

ಮಡಿಕೇರಿ NEWS DESK ಸೆ.30 : ಕುಶಾಲನಗರ ಟ್ರಾಫಿಕ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಆರ್.ಸಿ. ನಿಯಮಗಳನ್ನು ಉಲ್ಲಂಘಿಸಿ ಸಾರ್ವಜನಿಕ ರಸ್ತೆಯಲ್ಲಿ ನಿರ್ಲಕ್ಷ್ಯದಿಂದ ಚಾಲನೆ ಮಾಡಿ ನಿಗದಿತ ಎತ್ತರ ಮತ್ತು ಉದ್ದಳತೆಯನ್ನು ಮೀರಿ ಅಕ್ರಮವಾಗಿ ಮರದ ದಿಮ್ಮಿಗಳನ್ನು ಸಾಗಿಸುತ್ತಿದ್ದ ಐದು ಲಾರಿಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.
ಲಾರಿಗಳ ವಿರುದ್ಧ ನಿಯಮಾನುಸಾರ ಪ್ರಾದೇಶಿಕ ಸಾರಿಗೆ ಕಚೇರಿ ಮೂಲಕ ಕ್ರಮ ಕೈಗೊಳ್ಳಲಾಗಿದ್ದು, ಒಟ್ಟು ರೂ.2,97,000 ದಂಡ ವಿಧಿಸಲಾಗಿದೆ ಎಂದು ಕೊಡಗು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಆರ್.ಎನ್.ಬಿಂದುಮಣಿ ತಿಳಿಸಿದ್ದಾರೆ.
ಸಾರ್ವಜನಿಕ ರಸ್ತೆಯಲ್ಲಿ ಸಂಚಾರ ನಿಯಮಗಳನ್ನು ಉಲ್ಲಂಘಿಸಿ ವಾಹನಗಳನ್ನು ಚಾಲನೆ ಮಾಡುವ ಹಾಗೂ ನಿಗದಿತ ಮಿತಿಯನ್ನು ಮೀರಿ ಸರಕು ಸಾಗಣೆ ಮಾಡುವ ವಾಹನಗಳ ವಿರುದ್ಧ ನಿಯಮಾನುಸಾರ ಕ್ರಮ ಮುಂದುವರಿಸಲಾಗುವುದು ಎಂದು ಅವರು ಎಚ್ಚರಿಕೆ ನೀಡಿದ್ದಾರೆ.








