
ಮಡಿಕೇರಿ NEWS DESK ಆ.10 : ಮಡಿಕೇರಿ ನಗರದಲ್ಲಿ ನಿರ್ಮಾಣ ಹಂತದಲ್ಲಿರುವ ಗಾಂಧಿ ಸ್ಮಾರಕದ ಕಾಮಗಾರಿಯನ್ನು ಶೀಘ್ರ ಪೂರ್ಣಗೊಳಿಸುವಂತೆ ಸಂಬಂಧಿಸಿದ ಇಲಾಖೆಗೆ ನಿರ್ದೇಶನ ನೀಡಬೇಕೆಂದು ಕೊಡಗು ಜಿಲ್ಲಾ ಸರ್ವೋದಯ ಸಮಿತಿ ಜಿಲ್ಲಾಡಳಿತವನ್ನು ಒತ್ತಾಯಿಸಿದೆ. ಸರ್ವೋದಯ ಸಮಿತಿಯ ಜಿಲ್ಲಾಧ್ಯಕ್ಷ ಅಂಬೆಕಲ್ ಕುಶಾಲಪ್ಪ ಅವರ ನೇತೃತ್ವದ ನಿಯೋಗ ಇಂದು ಜಿಲ್ಲಾಧಿಕಾರಿ ಎಸ್.ಜೆ.ಸೋಮಶೇಖರ್ ಅವರನ್ನು ಭೇಟಿ ಮಾಡಿ ಗಾಂಧಿ ಸ್ಮಾರಕಕ್ಕೆ ಸಂಬಂಧಿಸಿದಂತೆ ಮನವಿ ಪತ್ರ ಸಲ್ಲಿಸಿತು. ಜಿಲ್ಲಾ ಖಜಾನೆಯಲ್ಲಿರುವ ಗಾಂಧಿ ಚಿತಾಭಸ್ಮವನ್ನು ರಾಜ್‌ಘಾಟ್ ನಂತೆ ಸ್ಮಾರಕ ನಿರ್ಮಿಸಿ ಶಾಶ್ವತವಾಗಿಟ್ಟು ಗೌರವಿಸುವ ಉದ್ದೇಶದಿಂದ ಗಾಂಧಿ ಸ್ಮಾರಕ ನಿರ್ಮಾಣದ ಯೋಜನೆಯನ್ನು ಕೈಗೆತ್ತಿಕೊಳ್ಳಲಾಗಿದೆ. ರಾಜ್ಯದಲ್ಲಿ ಬಿ.ಎಸ್.ಯಡಿಯೂರಪ್ಪ ಅವರ ಸರಕಾರವಿದ್ದಾಗ ಅಂದು ವಿಧಾನಸಭಾ ಅಧ್ಯಕ್ಷರಾಗಿದ್ದ ಕೆ.ಜಿ.ಬೋಪಯ್ಯ ಅವರು ಸರ್ವೋದಯ ಸಮಿತಿಯ ಮನವಿಗೆ ಸ್ಪಂದಿಸಿ ರೂ.50 ಲಕ್ಷ ಮಂಜೂರು ಮಾಡಿದ್ದರು. ಈ ಅನುದಾನದ ಮೂಲಕ ನಿರ್ಮಿತಿ ಕೇಂದ್ರದವರು ಸ್ಮಾರಕ ನಿರ್ಮಾಣ ಕಾರ್ಯ ಆರಂಭಿಸಿದರು. ಆದರೆ ಪ್ರಸ್ತುತ ಮುಂದುವರೆದ ಕಾಮಗಾರಿಗೆ ಅನುದಾನದ ಕೊರತೆಯಾಗಿದೆ. ಮಡಿಕೇರಿ ಕ್ಷೇತ್ರದ ಶಾಸಕ ಡಾ.ಮಂತರ್ ಗೌಡ ಅವರು ತಮ್ಮ ನಿಧಿಯಿಂದ ರೂ.25 ಲಕ್ಷವನ್ನು ಕೆ.ಆರ್.ಇ.ಡಿ.ಎಲ್ ಗೆ ನೀಡಿದ್ದಾರೆ. ಆದ್ದರಿಂದ ಉಳಿದಿರುವ ಕಾಮಗಾರಿಗಳನ್ನು ಶೀಘ್ರ ಪೂರ್ಣಗೊಳಿಸಲು ಸಂಬಂಧಿಸಿದ ಇಲಾಖೆಗೆ ಜಿಲ್ಲಾಧಿಕಾರಿಗಳು ನಿರ್ದೇಶನ ನೀಡಬೇಕೆಂದು ನಿಯೋಗ ಮನವಿ ಮಾಡಿತು. ಸರ್ವೋದಯ ಸಮಿತಿಯ ನಿಕಟಪೂರ್ವ ಅಧ್ಯಕ್ಷ ಟಿ.ಪಿ.ರಮೇಶ್, ಪದಾಧಿಕಾರಿಗಳಾದ ಟಿ.ಎಂ.ಮುದ್ದಯ್ಯ, ಕೆ.ಟಿ.ಬೇಬಿ ಮ್ಯಾಥ್ಯು, ಅಂಬೆಕಲ್ ನವೀನ್ ಹಾಗೂ ಪುದಿಯನೆರವನ ರೇವತಿ ರಮೇಶ್ ನಿಯೋಗದಲ್ಲಿದ್ದರು. ಈ ಸಂದರ್ಭ ಜಿಲ್ಲಾಧಿಕಾರಿಗಳ ಕಾನೂನು ಸಲಹೆಗಾರ ಎ.ಲೋಕೇಶ್ ಕುಮಾರ್ ಅವರು ಉಪಸ್ಥಿತರಿದ್ದರು.









