡು ವಲಯದ ಸಿ.ಆರ್.ಪಿ. ಸೈಫುನ್ನಿಸ ಅವರು ಮಾತನಾಡಿ, ಸಂಸ್ಥೆಯ ಈ ಸಾಮಾಜಿಕ ಕಳಕಳಿಯನ್ನು ಶ್ಲಾಘಿಸಿದರು. :: ಜಾಗೃತಿ ಮೂಡಿಸಿದ ವಿದ್ಯಾರ್ಥಿಗಳು ::
ಇದೇ ಸಂದರ್ಭದಲ್ಲಿ ಲಿಟಲ್ ಸ್ಕಾಲರ್ಸ್ ಅಕಾಡೆಮಿಯ ವಿದ್ಯಾರ್ಥಿಗಳು ವಿವಿಧ ಶೈಕ್ಷಣಿಕ ಕಾರ್ಯಕ್ರಮಗಳನ್ನು ನಡೆಸಿಕೊಟ್ಟರು. ಅಲ್ಲದೆ, ಹೆಗ್ಗಳ ಶಾಲೆಯ ವಿದ್ಯಾರ್ಥಿಗಳೊಂದಿಗೆ ಶಿಕ್ಷಣದ ಮಹತ್ವ ಹಾಗೂ ಶಾಲೆಯ ಅಗತ್ಯತೆಗಳ ಕುರಿತು ಸಂವಾದ ನಡೆಸಿ ಜಾಗೃತಿ ಮೂಡಿಸಿದರು. ಕಾರ್ಯಕ್ರಮದಲ್ಲಿ ಹೆಗ್ಗಳ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯ ಮುಖ್ಯ ಶಿಕ್ಷಕಿ ಕಮಲಮ್ಮ, ಸಹ ಶಿಕ್ಷಕಿ ಕಮರುನ್ನಿಸ, ಎಸ್‌ಡಿಎಂಸಿ ಸದಸ್ಯರುಗಳು ಹಾಗೂ ಉಭಯ ಶಾಲೆಗಳ ಶಿಕ್ಷಕ ವೃಂದ ಮತ್ತು ವಿದ್ಯಾರ್ಥಿಗಳು ಹಾಜರಿದ್ದರು.









