
ಮಡಿಕೇರಿ, ಆ.17 NEWS DESK : ದೇಶದ 80ನೇ ಸ್ವಾತಂತ್ರ್ಯೋತ್ಸವದ ಅಂಗವಾಗಿ ಲಯನ್ಸ್ ಸಂಸ್ಥೆ ಮಡಿಕೇರಿ ವತಿಯಿಂದ ನಗರದ ಸ್ವಚ್ಛತೆ ಹಾಗೂ ಸಾರ್ವಜನಿಕ ಆರೋಗ್ಯ ಕಾಪಾಡುವಲ್ಲಿ ನಿರಂತರವಾಗಿ ಸೇವೆ ಸಲ್ಲಿಸುತ್ತಿರುವ ಐವರು ಪೌರಕಾರ್ಮಿಕರನ್ನು ಗುರುತಿಸಿ ಗೌರವಿಸಲಾಯಿತು.
ಕಾರ್ಯಕ್ರಮದಲ್ಲಿ ಕೊಡಗು ವೈದ್ಯಕೀಯ ವಿಜ್ಞಾನ ಸಂಸ್ಥೆಯ ಡೀನ್ ಹಾಗೂ ನಿರ್ದೇಶಕ ಡಾ. ಲೋಕೇಶ್ ಹಾಗೂ ಕರ್ನಾಟಕ ಸರ್ಕಾರದ ಗ್ಯಾರೆಂಟಿ ಯೋಜನೆಗಳ ಅನುಷ್ಠಾನ ಸಮಿತಿಯ ಉಪಾಧ್ಯಕ್ಷ ಎಸ್.ಆರ್. ಮೆಹರೋಜ್ ಖಾನ್ ಅವರು ಪೌರಕಾರ್ಮಿಕರನ್ನು ಗೌರವಿಸಿದರು.
ಐವರು ಪೌರಕಾರ್ಮಿಕರಿಗೆ ಪ್ರಶಂಸನಾ ಪತ್ರ ನೀಡಿ, ಶಾಲು ಹೊದಿಸಿ ಸನ್ಮಾನಿಸಲಾಯಿತು. ಜೊತೆಗೆ ಪ್ರತಿಯೊಬ್ಬರಿಗೂ ತಲಾ ₹2,000 ನಗದು ಪ್ರೋತ್ಸಾಹಧನ ನೀಡಿ ಅವರ ನಿಸ್ವಾರ್ಥ ಸೇವೆಯನ್ನು ಗೌರವಿಸಲಾಯಿತು. ಮಳೆ, ಬಿಸಿಲು ಸೇರಿದಂತೆ ಪ್ರತಿಕೂಲ ಹವಾಮಾನದಲ್ಲಿಯೂ ಕರ್ತವ್ಯ ನಿರ್ವಹಿಸಿ ನಗರದ ಸ್ವಚ್ಛತೆ ಹಾಗೂ ಸೌಂದರ್ಯ ಕಾಪಾಡುವಲ್ಲಿ ಪೌರಕಾರ್ಮಿಕರ ಸೇವೆ ಶ್ಲಾಘನೀಯವಾಗಿದೆ. ಸಾರ್ವಜನಿಕ ಆರೋಗ್ಯ ಮತ್ತು ಸ್ವಚ್ಛತೆಯ ಹಿಂದೆ ಅವರ ಪರಿಶ್ರಮ ಮಹತ್ವದ ಪಾತ್ರ ವಹಿಸುತ್ತಿದ್ದು, ಸ್ವಾತಂತ್ರ್ಯೋತ್ಸವದ ಸಂದರ್ಭದಲ್ಲಿ ಅವರ ಸೇವೆಯನ್ನು ಗುರುತಿಸಿ ಗೌರವಿಸಿರುವುದು ಅರ್ಥಪೂರ್ಣವಾಗಿದೆ ಎಂದು ಗಣ್ಯರು ಮೆಚ್ಚುಗೆ ವ್ಯಕ್ತಪಡಿಸಿದರು. ಕಾರ್ಯಕ್ರಮದಲ್ಲಿ ಲಯನ್ಸ್ ಸಂಸ್ಥೆ ಮಡಿಕೇರಿ ಅಧ್ಯಕ್ಷ ಲಯನ್ ಮೋಹನ್ ಕುಮಾರ್ ಎಲ್., ಕಾರ್ಯದರ್ಶಿ ಲಯನ್ ಮಧುಕರ್ ಕೆ., ಖಜಾಂಚಿ ಲಯನ್ ನವೀನ್ ಅಂಬೇಕಲ್, ವಲಯ ಅಧ್ಯಕ್ಷರಾದ ಲಯನ್ ಮದನ್ ಮಾದಯ್ಯ ಸೇರಿದಂತೆ ಸಂಸ್ಥೆಯ ಪದಾಧಿಕಾರಿಗಳು, ಸದಸ್ಯರು ಹಾಗೂ ಗಣ್ಯರು ಉಪಸ್ಥಿತರಿದ್ದರು.









