ಮಡಿಕೇರಿ, NEWS DESK ಅ.8: ಮಡಿಕೇರಿ ದಸರಾ ಮಹೋತ್ಸವದ ಪ್ರಯುಕ್ತ ಕೆಎಸ್‌ಆರ್‌ಟಿಸಿ ವತಿಯಿಂದ ಇದೇ ಮೊದಲ ಬಾರಿಗೆ ಕೊಡಗು ಜಿಲ್ಲೆಯ ಪ್ರಮುಖ ಪ್ರವಾಸಿ ಹಾಗೂ ಧಾರ್ಮಿಕ ತಾಣಗಳನ್ನು ಒಳಗೊಂಡ ಒಂದು ದಿನದ ವಿಶೇಷ ಪ್ಯಾಕೇಜ್ ಟೂರ್ ಆಯೋಜಿಸಲಾಗಿದೆ.
ಅಕ್ಟೋಬರ್ 11ರಿಂದ 26ರವರೆಗೆ ಈ ವಿಶೇಷ ಪ್ರವಾಸ ಸೇವೆ ಲಭ್ಯವಿರಲಿದ್ದು, ಮಡಿಕೇರಿ ಬಸ್ ನಿಲ್ದಾಣದಿಂದ ಪ್ರತಿದಿನ ಬೆಳಿಗ್ಗೆ 6.30ಕ್ಕೆ ಬಸ್ ಹೊರಟು ರಾತ್ರಿ 7.30ಕ್ಕೆ ಮಡಿಕೇರಿಗೆ ವಾಪಸಾಗಲಿದೆ.
ಕಾವೇರಿ ದರ್ಶನ
‘ಕಾವೇರಿ ದರ್ಶನ’ ಪ್ಯಾಕೇಜ್‌ನಲ್ಲಿ ಓಂಕಾರೇಶ್ವರ ದೇವಸ್ಥಾನ, ಇಗ್ಗುತಪ್ಪ ದೇವಸ್ಥಾನ, ಭಾಗಮಂಡಲ ದೇವಸ್ಥಾನ, ತಲಕಾವೇರಿ ದೇವಸ್ಥಾನ, ಅಬ್ಬಿ ಜಲಪಾತ ಹಾಗೂ ರಾಜಾಸೀಟು ಸೇರಿದಂತೆ ಪ್ರಮುಖ ಪ್ರವಾಸಿ ಹಾಗೂ ಧಾರ್ಮಿಕ ಸ್ಥಳಗಳಿಗೆ ಭೇಟಿ ನೀಡಲು ಅವಕಾಶ ಕಲ್ಪಿಸಲಾಗಿದೆ.
ಕೊಡಗಿನ ಸೊಬಗು
‘ಕೊಡಗಿನ ಸೊಬಗು’ ಪ್ಯಾಕೇಜ್‌ನಲ್ಲಿ ಓಂಕಾರೇಶ್ವರ ದೇವಸ್ಥಾನ, ಹಾರಂಗಿ ಜಲಾಶಯ/ಆನೆ ಕ್ಯಾಂಪ್, ಗೋಲ್ಡನ್ ಟೆಂಪಲ್, ಕಾವೇರಿ ನಿಸರ್ಗಧಾಮ, ಕಾಫಿ ಪ್ಲಾಂಟೇಶನ್, ಅಬ್ಬಿ ಜಲಪಾತ ಹಾಗೂ ರಾಜಾಸೀಟುಗಳನ್ನು ವೀಕ್ಷಿಸಬಹುದಾಗಿದೆ.
ಎರಡೂ ಪ್ಯಾಕೇಜ್‌ಗಳ ಪ್ರವಾಸಕ್ಕೆ ವಯಸ್ಕರಿಗೆ ರೂ.400 ಹಾಗೂ ಮಕ್ಕಳಿಗೆ ರೂ.300 ಪ್ರಯಾಣ ದರ ನಿಗದಿಪಡಿಸಲಾಗಿದೆ. ಈ ದರದಲ್ಲಿ ಊಟೋಪಚಾರ ಹಾಗೂ ವಿವಿಧ ಪ್ರವಾಸಿ ತಾಣಗಳ ಪ್ರವೇಶ ಶುಲ್ಕಗಳು ಒಳಗೊಂಡಿರುವುದಿಲ್ಲ.
ಕರ್ನಾಟಕ ಸಾರಿಗೆ ಬಸ್‌ಗಳ ಮೂಲಕ ಈ ಪ್ರವಾಸ ಸೇವೆ ಕಾರ್ಯಾಚರಣೆಗೊಳ್ಳಲಿದ್ದು, ಪ್ರವಾಸಿಗರ ಅನುಕೂಲಕ್ಕಾಗಿ ಮುಂಗಡ ಬುಕ್ಕಿಂಗ್ ವ್ಯವಸ್ಥೆಯನ್ನೂ ಕಲ್ಪಿಸಲಾಗಿದೆ. ಕೆಎಸ್‌ಆರ್‌ಟಿಸಿ ವೆಬ್‌ಸೈಟ್ ಮೂಲಕ ಮುಂಗಡ ಆಸನ ಕಾಯ್ದಿರಿಸಬಹುದಾಗಿದೆ.
ಮಡಿಕೇರಿ ದಸರಾ ಹಿನ್ನೆಲೆಯಲ್ಲಿ ಕೊಡಗಿನ ಪ್ರಮುಖ ಪ್ರವಾಸಿ ತಾಣಗಳನ್ನು ಒಂದೇ ದಿನದಲ್ಲಿ ವೀಕ್ಷಿಸಲು ಅನುಕೂಲವಾಗುವಂತೆ ಈ ವಿಶೇಷ ಪ್ಯಾಕೇಜ್ ಪ್ರವಾಸವನ್ನು ರೂಪಿಸಲಾಗಿದ್ದು, ಸಾರ್ವಜನಿಕ ಪ್ರಯಾಣಿಕರು ಇದರ ಸೌಲಭ್ಯವನ್ನು ಸದುಪಯೋಗಪಡಿಸಿಕೊಳ್ಳುವಂತೆ ಪುತ್ತೂರು ವಿಭಾಗದ ಕೆಎಸ್‌ಆರ್‌ಟಿಸಿ ವಿಭಾಗೀಯ ನಿಯಂತ್ರಣಾಧಿಕಾರಿ ತಿಳಿಸಿದ್ದಾರೆ.
















