
ಗೋಣಿಕೊಪ್ಪ ಜು.25 NEWS DESK : ವಿದ್ಯಾರ್ಥಿಗಳು ಕೈಗೊಂಡ ಪ್ರತಿಭಟನೆಗೆ ಬೆಂಬಲವಾಗಿ ಹಾಗೂ ಕೇಂದ್ರ ಬಿಜೆಪಿ ನಾಯಕತ್ವ ಮತ್ತು ಪೊಲೀಸರು, ವಿದ್ಯಾರ್ಥಿಗಳ ಮೇಲೆ ನಡೆಸಿದ ದೌರ್ಜನ್ಯದ ವಿರುದ್ದ ಗೋಣಿಕೊಪ್ಪದಲ್ಲಿ ಪೊನ್ನಂಪೇಟೆ ಬ್ಲಾಕ್ ಕಾಂಗ್ರೆಸ್ ಬೃಹತ್ ಪ್ರತಿಭಟನೆ ನಡೆಸಿತು. ಪೊನ್ನಂಪೇಟೆ ಬ್ಲಾಕ್ ಕಾಂಗ್ರೆಸ್, ಪ್ರಚಾರ ಸಮಿತಿ, ಯುವ ಕಾಂಗ್ರೆಸ್ ಹಾಗೂ ವಿವಿಧ ಪೋಷಕ ಘಟಕಗಳ ಜಂಟಿ ಸಹಯೋಗದಲ್ಲಿ ನಡೆದ ಪ್ರತಿಭಟನೆಯಲ್ಲಿ ಕಾಂಗ್ರೆಸ್ ಕಾರ್ಯಕರ್ತರು ಪಾಲ್ಗೊಂಡು ಕೇಂದ್ರ ಸರ್ಕಾರದ ವಿರುದ್ಧ ಘೋಷಣೆಗಳನ್ನು ಕೂಗಿದರು. ಈ ಸಂದರ್ಭ ಮಾತನಾಡಿದ ವಿರಾಜಪೇಟೆ ವಿಧಾನಸಭಾ ಕ್ಷೇತ್ರದ ಶಾಸಕ ಎ.ಎಸ್.ಪೊನ್ನಣ್ಣ ಅವರು, ಕೇಂದ್ರ ಸರ್ಕಾರವು ಸರ್ವಾಧಿಕಾರಿ ಧೋರಣೆ ತಳೆಯುತ್ತಿರುವುದು ಖಂಡನೀಯ. ತಮ್ಮ ಹಕ್ಕುಗಳಿಗಾಗಿ ಶಾಂತಿಯುತವಾಗಿ ಹೋರಾಡುತ್ತಿದ್ದ ವಿದ್ಯಾರ್ಥಿಗಳನ್ನು ‘ಉಗ್ರಗಾಮಿಗಳು’ ಎಂದು ಹೇಳಿರುವುದು ಪ್ರಜಾಪ್ರಭುತ್ವಕ್ಕೆ ಬಂದೊದಗಿದ ದೊಡ್ಡ ದುರಂತ,” ಎಂದು ಕಿಡಿಕಾರಿದರು. ದೇಶದ ಭವಿಷ್ಯವಾಗಿರುವ ವಿದ್ಯಾರ್ಥಿಗಳಿಗೆ ಕೇಂದ್ರ ಸರ್ಕಾರ ಎಸಗಿರುವ ಈ ಅನ್ಯಾಯ ಇನ್ನೊಂದಿಲ್ಲ ಎಂದರು. ಕಾಂಗ್ರೆಸ್ ಜಿಲ್ಲಾಧ್ಯಕ್ಷರಾದ ತಿತೀರ ಧರ್ಮಜ ಉತ್ತಪ್ಪ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಮಿದೇರಿರ ನವೀನ್, ಬ್ಲಾಕ್ ಮಹಿಳಾ ಅಧ್ಯಕ್ಷರಾದ ಆಶಾ, ತಾಲೂಕು ಪ್ರಚಾರ ಸಮಿತಿ ಅಧ್ಯಕ್ಷರಾದ ಟಾಟು ಮೊಣಪ್ಪ ಹಾಗೂ ಪಕ್ಷದ ಜಿಲ್ಲಾ, ಬೂತ್, ಸಾಮಾಜಿಕ ಜಾಲತಾಣ, ಅಲ್ಪಸಂಖ್ಯಾತ, ಎಸ್‌ಟಿ, ಓಬಿಸಿ ಹಾಗೂ ಯೂತ್ ಕಾಂಗ್ರೆಸ್ ಘಟಕಗಳ ಅಧ್ಯಕ್ಷರು, ಪದಾಧಿಕಾರಿಗಳು ಮತ್ತು ಕಾರ್ಯಕರ್ತರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.









