
ಮಡಿಕೇರಿ NEWS DESK ಆ.29 : ಶಿವಮೊಗ್ಗ ಜಿಲ್ಲೆಯ ಶಿಕಾರಿಪುರದಲ್ಲಿ ಜಾನುವಾರುಗಳ ರಕ್ಷಣೆಗಾಗಿ ತೆರಳಿದ್ದ ಬಜರಂಗದಳದ ಕಾರ್ಯಕರ್ತರ ಮೇಲೆ ನಡೆದ ಮಾರಣಾಂತಿಕ ಹಲ್ಲೆಯನ್ನು ತೀವ್ರವಾಗಿ ಖಂಡಿಸಿರುವ ವಿಶ್ವ ಹಿಂದೂ ಪರಿಷತ್ ಹಾಗೂ ಬಜರಂಗದಳದ ಕೊಡಗು ಜಿಲ್ಲಾ ಘಟಕದ ಪ್ರಮುಖರು ಕಠಿಣ ಕಾನೂನು ಕ್ರಮಕ್ಕಾಗಿ ಆಗ್ರಹಿಸಿ ಜಿಲ್ಲಾಧಿಕಾರಿಗಳ ಮೂಲಕ ಸರಕಾರಕ್ಕೆ ಮನವಿ ಪತ್ರ ಸಲ್ಲಿಸಿದರು. ಶಿಕಾರಿಪುರದಲ್ಲಿ ಅಕ್ರಮವಾಗಿ ಜಾನುವಾರುಗಳನ್ನು ಸಾಗಿಸುತ್ತಿದ್ದ ವಾಹನವನ್ನು ತಡೆದು ಗೋವುಗಳನ್ನು ರಕ್ಷಿಸಲು ಮುಂದಾದ ಗೋರಕ್ಷಕರ ಮೇಲೆ ಮಾರಕಾಸ್ತ್ರಗಳಿಂದ ದಾಳಿ ನಡೆಸಲಾಗಿದೆ. ಘಟನೆಯಲ್ಲಿ ಕಾರ್ಯಕರ್ತರು ಗಾಯಗೊಂಡಿದ್ದಾರೆ, ವಾಹನಗಳಿಗೆ ಹಾನಿ ಮಾಡಲಾಗಿದೆ. ಇದು ಆತಂಕಕಾರಿ ಬೆಳವಣಿಗೆಯಾಗಿದೆ ಎಂದು ಮನವಿಯಲ್ಲಿ ತಿಳಿಸಲಾಗಿದೆ. ಗೋರಕ್ಷಕರ ಮೇಲೆ ದಾಳಿ ನಡೆಸಿದ ಎಲ್ಲಾ ಆರೋಪಿಗಳನ್ನು ಹಾಗೂ ಘಟನೆಯ ಹಿಂದಿರುವ ಸಂಚುಕೋರರನ್ನು ತಕ್ಷಣ ಬಂಧಿಸಿ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕು. ಕರ್ನಾಟಕ ಜಾನುವಾರು ಹತ್ಯೆ ಪ್ರತಿಬಂಧಕ ಮತ್ತು ಸಂರಕ್ಷಣಾ ಕಾಯಿದೆ-2020ರ ಪರಿಣಾಮಕಾರಿ ಅನುಷ್ಠಾನಕ್ಕೆ ಕ್ರಮ ಕೈಗೊಳ್ಳಬೇಕು. ರಾಜ್ಯಾದ್ಯಂತ ನಡೆಯುತ್ತಿರುವ ಅಕ್ರಮ ಗೋಸಾಗಾಟ, ಅಕ್ರಮ ಕಸಾಯಿಖಾನೆಗಳು ಹಾಗೂ ಪರವಾನಗಿ ಇಲ್ಲದ ಮಾಂಸದ ಅಂಗಡಿಗಳ ವಿರುದ್ಧ ತಕ್ಷಣ ಕಾರ್ಯಾಚರಣೆ ನಡೆಸಿ ಬಂದ್ ಮಾಡಿಸಬೇಕು. ಅಕ್ರಮ ಗೋಸಾಗಾಟ ತಡೆಗಟ್ಟಲು ಜಿಲ್ಲೆಗಳು ಹಾಗೂ ಗಡಿಭಾಗಗಳಲ್ಲಿ ರಾತ್ರಿ ಗಸ್ತು ಹೆಚ್ಚಿಸುವುದು ಮತ್ತು ವಿಶೇಷ ತಪಾಸಣಾ ಕೇಂದ್ರಗಳನ್ನು ಸ್ಥಾಪಿಸುವ ಮೂಲಕ ಅಕ್ರಮ ಸಾಗಾಟ ಜಾಲದ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕೆಂದು ಪ್ರಮುಖರು ಮನವಿ ಪತ್ರದ ಮೂಲಕ ಒತ್ತಾಯಿಸಿದ್ದಾರೆ.
ಮನವಿ ಸಲ್ಲಿಸುವ ಸಂದರ್ಭ ವಿಶ್ವ ಹಿಂದೂ ಪರಿಷತ್–ಬಜರಂಗದಳದ ಜಿಲ್ಲಾ ಸಹ ಸಂಯೋಜಕ ದುರ್ಗೇಶ್ ಭಜರಂಗಿ, ತಾಲ್ಲೂಕು ಸಹ ಸಂಯೋಜಕ ಮುಕುಂದ್, ತಾಲ್ಲೂಕು ಗೋ ರಕ್ಷಾ ಪ್ರಮುಖ್ ರಾಜೇಶ್ ಮಣಿ, ನಗರ ಸಹ ಸಂಯೋಜಕ ಅಜಿತ್ ಶೆಟ್ಟಿ ಸೇರಿದಂತೆ ಬಜರಂಗದಳದ ಕಾರ್ಯಕರ್ತರಾದ ಮಣಿ, ಕೇಶವ, ರಂಜಿತ್, ವಿನೋದ್, ಗಣೇಶ್ ಹಾಗೂ ಹರ್ಷಿತ್ ಹಾಜರಿದ್ದರು.









