ಮಡಿಕೇರಿ, NEWS DESK ಅ. 9: ಸಮಸ್ತ ಮೊಬೈಲ್ ಆ್ಯಪ್ನಲ್ಲಿನ ತಾಂತ್ರಿಕ ಸಮಸ್ಯೆಗಳನ್ನು ಪರಿಹರಿಸುವುದು, ಸೂಕ್ತ ತರಬೇತಿ ನೀಡುವುದು ಹಾಗೂ ಪ್ರೋತ್ಸಾಹಧನ ಒದಗಿಸುವುದು ಸೇರಿದಂತೆ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ಕರ್ನಾಟಕ ರಾಜ್ಯ ಸಂಯುಕ್ತ ಆಶಾ ಕಾರ್ಯಕರ್ತೆಯರ ಸಂಘದ ಕೊಡಗು ಜಿಲ್ಲಾ ಸಮಿತಿ ವತಿಯಿಂದ ಮಡಿಕೇರಿಯ ಜಿಲ್ಲಾಧಿಕಾರಿಗಳ ಕಚೇರಿ ಎದುರು ಪ್ರತಿಭಟನೆ ನಡೆಯಿತು.
ಆಲ್ ಇಂಡಿಯಾ ಯುನೈಟೆಡ್ ಟ್ರೇಡ್ ಯೂನಿಯನ್ ಸೆಂಟರ್ಗೆ ಸಂಯೋಜಿತವಾಗಿರುವ ಸಂಘದ ನೇತೃತ್ವದಲ್ಲಿ ನಡೆದ ಪ್ರತಿಭಟನೆಯಲ್ಲಿ ಪಾಲ್ಗೊಂಡ ಆಶಾ ಕಾರ್ಯಕರ್ತೆಯರು, ತಮ್ಮ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ಜಿಲ್ಲಾಡಳಿತದ ಮೂಲಕ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಿದರು.
ಸಮಸ್ತ ಆ್ಯಪ್ ಮೂಲಕ ಕಾರ್ಯನಿರ್ವಹಿಸುವುದನ್ನು ಕಡ್ಡಾಯಗೊಳಿಸಲಾಗಿದ್ದರೂ, ಆಶಾ ಕಾರ್ಯಕರ್ತೆಯರಿಗೆ ಅಗತ್ಯ ಗುಣಮಟ್ಟದ ಮೊಬೈಲ್ ಸಾಧನಗಳನ್ನು ಇಲಾಖೆ ಉಚಿತವಾಗಿ ಒದಗಿಸಿಲ್ಲ. ಅಲ್ಲದೆ, ಸ್ವಂತ ಮೊಬೈಲ್ ಬಳಕೆಗೆ ನೀಡಲಾಗುತ್ತಿದ್ದ ಮಾಸಿಕ 280 ರೂ. ಬಾಡಿಗೆಯನ್ನೂ ಸ್ಥಗಿತಗೊಳಿಸಲಾಗಿದೆ ಎಂದು ಪ್ರತಿಭಟನಾಕಾರರು ಅಸಮಾಧಾನ ವ್ಯಕ್ತಪಡಿಸಿದರು. ಆ್ಯಪ್ನಲ್ಲಿ ಮಾಹಿತಿ ದಾಖಲಿಸುವುದಕ್ಕೆ ಸೂಕ್ತ ಪ್ರೋತ್ಸಾಹಧನ ನಿಗದಿಪಡಿಸುವುದರ ಜೊತೆಗೆ ಅಗತ್ಯ ತಾಂತ್ರಿಕ ತರಬೇತಿ ನೀಡಬೇಕು ಎಂದು ಆಗ್ರಹಿಸಿದರು.
ಆಗಸ್ಟ್ ತಿಂಗಳಲ್ಲಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ, ಸೂಕ್ತ ತರಬೇತಿ ಹಾಗೂ ಪ್ರೋತ್ಸಾಹಧನ ನೀಡುವವರೆಗೆ ಆಶಾ ಕಾರ್ಯಕರ್ತೆಯರ ಮೇಲೆ ಒತ್ತಡ ಹೇರದಂತೆ ಕ್ಷೇತ್ರಮಟ್ಟದ ಅಧಿಕಾರಿಗಳಿಗೆ ಸೂಚಿಸಲು ತಿಳಿಸಲಾಗಿತ್ತು. ಆದರೂ ಸಮಸ್ಯೆಗಳಿಗೆ ಪರಿಹಾರ ದೊರೆಯದೆ ಕೆಲಸದ ಒತ್ತಡ ಮುಂದುವರಿದಿದೆ ಎಂದು ಸಂಘದ ಪದಾಧಿಕಾರಿಗಳು ಆರೋಪಿಸಿದರು.
ಕಳೆದ ಒಂದು ವರ್ಷದಿಂದ ಗೌರವಧನ ಮತ್ತು ಪ್ರೋತ್ಸಾಹಧನ ನಿಗದಿತ ಸಮಯಕ್ಕೆ ಪಾವತಿಯಾಗುತ್ತಿಲ್ಲ. ಇದರಿಂದ ಆಶಾ ಕಾರ್ಯಕರ್ತೆಯರು ಆರ್ಥಿಕ ಸಂಕಷ್ಟ ಎದುರಿಸುವಂತಾಗಿದೆ. ಕಳೆದ ಒಂಬತ್ತು ವರ್ಷಗಳಲ್ಲಿ ಗೌರವಧನ ಕೇವಲ 1,500 ರೂ. ಹೆಚ್ಚಳವಾಗಿದ್ದು, ಬೆಲೆ ಏರಿಕೆಗೆ ಅನುಗುಣವಾಗಿ ಗೌರವಧನ ಹೆಚ್ಚಿಸಿಲ್ಲ ಎಂದು ಅವರು ಅಸಮಾಧಾನ ವ್ಯಕ್ತಪಡಿಸಿದರು.
ಮಾಸಿಕ 15 ಸಾವಿರ ರೂ. ಗೌರವಧನಕ್ಕೆ ಆಗ್ರಹ
ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಗೌರವಧನ ಹಾಗೂ ಪ್ರೋತ್ಸಾಹಧನ ಸೇರಿ ಆಶಾ ಕಾರ್ಯಕರ್ತೆಯರಿಗೆ ಮಾಸಿಕ 15,000 ರೂ. ನೀಡಬೇಕು. ಉತ್ತಮ ಗುಣಮಟ್ಟದ ಮೊಬೈಲ್ಗಳನ್ನು ಒದಗಿಸಿ ಸಮಸ್ತ ಆ್ಯಪ್ನಲ್ಲಿನ ತಾಂತ್ರಿಕ ಸಮಸ್ಯೆಗಳನ್ನು ತಕ್ಷಣ ಪರಿಹರಿಸಬೇಕು. ಕೊಡಗು ಜಿಲ್ಲೆಯ ಎಲ್ಲ ಬಾಕಿ ಪ್ರೋತ್ಸಾಹಧನವನ್ನು ಬಿಡುಗಡೆ ಮಾಡಬೇಕು ಹಾಗೂ ಆರ್ಸಿಎಚ್ ಪೋರ್ಟಲ್ ಮೂಲಕ ಪ್ರೋತ್ಸಾಹಧನ ಪಾವತಿಯಲ್ಲಿ ಉಂಟಾಗಿರುವ ಸಮಸ್ಯೆಗಳನ್ನು ಬಗೆಹರಿಸಬೇಕು ಎಂದು ಒತ್ತಾಯಿಸಿದರು.
ಟಿಬಿ, ಟಿಬಿಐ, ಎನ್ಸಿಡಿ ಸೇರಿದಂತೆ ವಿವಿಧ ಘಟಕಗಳ ಬಾಕಿ ಪ್ರೋತ್ಸಾಹಧನವನ್ನು ಪಾವತಿಸಬೇಕು. ಹತ್ತು ವರ್ಷ ಸೇವೆ ಸಲ್ಲಿಸಿ ಕೆಲಸ ತೊರೆದ ಅಥವಾ ನಿವೃತ್ತರಾದ ಆಶಾ ಕಾರ್ಯಕರ್ತೆಯರಿಗೆ ನಿಯಮಾನುಸಾರ ಇಡಿಗಂಟು ನೀಡಬೇಕು ಎಂಬ ಬೇಡಿಕೆಗಳನ್ನೂ ಮುಂದಿಟ್ಟರು.
ಇದಲ್ಲದೆ, ಆಶಾ ಕಾರ್ಯಕರ್ತೆಯರನ್ನು ಕಫ ಸಂಗ್ರಹಿಸಿ ತರುವಂತೆ ಒತ್ತಾಯಿಸುವುದನ್ನು ತಡೆಯಬೇಕು. ಜಿಪಿಎಸ್ ಲೊಕೇಶನ್ ದಾಖಲಿಸುವಂತೆ ಒತ್ತಡ ಹೇರಬಾರದು. ಪ್ರತಿ ತಿಂಗಳು ಪಾವತಿ ವಿವರಗಳ ಪ್ರತಿಗಳನ್ನು ಒದಗಿಸಬೇಕು ಹಾಗೂ ಗೌರವಧನ ಮತ್ತು ಪ್ರೋತ್ಸಾಹಧನದ ಸಂಪೂರ್ಣ ವಿವರಗಳನ್ನು ಸಂಘಕ್ಕೆ ನೀಡಬೇಕು ಎಂದು ಮನವಿ ಪತ್ರದಲ್ಲಿ ಆಗ್ರಹಿಸಲಾಯಿತು.
ಪ್ರತಿಭಟನೆಯಲ್ಲಿ ಕರ್ನಾಟಕ ರಾಜ್ಯ ಸಂಯುಕ್ತ ಆಶಾ ಕಾರ್ಯಕರ್ತೆಯರ ಸಂಘದ ಜಿಲ್ಲಾ ಸಮಿತಿ ಉಪಾಧ್ಯಕ್ಷೆ ನಾಗಮಣಿ, ರಾಜ್ಯ ಉಪಾಧ್ಯಕ್ಷೆ ಉಮಾದೇವಿ ಸೇರಿದಂತೆ ಜಿಲ್ಲಾ ಹಾಗೂ ತಾಲ್ಲೂಕು ಸಮಿತಿಯ ಪದಾಧಿಕಾರಿಗಳು ಪಾಲ್ಗೊಂಡಿದ್ದರು.
ಫೋಟೋ ಶೀರ್ಷಿಕೆ: ಸಮಸ್ತ ಆ್ಯಪ್ನ ತಾಂತ್ರಿಕ ಸಮಸ್ಯೆಗಳನ್ನು ಪರಿಹರಿಸುವುದು ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಮಡಿಕೇರಿಯ ಜಿಲ್ಲಾಧಿಕಾರಿಗಳ ಕಚೇರಿ ಎದುರು ಆಶಾ ಕಾರ್ಯಕರ್ತೆಯರು ಪ್ರತಿಭಟನೆ ನಡೆಸಿದರು.

















