
ಮಡಿಕೇರಿ NEWS DESK ಸೆ.18 : ಹೊರ ಜಿಲ್ಲೆಗಳ ಕೆಲವು ವ್ಯಕ್ತಿಗಳು ಸಾಮಾಜಿಕ ಜಾಲತಾಣಗಳ ಮೂಲಕ “ವಾರಾಂತ್ಯದ ಪಾರ್ಟಿ” ಆಯೋಜಿಸುವುದಾಗಿ ನಂಬಿಸಿ ಸಾರ್ವಜನಿಕರಿಂದ ಹಣ ವಸೂಲಿ ಮಾಡುತ್ತಿರುವುದು ಕಂಡುಬಂದಿದ್ದು, ಇಂತಹ ಆಮಿಷಗಳಿಗೆ ಒಳಗಾಗದಂತೆ ಕೊಡಗು ಜಿಲ್ಲಾ ಪೊಲೀಸರು ಸಾರ್ವಜನಿಕರಿಗೆ ಎಚ್ಚರಿಕೆ ನೀಡಿದ್ದಾರೆ. “ದಿ ಕೂರ್ಗ್ ರೇವ್” ಸೇರಿದಂತೆ ಸೆಪ್ಟೆಂಬರ್ 25ರಿಂದ 27ರವರೆಗೆ ಕೊಡಗಿನಲ್ಲಿ ಮೂರು ದಿನಗಳ ಫಾರೆಸ್ಟ್ ರೇವ್, ಅರಣ್ಯ ಪ್ರದೇಶದಲ್ಲಿ ಕ್ಯಾಂಪಿಂಗ್ ಮತ್ತಿತರ ಚಟುವಟಿಕೆಗಳನ್ನು ಆಯೋಜಿಸುವುದಾಗಿ ಸಾಮಾಜಿಕ ಜಾಲತಾಣಗಳಲ್ಲಿ ಪ್ರಚಾರ ಮಾಡುತ್ತಿರುವುದು ಪೊಲೀಸ್ ಇಲಾಖೆಯ ಗಮನಕ್ಕೆ ಬಂದಿದೆ. ಇಂತಹ ಪಾರ್ಟಿಗಳ ಹೆಸರಿನಲ್ಲಿ ಹಣ ವಸೂಲಿ ಮಾಡುವ ವಂಚನೆ ಹಾಗೂ ಮಾದಕ ದ್ರವ್ಯಗಳ ಬಳಕೆಗೆ ಸಂಬಂಧಿಸಿದ ಜಾಲ ಇರಬಹುದಾದ ಹಿನ್ನೆಲೆಯಲ್ಲಿ ಸಾರ್ವಜನಿಕರು ತೀವ್ರ ಎಚ್ಚರಿಕೆ ವಹಿಸುವಂತೆ ಪೊಲೀಸರು ಸೂಚಿಸಿದ್ದಾರೆ. ಅಪರಿಚಿತ ವ್ಯಕ್ತಿಗಳು ಸಾಮಾಜಿಕ ಜಾಲತಾಣಗಳಲ್ಲಿ ನೀಡುವ ಆಕರ್ಷಕ ಆಮಿಷಗಳಿಗೆ ಒಳಗಾಗಬಾರದು. ಮಾದಕ ದ್ರವ್ಯಗಳ ಬಳಕೆಗೆ ಸಂಬಂಧಿಸಿದ ಯಾವುದೇ ಜಾಲದಿಂದ ದೂರವಿರಬೇಕು. ಇಂತಹ ಅನುಮಾನಾಸ್ಪದ ಪಾರ್ಟಿ ಅಥವಾ ಕಾರ್ಯಕ್ರಮಗಳ ಸಂದೇಶಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಳ್ಳಬಾರದು ಎಂದು ಕೊಡಗು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಆರ್.ಎನ್.ಬಿಂದುಮಣಿ ಮನವಿ ಮಾಡಿದ್ದಾರೆ. ಸಾರ್ವಜನಿಕರು ಯಾವುದೇ ಅನುಮಾನಾಸ್ಪದ ಚಟುವಟಿಕೆಗಳು ಕಂಡುಬಂದಲ್ಲಿ ಪೊಲೀಸರ ಗಮನಕ್ಕೆ ತರುವಂತೆ ತಿಳಿಸಿದ್ದಾರೆ.








